ತಾಟಿನಿಂಗ್ ಬೆಳೆಗಾರರಿಗೆ ಲಾಕ್ ಡೌನ್ ಹೊಡೆತ

Update: 2020-04-30 05:59 GMT

ಬೆಂಗಳೂರು, ಎ.29: ಕೊರೋನ ಲಾಕ್ ಡೌನ್  ಹಿನ್ನೆಲೆಯಲ್ಲಿ ಜನರಿಗೆ ಬೇಸಿಗೆ ಕಾಲದಲ್ಲಿ ತಂಪು ನೀಡುವ ತಾಟಿನಿಂಗ್ ಗೆ ಭಾರಿ ಹೊಡೆತ ಬಿದ್ದಿದೆ.

ಹೆಚ್ಚಿನ ಕೊಲೆಸ್ಟ್ರಾಲ್ ಹಾಗೂ ಹೇರಳ ಪೌಷ್ಟಿಕಾಂಶಗಳನ್ನು ಹೊಂದಿರುವ ತಾಟಿನಿಂಗ್ ಬೇಸಿಗೆಯಲ್ಲಿ ಅತ್ಯಧಿಕವಾಗಿ ಮಾರುಕಟ್ಟೆಗೆ ಲಗ್ಗೆಯಿಡುತ್ತದೆ. ಸಾಮಾನ್ಯವಾಗಿ ಈ ತಾಟಿನಿಂಗ್ ತಮಿಳುನಾಡಿನಿಂದ ಹೆಚ್ಚು  ಸರಬರಾಜಾಗುತ್ತಿತ್ತು. ಈ ಬಾರಿ ತಾಟಿನಿಂಗ್ ಅನ್ನು ಕೀಳದೆ ನೀರಾ ಇಳಿಸುತ್ತಿದ್ದು, ನೀರಾ ಮದ್ಯ, ತಾಟಿ ಬೆಲ್ಲ, ಪಾನೀಯಗಳನ್ನು ತಯಾರಿಸಲು ಮುಂದಾಗಿದ್ದಾರೆ.

ತಾಟಿನಿಂಗ್ ನಲ್ಲಿ ಆರೋಗ್ಯಕರ ವಿಟಮಿನ್ ಗಳು ಹಾಗೂ ರುಚಿಕರ ಮತ್ತು ಸಿಹಿಯಾಗಿರುವುದರ ಜತೆಗೆ ಬಿಸಿಲಲ್ಲಿ ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿಡಲು ಇದು ಸಹಕಾರಿಯಾಗುತ್ತದೆ. ಇದರಿಂದಾಗಿಯೇ ಬೇಡಿಕೆ ಹೆಚ್ಚು. ಕರ್ನಾಟಕದಲ್ಲಿ ತಾಟಿನಿಂಗ್ ಬೆಳೆಯ ಪ್ರಮಾಣ ತುಂಬಾ ಕಡಿಮೆ. ತಾಟಿನಿಂಗ್ಅನ್ನು ತಮಿಳುನಾಡಿನಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ನಂತರದ ಸ್ಥಾನದಲ್ಲಿ ಆಂಧ್ರಪ್ರದೇಶವಿದೆ. ಕೇರಳದಲ್ಲ್ಲಿಯೂ ಸ್ವಲ್ಪಮಟ್ಟಿಗೆ  ಬೆಳೆಯಲಾಗುತ್ತದೆ. ಇದಲ್ಲದೆ ಕರ್ನಾಟಕದ ಕರಾವಳಿ ಭಾಗಗಳಲ್ಲಿ ಅಲ್ಲಲ್ಲಿ ಕೆಲವು ಮರಗಳಿವೆ.

ಬೇಸಿಗೆ ಬೆಳೆಯಾದ ಇದು, ಎಳೆನೀರಿಗೆ ಪರ್ಯಾಯ ಹಾಗೂ ಅದರಷ್ಟೇ ಆರೋಗ್ಯಕ್ಕೆ ಹಿತಕಾರಿ ಗುಣಗಳನ್ನೊಳಗೊಂಡಿದೆ. ಹೀಗಾಗಿ ತಾಟಿನಿಂಗ್ (ಪಾಮೀರಾ ಪಾಮ್) ಎಲ್ಲರಿಗೂ ಇಷ್ಟ. ಇದರ ಬೇಡಿಕೆಯನ್ನರಿತ ವ್ಯಾಪಾರಿಗಳು ಪ್ರಮುಖ ಮಾರುಕಟ್ಟೆಗಳಲ್ಲಿ ಮಾತ್ರವಲ್ಲ, 'ತಾಟಿನಿಂಗ್.... ತಾಟಿನಿಂಗ್' ಎಂದು ಕೂಗುತ್ತ ತಳ್ಳುಗಾಡಿಗಳ ಮೇಲೆ ಗಲ್ಲಿ ಗಲ್ಲಿಗಳಲ್ಲಿ ಮಾರುತ್ತಾರೆ. ಈ ಬಾರಿ ಇಂತಹ ಚಿತ್ರಣ ಕಾಣುತ್ತಿಲ್ಲ.

