ಕುಲಭೂಷಣ್ ಜಾಧವ್ ಬಿಡುಗಡೆಗೆ ಪಾಕ್ ಮನವೊಲಿಸಲು ಭಾರತವು ಹಿಂಬಾಗಿಲ ಪ್ರಯತ್ನಗಳನ್ನು ನಡೆಸಿತ್ತು: ಹರೀಶ್ ಸಾಳ್ವೆ

Update: 2020-05-03 13:12 GMT
  ಫೋಟೊ ಕೃಪೆ: twitter.com/harishsalvee

ಹೊಸದಿಲ್ಲಿ,ಮೇ 3: ಪಾಕಿಸ್ತಾನದಲ್ಲಿ ಮರಣದಂಡನೆಗೆ ಗುರಿಯಾಗಿರುವ  ಭಾರತೀಯ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಬಿಡುಗಡೆಗೊಳಿಸುವಂತೆ ಅಲ್ಲಿಯ ಸರಕಾರದ ಮನವೊಲಿಸಲು ಭಾರತವು ಹಿಂಬಾಗಿಲ ಪ್ರಯತ್ನಗಳನ್ನು ನಡೆಸಿತ್ತು. ಅಂತರ್ ರಾಷ್ಟ್ರೀಯ ನ್ಯಾಯಾಲಯ (ಐಸಿಜೆ)ದಲ್ಲಿ ಪ್ರಕರಣದಲ್ಲಿ ಭಾರತದ ಪ್ರಮುಖ ವಕೀಲರಾಗಿರುವ ಮಾಜಿ ಸಾಲಿಸಿಟರ್ ಜನರಲ್ ಹರೀಶ ಸಾಳ್ವೆ ಅವರು ಶನಿವಾರ ಆಂಗ್ಲ ಪತ್ರಿಕೆಯೊಂದಿಗೆ ಆನ್‌ಲೈನ್ ಸಂವಾದದಲ್ಲಿ ಈ ವಿಷಯವನ್ನು ಬಹಿರಂಗಗೊಳಿಸಿದ್ದಾರೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ ದೋವಲ್ ಅವರು ಪಾಕಿಸ್ತಾನದ ಆಗಿನ ಎನ್‌ಎಸ್‌ಎ ನಾಸಿರ್ ಖಾನ್ ಜಂಜುವಾ ಅವರ ಜೊತೆ ತನ್ನ ಮಾತುಕತೆಯೊಂದರ ಸಂದರ್ಭದಲ್ಲಿ ಜಾಧವ ಬಿಡುಗಡೆಗೆ ಕೋರಿಕೆಯನ್ನು ಮುಂದಿಟ್ಟಿದ್ದರು ಎನ್ನಲಾಗಿದೆ.

ಲಂಡನ್‌ನಿಂದ ಮಾತನಾಡಿದ ಸಾಳ್ವೆ,”ಹಿಂಬಾಗಿಲ ಪ್ರಯತ್ನಗಳ ಮೂಲಕ ಜಾಧವ್ ಬಿಡುಗಡೆಗೆ ಪಾಕಿಸ್ತಾನದ ಮನವೊಲಿಸಲು ಸಾಧ್ಯವಾಗಬಹುದು ಎಂದು ನಾವು ಆಶಿಸಿದ್ದೆವು. ಮಾನವೀಯತೆಯ ಆಧಾರದಲ್ಲಿ ಅಥವಾ ಏನೇ ಆಗಿರಲಿ,ಜಾಧವ್ ಸ್ವದೇಶಕ್ಕೆ ಮರಳಬೇಕು ಎಂದು ನಾವು ಬಯಸಿದ್ದೆವು. ಅವರನ್ನು ಬಿಟ್ಟು ಬಿಡಿ ಎಂದು ನಾವು ಹೇಳಿದ್ದೆವು,ಆದರೆ ಹಾಗಾಗಲಿಲ್ಲ. ವಾಸ್ತವದಲ್ಲಿ ಇದು ಪಾಕಿಸ್ತಾನಕ್ಕೆ ಪ್ರತಿಷ್ಠೆಯ ವಿಷಯವಾಗಿ ಪರಿಣಮಿಸಿತ್ತು” ಎಂದರು.

ಆರೆಸ್ಸೆಸ್‌ನೊಂದಿಗೆ ಗುರುತಿಸಿಕೊಂಡಿರುವ,ಅಖಿಲ ಭಾರತ ವಕೀಲರ ಸಂಘಟನೆಯಾಗಿರುವ ಅಖಿಲ ಭಾರತೀಯ ಅಧಿವಕ್ತಾ ಪರಿಷದ್ ಈ ಆನ್‌ಲೈನ್ ಸಂವಾದವನ್ನು ಸಂಘಟಿಸಿತ್ತು.

