ಲಾಕ್‍ಡೌನ್ ತಂದಿಟ್ಟ ಸಂಕಷ್ಟ: ಸಹಾಯಧನದಿಂದ ವಂಚಿತರಾಗಲಿದ್ದಾರೆ ಲಕ್ಷಾಂತರ ಮಂದಿ ಕಟ್ಟಡ ಕಾರ್ಮಿಕರು !

Update: 2020-05-01 05:11 GMT

ಬೆಂಗಳೂರು, ಮೇ, 1: ಲಾಕ್‍ಡೌನ್ ಆದ ಮೇಲೆ ಕಟ್ಟಡ ಕಾರ್ಮಿಕರು ಸೇರಿದಂತೆ ಬಹುತೇಕ ಕಾರ್ಮಿಕರು ಕೆಲಸವಿಲ್ಲದೇ ಮನೆಯಲ್ಲಿಯೇ ಕುಳಿತಿದ್ದಾರೆ. ನೋಂದಾಯಿತ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ತಿಂಗಳಿಗೆ ತಲಾ 2 ಸಾವಿರ ರೂ. ನೀಡಲು ರಾಜ್ಯ ಸರಕಾರ ಮುಂದಾಗಿದ್ದರೂ ಲಕ್ಷಾಂತರ ಕಾರ್ಮಿಕರು ಈ ಲಾಭದಿಂದ ವಂಚಿತರಾಗಲಿದ್ದಾರೆ.

ಲಾಕ್‍ಡೌನ್ ಹಿನ್ನೆಲೆಯಲ್ಲಿ ತಲಾ 2 ಸಾವಿರ ರೂ. ಆರ್ಥಿಕ ಸಹಾಯ ಧನ ಬಿಡುಗಡೆ ಮಾಡಲಾಗುವುದು ಎಂದು ರಾಜ್ಯ ಸರಕಾರ ಘೋಷಿಸಿತ್ತು. ಆದರಂತೆ ಇಲ್ಲಿಯವರೆಗೂ ರಾಜ್ಯದಲ್ಲಿರುವ 43 ಲಕ್ಷಕ್ಕೂ ಹೆಚ್ಚಿನ ಕಾರ್ಮಿಕರ ಪೈಕಿ 12.54 ಲಕ್ಷದಷ್ಟು ಕಾರ್ಮಿಕರಿಗೆ ಸಹಾಯ ಧನ ಸಂದಾಯ ಮಾಡಲಾಗಿದೆ. ಉಳಿದ ಕಾರ್ಮಿಕರು ನೋಂದಣಿ ಮಾಡಿಸಲು ಕಚೇರಿಗೆ ಹೋದರೆ ಸಕ್ಷಮ ಅಧಿಕಾರದ ನಿರೀಕ್ಷಕರು ಕಚೇರಿಯಲ್ಲಿ ಸಿಗುವುದಿಲ್ಲ. ಇನ್ನು ಆನ್‍ಲೈನ್‍ನಲ್ಲಿ ನೋಂದಣಿ ಮಾಡಬೇಕೆಂದರೆ ವೆಬ್‍ಸೈಟ್‍ನಲ್ಲಿ ಕಾರ್ಮಿಕ ನಿರೀಕ್ಷಕರು ವಿವರಗಳ ಪಟ್ಟಿಯನ್ನು ಸುಮಾರು 7 ವರ್ಷಗಳಿಂದ ನವೀಕರಿಸಿಯೇ ಇಲ್ಲ. ಹೀಗಾಗಿ ಲಕ್ಷಾಂತರ ಕಾರ್ಮಿಕ ಕುಟುಂಬಗಳು ಸಹಾಯಧನದಿಂದ ವಂಚಿತವಾಗಲಿವೆ.