ಸಣ್ಣಗಾತ್ರದ ಎಳನೀರಿನಂತೆ ಕಾಣುವ ಇದೊಂದು ಹಣ್ಣು. ಇದನ್ನು ಕತ್ತರಿಸಿದಾಗ ಒಳಗಡೆ ಕೊಬ್ಬರಿಯಂತಹ ಮೂರು ಹಾಗೂ ಅದಕ್ಕೂ ಹೆಚ್ಚು ಸುವಾಸನೆ ಭರಿತ ತೊಳೆಗಳಿರುತ್ತವೆ. ಅದರೊಳಗೆ ಸಿಹಿಯಾದ ನೀರಿರುತ್ತದೆ. ತೊಳೆಗಳು ಎಳನೀರಿನಲ್ಲಿನ ತಿಳಿ ಗಂಜಿಯನ್ನು ತಿಂದ ಅನುಭವವಾಗುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಹೆಚ್ಚು ಜನ ಇದನ್ನು ಇಷ್ಟಪಡುತ್ತಾರೆ. ಸಗಟು ದರದಲ್ಲಿ 4-5 ರೂ. ರೂ.ಗೆ ಹಣ್ಣು ಸಿಕ್ಕರೆ, ಚಿಲ್ಲರೆ ವ್ಯಾಪಾರಿಗಳು ಪ್ರತಿ ಹಣ್ಣಿಗೆ 15-20 ರೂ.ನಂತೆ ಮಾರುತ್ತಾರೆ.

ಹೇರಳ ಖನಿಜಾಂಶ: ಎಸಳುಗಳಲ್ಲಿ ಸಾಕಷ್ಟು ಪ್ರಮಾಣದ ಶರ್ಕರ, ರಂಜಕ, ಕಬ್ಬಿಣ, ವಿಟಮಿನ್ ಸಿ ಅಂಶ ಒಳಗೊಂಡಿದೆ. ತಾಜಾ ಹಣ್ಣುಗಳು ಎಳೆ ನೀರಿಗೆ ಪರ್ಯಾಯವಾಗಿ ಸೇವಿಸಲಾಗುವುದು. ತಾಟಿನಿಂಗ್ ಗಿಡದಿಂದ ಸಂಗ್ರಹಿಸಿದ ನೀರಾವನ್ನು 'ಪದನೀರ' ಎಂದು ಕರೆಯುತ್ತಾರೆ. ಇದು ನೀರಿನಂತೆ ಪಾರದರ್ಶಕವಾಗಿದ್ದು, ಸುಗಂಧಭರಿತ ಸಿಹಿಯಾದ ಪಾನೀಯವಾಗಿದೆ. ಇದರಲ್ಲಿ ಶೇ.40-50ರಷ್ಟು ಸಕ್ಕರೆ ಅಂಶ, ವಿಟಮಿನ್ ಸಿ, ಬಿ-ಕಾಂಪ್ಲೆಕ್ಸ್ ಮತ್ತು ಸಾಕಷ್ಟು ಅಮೈನೊ ಆಸಿಡ್ಗಳನ್ನು ಒಳಗೊಂಡಿದೆ. ತಾಜಾ ನೀರಾವನ್ನು ಕುಡಿಯಬಹುದು. ಹೂ ಗೊಂಚಲುಗಳಿಂದ ದ್ರವ ಪದಾರ್ಥವನ್ನು ಕೊಯ್ಲು ಮಾಡುವುದಕ್ಕೆ ನೀರಾ ಇಳಿಸುವುದು ಎನ್ನುತ್ತಾರೆ.

