×
Ad

ಕಾಂಕ್ರೀಟ್ ಮಿಕ್ಸರ್ ಲಾರಿಯಲ್ಲಿ ಅಡಗಿ ಪ್ರಯಾಣಿಸುತ್ತಿದ್ದ 18 ವಲಸೆ ಕಾರ್ಮಿಕರು ಪತ್ತೆ

Update: 2020-05-02 20:33 IST
ಫೈಲ್ ಚಿತ್ರ

ಇಂದೋರ್,ಮೇ 2: ತಮ್ಮ ಸ್ವಗ್ರಾಮಗಳಿಗೆ ಮರಳಲು ಮಹಾರಾಷ್ಟ್ರದಿಂದ ಉತ್ತರ ಪ್ರದೇಶದ ಲಕ್ನೋಕ್ಕೆ ಕಾಂಕ್ರೀಟ್ ಮಿಕ್ಸರ್ ಲಾರಿಯ ಡ್ರಮ್‌ನೊಳಗೆ ಅಡಗಿ ಕುಳಿತುಕೊಂಡು ಪ್ರಯಾಣಿಸುತ್ತಿದ್ದ 18 ವಲಸೆ ಕಾರ್ಮಿರನ್ನು ಪತ್ತೆ ಹಚ್ಚಿರುವ ಮಧ್ಯಪ್ರದೇಶ ಪೊಲೀಸರು,ಚಾಲಕನ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡು ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.

 ವಲಸೆ ಕಾರ್ಮಿಕರನ್ನು ಕ್ವಾರಂಟೈನ್ ಕೇಂದ್ರಕ್ಕೆ ಸಾಗಿಸಿ ಕೊರೋನ ವೈರಸ್ ಸೋಂಕು ತಪಾಸಣೆಗೊಳಪಡಿಸಲಾಗಿದ್ದು,ಅವರನ್ನು ಬಸ್ ಮೂಲಕ ಲಕ್ನೋಕ್ಕೆ ಕಳುಹಿಸಲು ರಾಜ್ಯ ಸರಕಾರವು ಕ್ರಮಗಳನ್ನು ಕೈಗೊಂಡಿದೆ.

ಶನಿವಾರ ಬೆಳಗ್ಗೆ ರಾಜ್ಯದ ಇಂದೋರ್ ಮತ್ತು ಉಜ್ಜೈನ್ ಜಿಲ್ಲೆಗಳ ನಡುವಿನ ಗಡಿಯಲ್ಲಿ ಕರ್ತವ್ಯನಿರತರಾಗಿದ್ದ ಪೊಲೀಸರು ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾಂಕ್ರೀಟ್ ಮಿಕ್ಸರ್ ಲಾರಿಯನ್ನು ತಡೆದು ನಿಲ್ಲಿಸಿದ್ದರು. ಈ ಸಂದರ್ಭ ಚಾಲಕ ಗಾಬರಿಗೊಂಡಿದ್ದು,ಶಂಕಿತ ಪೊಲೀಸರು ಸಿಮೆಂಟ್ ಕಾಂಕ್ರೀಟ್ ಸಿದ್ಧಗೊಳಿಸುವ ಲಾರಿಯ ಡ್ರಮ್‌ನ ಮುಚ್ಚಳವನ್ನು ತೆರೆದು ಪರಿಶೀಲಿಸಿದಾಗ ಅದರಲ್ಲಿ ಕುರಿಗಳಂತೆ ತುಂಬಲಾಗಿದ್ದ 18 ವಲಸೆ ಕಾರ್ಮಿಕರು ಪತ್ತೆಯಾಗಿದ್ದಾರೆ.

ತನ್ಮಧ್ಯೆ ಉತ್ತರ ಪ್ರದೇಶದ ತನ್ನ ಸ್ವಗ್ರಾಮಕ್ಕೆ ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದ ವಲಸೆ ಕಾರ್ಮಿಕನೋರ್ವ ಶನಿವಾರ ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ಮೃತಪಟ್ಟಿದ್ದಾನೆ. ಇದು ಬರ್ವಾಣಿ ಜಿಲ್ಲೆಯಲ್ಲಿ ಕಳೆದ 10 ದಿನಗಳಲ್ಲಿ ಸಂಭವಿಸಿರುವ ಇಂತಹ ಮೂರನೇ ಸಾವಿನ ಪ್ರಕರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News