ಕಟ್ಟಡ ನಿರ್ಮಾಣಕ್ಕೆ ಪ್ರಮುಖವಾಗಿ ಬೇಕಾದ ಹಾರ್ಡ್‍ವೇರ್, ಸಿಮೆಂಟ್ ಅಂಗಡಿಗಳೂ ಬಂದ್ ಆಗಿದ್ದವು. ಮರಳು ಸಿಗುತ್ತಿರಲಿಲ್ಲ. ಈಗ ಹಾರ್ಡ್‍ವೇರ್, ಸಿಮೆಂಟ್ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಅವುಗಳೂ ಇನ್ನು ಪೂರ್ಣ ಪ್ರಮಾಣದಲ್ಲಿ ತೆರೆದಿಲ್ಲ. ಜತೆಗೆ ಮರಳು ಸಿಗದಿರುವುದರಿಂದ ಕಾಮಗಾರಿಗಳ ಆರಂಭಕ್ಕೆ ಮಾಲಕರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಕಟ್ಟಡ ಕಾರ್ಮಿಕರಿಗೆ ಕೆಲಸ, ಸರಕಾರದ ಧನ ಸಹಾಯ ಎರಡೂ ಇಲ್ಲದಂತಾಗಿದೆ.

ನಗರ ಪ್ರದೇಶಗಳಲ್ಲಿರುವ ಖಾಲಿ ನಿವೇಶನಗಳಲ್ಲಿ ತಾತ್ಕಾಲಿಕ ಶೀಟು ಹಾಗೂ ತಟ್ಟಿನ ಗುಡಿಸಲುಗಳನ್ನು ನಿರ್ಮಿಸಿಕೊಂಡು ಬದುಕುವ ಈ ಕುಟುಂಬಗಳಿಗೆ ಸರಕಾರ ನೀಡುವ ಸೌಲಭ್ಯಗಳ ಕುರಿತು ಮಾಹಿತಿಯೇ ಇಲ್ಲ. ಪಡಿತರ ಚೀಟಿಯಿಂದ ಸಿಗುವ ಸೌಲಭ್ಯ ಒಂದೇ ಗೊತ್ತಿರುತ್ತದೆ. ಆದರೆ, ಕೂಲಿ ಅರಸಿಕೊಂಡು ದೂರದ ಹಳ್ಳಿಗಳಿಂದ ಗುಳೆ ಎದ್ದು ನಗರ ಪ್ರದೇಶಗಳಿಗೆ ಬರುವ ಈ ಕಾರ್ಮಿಕರಿಗೆ ಪಡಿತರ ಚೀಟಿಯ ಸೌಲಭ್ಯಗಳು ಕೈ ಬಿಟ್ಟಿವೆ. ಇಂಥವರು ಈಗ ಊರಿಗೂ ಹೋಗುವಂತಿಲ್ಲ, ನಗರಗಳಲ್ಲೂ ಬದುಕುವಂತಿಲ್ಲ ಎಂಬಂತಾಗಿದೆ.

ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 8 ಸಾವಿರ ಕೋಟಿ ರೂ. ಸಂಗ್ರಹವಾಗಿದೆ. ಈ ಹಣವನ್ನು ಬಳಸಿಕೊಂಡು ಕಾರ್ಮಿಕರ ಖಾತೆಗಳಿಗೆ ತಲಾ 2 ಸಾವಿರ ರೂ. ಜಮಾ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೂಚಿಸಿದ್ದರು. ಆದರೆ, ಫಲಾನುಭವಿಗಳ ಖಾತೆಗೆ ನೆರವಿನ ಹಣ ಜಮೆ ಮಾಡಲು ಖಾತೆದಾರರ ಆಧಾರ್ ಜೋಡಣೆ ಹಾಗೂ ಪರಿಶೀಲನೆ ಕಾರ್ಯ ತೆವಳುತ್ತಿರುವುದರಿಂದ ಲಕ್ಷಾಂತರ ಸಂಖ್ಯೆಯ ಕಟ್ಟಡ ಕಾರ್ಮಿಕರ ಖಾತೆಗಳಿಗೆ ಹಣ ದೊರೆಯುತ್ತಿಲ್ಲ.

ನೋಂದಣಿ ಮಾಡಿಸಲು ಹಿಂದೇಟು...

ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಉದ್ಯೋಗದ ಸ್ವರೂಪ ಶಾಶ್ವತವಾಗಿರುವುದಿಲ್ಲ. ಹೀಗಾಗಿ ಈ ಕೂಲಿ ಕಾರ್ಮಿಕರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗದ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ಕಾಯ್ದೆ-1996 ರ ಅಡಿಯಲ್ಲಿ ನೋಂದಾಯಿಸುವ ಗೋಜಿಗೆ ಹೋಗುವುದಿಲ್ಲ. ಕೆಲ ದೊಡ್ಡ ಕಟ್ಟಡ ಕಾಮಗಾರಿಗಳಲ್ಲಿ ಗುತ್ತಿಗೆದಾರರು ವಿವಿಧ ಇಲಾಖೆಗಳಿಂದ ಅನುಮತಿ ಪಡೆಯಲು ಆರಂಭದಲ್ಲಿ ಕೆಲ ಕಾರ್ಮಿಕರನ್ನು ಈ ಕಾಯ್ದೆಯಡಿ ನೋಂದಣಿ ಮಾಡಿಸುತ್ತಾರೆ. ನಂತರ ಬರುವ ದಿನಗಳಲ್ಲಿ ನೇಮಕವಾಗುವ ಹೊಸ ಕಾರ್ಮಿಕರನ್ನು ನೋಂದಣಿ ಮಾಡಿಸದೆ ನಿರ್ಲಕ್ಷಿಸುತ್ತಾರೆ. ಈ ಕಾಯ್ದೆಯನ್ನು ಕಡ್ಡಾಯವಾಗಿ ಜಾರಿಗೆ ತರುವ ಕುರಿತು ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸುವುದಿಲ್ಲ. ಅಲ್ಲದೇ, ಕಾರ್ಮಿಕರನ್ನು ಈ ಕಾಯ್ಡೆಯಡಿ ನೋಂದಣಿ ಮಾಡಿಸಿದರೆ ಪಿಎಫ್ ಹಾಗೂ ಇಎಸ್‍ಐಗೆ ಭರಿಸುವ ಜವಾಬ್ದಾರಿ ಬರಬಹುದು ಎಂಬ ಆತಂಕದಿಂದ ನೋಂದಣಿ ಮಾಡಿಸಲು ಹಿಂದೇಟು ಹಾಕುತ್ತಾರೆ.

ಇಲ್ಲಿಯವರೆಗೆ ಸುಮಾರು 12.54 ಲಕ್ಷ ಕಟ್ಟಡ ಕಾರ್ಮಿಕರಿಗೆ ಸರಕಾರದಿಂದ ಸಹಾಯ ಧನ ಸಂದಾಯವಾಗಿದೆ. ಉಳಿದ ಕಟ್ಟಡ ಕಾರ್ಮಿಕರಿಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಂದ ಪರಿಶೀಲನೆ ಕಾರ್ಯ ಪೂರ್ಣಗೊಂಡ ಬಳಿಕವಷ್ಟೇ ಕೇಂದ್ರ ಕಚೇರಿಯಿಂದಲೇ ನೇರವಾಗಿ ಹಣ ಖಾತೆಗೆ ಜಮೆಯಾಗಲಿದೆ.

-ಶಿವರಾಮ್ ಹೆಬ್ಬಾರ್, ಕಾರ್ಮಿಕ ಸಚಿವ

ಕಾರ್ಮಿಕರಿಗೆ ಗುರುತಿನ ಪತ್ರವನ್ನು ಈ ಹಿಂದೆ ಮ್ಯಾನುವೆಲ್ ಆಗಿ ನೀಡಲಾಗುತ್ತಿತ್ತು. ಈಗ ಆನ್‍ಲೈನ್ ಮಾಡಲಾಗಿದೆ. ಕೆಲವರಷ್ಟೇ ಆನ್‍ಲೈನ್ ನೋಂದಣಿ ಮಾಡಿಸಿದ್ದಾರೆ. ನೋಂದಣಿಗೆ ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಕಡ್ಡಾಯಗೊಳಿಸಲಾಗಿದೆ. ಆದರೆ, ಬಹಳಷ್ಟು ಜನರ ಮೊಬೈಲ್ ನಂಬರ್ ಬದಲಾಗಿರುವುದರಿಂದ ನೋಂದಣಿ ಸಾಧ್ಯವಾಗುತ್ತಿಲ್ಲ.

-ಕೆ. ಮಹಾಂತೇಶ್, ಪ್ರಧಾನ ಕಾರ್ಯದರ್ಶಿ, ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್

Writer - ಯುವರಾಜ್ ಮಾಳಗಿ

contributor

Editor - ಯುವರಾಜ್ ಮಾಳಗಿ

contributor

Similar News