ಕೊರೋನ ವೈರಸ್: ದೇಶದಲ್ಲಿ ರೋಗಮುಕ್ತರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ
ಹೊಸದಿಲ್ಲಿ, ಎ. 30: ಭಾರತದಲ್ಲಿ ಕೊರೋನ ವೈರಸ್ ಸೋಂಕಿನಿಂದ ಗುಣಮುಖರಾದವರ ಪ್ರಮಾಣದಲ್ಲಿ ಗಣನೀಯ ಹೆಚ್ಚಳವಾಗಿದ್ದು, ಶೇ.25.13 ಕ್ಕೇರಿದೆಯೆಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ. 14 ದಿನಳ ಹಿಂದೆ ಸೋಂಕಿನಿಂದ ಗುಣಮುಖರಾದವರ ಪ್ರಮಾಣ ಶೇ.13ರಷ್ಟಿತ್ತು.
ಈ ಮಧ್ಯೆ ಕೋವಿಡ್-19 ಪ್ರಕರಣಗಳ ದ್ವಿಗುಣಗೊಳ್ಳುವ ಅವಧಿಯಲ್ಲೂ ಅಂತರ ಹೆಚ್ಚಾಗಿರುವುದಾಗಿ ಅದು ಹೇಳಿದೆ. ಲಾಕ್‌ಡೌನ್ ಹೇರಿಕೆಗೆ ಮುನ್ನ 3.4 ದಿನಗಳಿಗೆ ಸೋಂಕಿನ ಪ್ರಕರಣಗಳು ದ್ವಿಗುಣಗೊಳ್ಳುತ್ತಿದ್ದರೆ, ಲಾಕ್‌ಡೌನ್ ಆನಂತರ 11 ದಿನಗಳಿಗೆ ದ್ವಿಗುಣಗೊಂಳ್ಳುತ್ತಿರುವುದಾಗಿ ಆರೋಗ್ಯ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಈವರೆಗೆ 8324 ರೋಗಿಗಳು ಚೇತರಿಸಿಕೊಂಡಿದ್ದಾರೆ. ಕಳೆದ 24 ತಾಸುಗಳಲ್ಲಿ ಕೊರೋನಾ ವೈರಸ್ ಸೋಂಕಿನ 1718 ಹೊಸ ಪ್ರಕರಣಗಳು ವರದಿಯಾಗದ್ದು, ಇದರೊಂದಿಗೆ ದೇಶಾದ್ಯಂತ ಸೋಂಕಿತರ ಸಂಖ್ಯೆ 33,050ಕ್ಕೇರಿದೆ ಹಾಗೂ ಮೃತರ ಸಂಖ್ಯೆ 1074ಕ್ಕೆ ತಲುಪಿದೆ.
ಭಾರತದಲ್ಲಿ ಪ್ರಸಕ್ತ ಕೊರೋನದಿಂದ ಸಂಭವಿಸಿರುವ ಸಾವಿನ ಪ್ರಮಾಣವು ಶೇ.3.2 ಆಗಿದೆ. ಮೃತರಲ್ಲಿ ಶೇ.65 ಮಂದಿ ಪುರುಷರಾಗಿದ್ದರೆ, ಶೇ.35 ಮಹಿಳೆಯರು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ದಿಲ್ಲಿ,ಉ.ಪ್ರ.,ಜಮ್ಮು ಹಾಗೂ ಕಾಶ್ಮೀರ, ಒಡಿಶಾ, ರಾಜಸ್ಥಾನ, ತಮಿಳುನಾಡು ಹಾಗೂ ಪಂಜಾಬ್‌ಗಳಲ್ಲಿ ಕಳೆದ 11-20 ದಿನಗಳ ನಡುವೆ ಕೋವಿಡ್-19 ಪ್ರಕರಣಗಳ ದ್ವಿಗುಣ ದರದಲ್ಲಿ ಏರಿಕೆಯಾಗಿದೆಯೆಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಹೇಳಿದ್ದಾರೆ. ದಿಲ್ಲಿ, ಉ.ಪ್ರ., ಜಮ್ಮುಕಾಶ್ಮೀರ, ಒಡಿಶಾ, ರಾಜಸ್ಥಾನ, ತಮಿಳುನಾಡು ಹಾಗೂ ಪಂಜಾಬ್‌ಗಳಲ್ಲಿ 11ರಿಂದ 20 ದಿನಗಳ ಅಂತರದಲ್ಲಿ ಸೋಂಕಿನ ದ್ವಿಗುಣಗೊಳ್ಳುವಿಕೆಯು ಕಂಡುಬಂದಿದೆಯೆಂದು ಅವರು ತಿಳಿಸಿದ್ದಾರೆ.
ಕರ್ನಾಟಕ, ಲಡಾಕ್, ಹರ್ಯಾಣ, ಉತ್ತರಖಂಡ ಹಾಗೂ ಕೇರಳ ರಾಜ್ಯಗಳಲ್ಲಿ ದ್ವಿಗುಣಗೊಳ್ಳುವಿಕೆ ದರವು 20ರಿಂದ 40 ದಿನಗಳಾಗಿವೆ ಎಂದು ಅವರು ತಿಳಿಸಿದರು.
ಮಾರ್ಚ್ 25ರಿಂದೀಚೆಗೆ ಹೇರಲಾಗಿರುವ ಲಾಕ್‌ಡೌನ್‌ನಿಂದಾಗಿ ಕೊರೋನಾ ವೈರಸ್ ಸೋಂಕಿನ ಹರಡುವಿಕೆಯು ಸ್ಫೋಟಕ ಸ್ವರೂಪವನ್ನು ತಾಳುವುದನ್ನು ತಡೆಗಟ್ಟಲು ಸಾಧ್ಯವಾಗಿದೆಯೆಂದು ಆರೋಗ್ಯ ಸಚಿವಾಲಯ ಅಭಿಪ್ರಾಯಿಸಿದೆ.
ಆದಾಗ್ಯೂ ಮಹಾನಗರಗಳಾದ ದಿಲ್ಲಿ, ಮುಂಬೈ ಹಾಗೂ ಹೈದರಾಬಾದ್‌ಗಳಲ್ಲಿ ಕೊರೋನಾ ವೈರಸ್‌ನ ಗರಿಷ್ಠ ಪ್ರಕರಣಗಳು ವರದಿಯಾಗುತ್ತಿದ್ದು, ಸೋಂಕು ರೋಗವು ಕಡಿಮೆಗೊಳ್ಳುವ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲವೆಂದು ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.