ಈ ಹಿಂದೆ ಬೇಸಿಗೆ ಕಾಲದಲ್ಲಿ ತಾಟಿನಿಂಗ್ಅನ್ನು ಕೊಂಡುಕೊಂಡು ಬಂದುಗಲ್ಲಿ ಗಲ್ಲಿಗಳಲ್ಲಿ, ನಗರದ ಮುಖ್ಯ ರಸ್ತೆಗಳಲ್ಲಿ ಮಾರಾಟ ಮಾಡುತ್ತಿದ್ದೆವು. ಒಂದು ಕಾಯಿಗೆ 25-30 ಮಾರಾಟ ಮಾಡುತ್ತಿದ್ದೆವು. ಅದರಿಂದ ದಿನಕ್ಕೆ 500-600 ರೂ.ಗಳಿಗೆ ಮಾರುತ್ತಿದ್ದೆವು. ಆದರೆ, ಲಾಕ್ಡೌನ್ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟಿಲ್ಲದಿದ್ದರಿಂದ ಮಾರಾಟವೂ ಇಲ್ಲದಂತಾಗಿದೆ.

-ರಾಮಾಂಜಪ್ಪ, ತಾಟನಿಂಗ್ ಮಾರಾಟಗಾರ

ಸಂಸ್ಕರಿಸಿದ ಪದಾರ್ಥಗಳು

ತಾಟಿನಿಂಗ್ನಿಂದ ಮದ್ಯಪಾನೀಯ, ತಾಟಿ ಬೆಲ್ಲ (ಪಾಮೀರಾ ಪಾಮ್ ಬೆಲ್ಲ), ತಾಟಿ ಸಕ್ಕರೆ, ಪಾಮ್ ಕೋಲಾಗಳನ್ನು ಸಂಸ್ಕರಿಸಲಾಗುತ್ತದೆ. ಲಘು ಪೇಯಗಳಂತೆ ನಾನಾ ಸುವಾಸನೆಯುಳ್ಳ ತಂಪು ಪಾನೀಯವಾಗಿಯೂ ಬಳಸಲಾಗುವುದು. ಗಿಡದ ಬೇರಿನ ಗಡ್ಡೆಗಳನ್ನು ಕೂಡ ಗೆಣಸಿಗೆ ಪರ್ಯಾಯವಾಗಿ ಸೇವಿಸುತ್ತಾರೆ ಎಂದು ತಜ್ಞರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಟಿನಿಂಗ್ ನ ವೈಜ್ಞಾನಿಕ ಹೆಸರು ಬೊರಾಸಸ್ ಫ್ಲ್ಯಾಬೆಲ್ಲಿಫರ್. ತಾಟಿನಿಂಗ್ ನಲ್ಲಿ ಗಂಡು ಮತ್ತು ಹೆಣ್ಣು ಗಿಡಗಳು ಬೇರೆ ಬೇರೆಯಾಗಿರುತ್ತವೆ. ಇವುಗಳ ಪಾಲಿನೇಷನ್ ಮೂಲಕ ಫಸಲು ನೀಡುತ್ತದೆ. ಸಂಶೋಧನೆ ತಳಿಗಳೂ ಇವೆ.

-ಡಾ. ಎಸ್.ವಿ. ಹಿತ್ತಲಮನಿ, ನಿವೃತ್ತ ತೋಟಗಾರಿಕೆ ತಜ್ಞ

ಕಪ್ಪು ಮತ್ತು ಕೆಂಪು ಹಣ್ಣುಗಳಾಗಿ ಗುರುತಿಸಲಾಗುತ್ತದೆ. ಇದು ನಿಧಾನವಾಗಿ ಬೆಳೆಯುವ ಬೆಳೆಯಾಗಿದ್ದು, 12-18 ಮೀಟರ್ ವರೆಗೆ ಎತ್ತರ ಬೆಳೆಯುತ್ತದೆ. ಎಲೆಗಳು, ಬೀಸಣಿಕೆಯಂತೆ ಅಗಲವಾಗಿರುತ್ತವೆ. ನಾಟಿ ಮಾಡಿದ 13-15 ವರ್ಷದ ನಂತರ ಹೂ ಬಿಡಲು ಪ್ರಾರಂಭಿಸುತ್ತದೆ. ಪ್ರತಿಗಿಡದಿಂದ ಸರಾಸರಿ 100-200 ಲೀಟರ್ ನಷ್ಟು ನೀರಾವನ್ನು ಸುಮಾರು ಐದು ತಿಂಗಳಲ್ಲಿ (ಜನವರಿ-ಮೇ) ಸಂಸ್ಕರಿಸಬಹುದು.

Writer - ಬಾಬುರೆಡ್ಡಿ ಚಿಂತಾಮಣಿ

contributor

Editor - ಬಾಬುರೆಡ್ಡಿ ಚಿಂತಾಮಣಿ

contributor

Similar News