ವಕೀಲರಿಗೆ ಆರ್ಥಿಕ ನೆರವಿಗೆ ಕೋರಿಕೆಯನ್ನು ತಳ್ಳಿ ಹಾಕಿದ ಸರ್ವೋಚ್ಚ ನ್ಯಾಯಾಲಯ

Update: 2020-04-30 15:39 GMT

ಹೊಸದಿಲ್ಲಿ, ಎ.30: ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಆರ್ಥಿಕ ನೆರವಿನ ಅಗತ್ಯವುಳ್ಳ ಮತ್ತು ಕಠಿಣ ಸಮಯವನ್ನು ಎದುರಿಸುತ್ತಿರುವ ಸ್ವತಂತ್ರ ವಕೀಲರಿಗೆ ನೆರವಾಗಲು ತುರ್ತು ನಿಧಿಯೊಂದನ್ನು ಸ್ಥಾಪಿಸುವ ಬಗ್ಗೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ಪರಿಶೀಲಿಸಬಹುದಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಗುರುವಾರ ಹೇಳಿತು.

ಲಾಕ್‌ಡೌನ್‌ನಿಂದಾಗಿ ನ್ಯಾಯಾಲಯಗಳು ಮತ್ತು ನ್ಯಾಯಾಧಿಕರಣಗಳು ಮುಚ್ಚಿರುವುದರಿಂದ ವಕೀಲ ವೃತ್ತಿಯನ್ನು ಹೊರತುಪಡಿಸಿ ಇತರ ಯಾವುದೇ ಆದಾಯ ಮೂಲವಿರದ ಸ್ವತಂತ್ರ ವಕೀಲರಿಗೆ ಆರ್ಥಿಕ ನೆರವು ಕೋರಿ ನ್ಯಾಯವಾದಿಗಳಾದ ಪವನ ಪ್ರಕಾಶ್ ಪಾಠಕ್ ಮತ್ತು ಅಲೋಕ್ ಸಿಂಗ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಕೈಗೆತ್ತಿಕೊಂಡಿದ್ದ ನ್ಯಾ.ಎನ್.ವಿ.ರಮಣ ನೇತೃತ್ವದ ಪೀಠವು, ದುರದೃಷ್ಟವಶಾತ್ ಇಂದು ಇಡೀ ದೇಶವೇ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ ಮತ್ತು ವಕೀಲರೂ ಅದರ ಭಾಗವಾಗಿದ್ದಾರೆ. ಹೀಗಿರುವಾಗ ವಕೀಲರಿಗಾಗಿ ವಿಶೇಷ ನಿಧಿಯ ಸ್ಥಾಪನೆಗೆ ತಾನು ನಿರ್ದೇಶವನ್ನು ಹೊರಡಿಸಲು ಸಾಧ್ಯವಿಲ್ಲ ಎಂದು ತಿಳಿಸಿತು.

ಕೆಲವು ಬಾರ್ ಕೌನ್ಸಿಲ್‌ಗಳು ಈ ವಿಷಯವನ್ನು ಕೈಗೆತ್ತಿಕೊಂಡಿದ್ದು,ಸ್ವತಂತ್ರ ವಕೀಲರಿಗೆ ನೆರವಾಗಲೂ ನಿರ್ಧರಿಸಿವೆ ಎಂದು ಬೆಟ್ಟು ಮಾಡಿದ ಪೀಠವು, ಇದು ಬಿಸಿಐ ಪರಿಶೀಲಿಸಬೇಕಾದ ವಿಷಯವಾಗಿದೆ ಎಂದು ಅರ್ಜಿದಾರರಿಗೆ ತಿಳಿಸಿತು.

ವಕೀಲರ ಕಾಯ್ದೆಯನ್ನು ಪ್ರಸ್ತಾಪಿಸಿದ ಪಾಠಕ್,ವಕೀಲರ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವುದು ಬಿಸಿಐ ಹೊಣೆಗಾರಿಕೆಯಾಗಿದೆ. ಲಾಕ್‌ಡೌನ್‌ನ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಮತ್ತು ಭವಿಷ್ಯದಲ್ಲಿ ವಕೀಲರ ಹಿತರಕ್ಷಣೆಗಾಗಿ ಕ್ರಮವನ್ನು ಕೈಗೊಳ್ಳಲು ಬಿಸಿಐಗೆ ಸರ್ವೋಚ್ಚ ನ್ಯಾಯಾಲಯವು ನಿರ್ದೇಶ ನೀಡಬಹುದು ಎಂದು ವಾದಿಸಿದರು.

 ಹಣಕಾಸು ನೆರವು ತೀರ ಅಗತ್ಯವಾಗಿರುವ ಸ್ವತಂತ್ರ ವಕೀಲರಿಗೆ ನೆರವಾಗಲು ನಿರ್ದಿಷ್ಟ ಕಾಲಮಿತಿಯೊಳಗೆ ಹಣಕಾಸು ವಿತರಣೆಗೆ ನೀತಿಯೊಂದನ್ನು ರೂಪಿಸುವಂತೆ ಬಿಸಿಐ ಮತ್ತು ರಾಜ್ಯಗಳ ಬಾರ್ ಅಸೋಸಿಯೇಷನ್‌ಗಳಿಗೆ ನಿರ್ದೇಶ ನೀಡುವಂತೆಯೂ ಅರ್ಜಿಯಲ್ಲಿ ಕೋರಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News