ಜಾಧವ್ ರಿಗೆ ಮರಣ ದಂಡನೆಯನ್ನು ವಿಧಿಸಿರುವುದರ ವಿರುದ್ಧ ಭಾರತವು ಮೇ 2017ರಲ್ಲಿ ಐಸಿಜೆ ಮೆಟ್ಟಿಲನ್ನೇರಿತ್ತು. ಕಳೆದ ವರ್ಷದ ಜುಲೈನಲ್ಲಿ ಐಸಿಜೆ ತನ್ನ ತೀರ್ಪಿನಲ್ಲಿ ಜಾಧವ್ ಜೊತೆ ಭಾರತೀಯ ದೂತಾವಾಸದ ಸಂಪರ್ಕಕ್ಕೆ ಅವಕಾಶ ನೀಡುವಂತೆ ಮತ್ತು ಮರಣ ದಂಡನೆಯನ್ನು ಪುನರ್‌ಪರಿಶೀಲಿಸುವಂತೆ ಪಾಕಿಸ್ತಾನಕ್ಕೆ ನಿರ್ದೇಶ ನೀಡಿತ್ತು. ಆದರೆ ಪಾಕಿಸ್ತಾನವು ಈ ನಿಟ್ಟಿನಲ್ಲಿ ಒಂದು ಹೆಜ್ಜೆಯನ್ನೂ ಮುಂದಿರಿಸಿರಲಿಲ್ಲ, ಅದು ತನ್ನ ನಿಗಾದಡಿ ಜಾಧವ್ ಜೊತೆ ಭಾರತೀಯ ರಾಜತಾಂತ್ರಿಕರ ಭೇಟಿಗೆ ಅವಕಾಶ ಕಲ್ಪಿಸಿತ್ತು.

 ‘ಪಾಕಿಸ್ತಾನವು ಐಸಿಜೆ ನಿರ್ದೇಶಕ್ಕೆ ಸ್ಪಂದಿಸಿಲ್ಲ,ಹೀಗಾಗಿ ಮತ್ತೊಮ್ಮೆ ಐಸಿಜೆ ಮೆಟ್ಟಿಲನ್ನೇರಬೇಕೇ ಎನ್ನುವುದನ್ನು ನಾವೀಗ ಪರಿಶೀಲಿಸಬೇಕಿದೆ. ಪಾಕಿಸ್ತಾನವು ಜಾಧವ್ ವಿರುದ್ಧದ ಎಫ್‌ಐಆರ್,ದೋಷಾರೋಪಣೆ ಪಟ್ಟಿ ಅಥವಾ ಮಿಲಿಟರಿ ನ್ಯಾಯಾಲಯದ ತೀರ್ಪಿನ ಪ್ರತಿಯನ್ನು ಒದಗಿಸಲು ಈವರೆಗೆ ನಿರಾಕರಿಸುತ್ತಲೇ ಬಂದಿದೆ. ಜಾಧವ್ ರಿಗೆ ಸೂಕ್ತ ನೆರವು ನೀಡಲು ಅವರ ವಿರುದ್ಧದ ಸಾಕ್ಷಾಧಾರಗಳನ್ನು ತೋರಿಸುವಂತೆ ನಾವು ಪದೇ ಪದೇ ಕೋರಿದ್ದರೂ ಪಾಕ್ ನಿರಾಕರಿಸಿದೆ. ಪಾಕಿಸ್ತಾನವು ಗಂಭೀರ ಸಮಸ್ಯೆಯಲ್ಲಿದೆ ಎಂದು ನಾನು ಭಾವಿಸಿದ್ದೇನೆ. ಅವರ ಬಳಿ ತಪ್ಪೊಪ್ಪಿಗೆ ಬಿಟ್ಟರೆ ಬೇರೇನೂ ಇಲ್ಲ. ಅವರ ಸ್ಥಳೀಯ ನ್ಯಾಯಾಲಯಗಳಿಗೆ ಅದು ಸಾಕು ಎಂದು ಅನ್ನಿಸಬಹುದು. ಆದರೆ ನ್ಯಾಯಯುತ ವಿಚಾರಣೆ ನಡೆದರೆ ಜಾಧವ್ ಬಿಡುಗಡೆ ಹೊರತು ಅನ್ಯಮಾರ್ಗ ಪಾಕಿಸ್ತಾನಕ್ಕೆ ಇಲ್ಲ. ಒಂದಲ್ಲ ಒಂದು ದಿನ ನಾವು ಜಾಧವ್ ರನ್ನು ಭಾರತಕ್ಕೆ ಮರಳಿ ಕರೆತರುತ್ತೇವೆ ’ ಎಂದು ಸಾಳ್ವೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News