ಮಹಾರಾಷ್ಟ್ರ ವಿಧಾನಪರಿಷತ್ ಚುನಾವಣೆಗೆ ಅಸ್ತು: ಸಿಎಂ ಉದ್ದವ್ ಠಾಕ್ರೆ ನಿರಾಳ

Update: 2020-05-01 06:35 GMT

ಹೊಸದಿಲ್ಲಿ, ಮೇ 1:ಮಹಾರಾಷ್ಟ್ರ ವಿಧಾನಪರಿಷತ್ತಿಗೆ ಮೇ 27ಕ್ಕಿಂತ ಮೊದಲು ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಶುಕ್ರವಾರ ಅನುಮತಿ ನೀಡಿದೆ. ಈ ಮೂಲಕ ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆಗೆ ರಾಜ್ಯ ವಿಧಾನಪರಿಷತ್ ಸದಸ್ಯರಾಗುವ ಅವಕಾಶ ಒದಗಿಬಂದಿದೆ. ಠಾಕ್ರೆ ಮುಖ್ಯಮಂತ್ರಿ ಪದವಿಗೇರಿ ಆರು ತಿಂಗಳಾಗುತ್ತಾ ಬಂದಿದೆ. ಆರು ತಿಂಗಳೊಳಗೆ ವಿಧಾನಪರಿಷತ್ತಿಗೆ ಆಯ್ಕೆಯಾಗದೇ ಇದ್ದರೆ ಸಿಎಂ ಕುರ್ಚಿ ತಪ್ಪಿಹೋಗುವ ಸಾಧ್ಯತೆಯಿತ್ತು.

ಉದ್ಧವ್ ಠಾಕ್ರೆ ಮಹಾರಾಷ್ಟ್ರ ದಿನಾಚರಣೆಯ ಹಿನ್ನೆಲೆಯಲ್ಲಿ ರಾಜಭವನದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿವರನ್ನು ಸೌಜನ್ಯಕ್ಕೆ ಭೇಟಿ ಮಾಡಿದ್ದಾರೆ. 20 ನಿಮಿಷಗಳ ಕಾಲ ರಾಜ್ಯಪಾಲರೊಂದಿಗೆ ಮಾತುಕತೆ ನಡೆಸಿದರು.

ಎಪ್ರಿಲ್ 24ರಿಂದ ತೆರವಾಗಿರುವ ರಾಜ್ಯದ 9 ವಿಧಾನಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ರಾಜ್ಯಪಾಲ ಕೊಶಿಯಾರಿ ಗುರುವಾರ ಮನವಿ ಮಾಡಿದ್ದರು.

ಮಹಾರಾಷ್ಟ್ರ ಸಿಎಂ ಠಾಕ್ರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಬುಧವಾರ ದೂರವಾಣಿ ಮೂಲಕ ತಾನು ಎಂಎಲ್‌ಸಿಗೆ ನಾಮಪತ್ರ ಸಲ್ಲಿಸುವ ವಿಚಾರ ತಿಳಿಸಿದ ಬಳಿಕ ರಾಜ್ಯಪಾಲರು ಚುನಾವಣೆ ನಡೆಸಲು ಮನವಿ ಮಾಡಿದ್ದರು. ಇದಕ್ಕೂ ಮೊದಲು ರಾಜ್ಯಪಾಲರು ಠಾಕ್ರೆಯ ಮನವಿಯನ್ನು ತಿರಸ್ಕರಿಸಿದ್ದರು.

ಎಪ್ರಿಲ್ 28ರಂದು ಮಹಾರಾಷ್ಟ್ರ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಠಾಕ್ರೆ ಅವರನ್ನು ಎಂಎಲ್‌ಸಿಗೆ ನಾಮನಿರ್ದೇಶನಗೊಳಿಸುವಂತೆ ರಾಜ್ಯಪಾಲ ಕೊಶಿಯಾರಿಗೆ ಮತ್ತೊಮ್ಮೆ ಮನವಿ ಮಾಡಲಾಗಿತ್ತು. ಎಪ್ರಿಲ್ 9ರಂದು ರಾಜ್ಯ ಸಂಪುಟ ಎಂಎಲ್‌ಸಿ ಸ್ಥಾನಕ್ಕೆ ಠಾಕ್ರೆ ಹೆಸರನ್ನು ಶಿಫಾರಸು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News