ವಲಸೆ ಕಾರ್ಮಿಕರ ಕುಟುಂಬಕ್ಕೆ ಶೌಚಾಲಯದಲ್ಲಿ 'ಕ್ವಾರಂಟೈನ್'!: ಫೋಟೊ ವೈರಲ್

Update: 2020-05-04 11:23 GMT

ಭೋಪಾಲ್: ವಲಸಿಗ ಕಾರ್ಮಿಕ ದಂಪತಿ ಮತ್ತವರ ಮಕ್ಕಳನ್ನು ಗುನಾ ಎಂಬಲ್ಲಿ ಶೌಚಾಲಯದಲ್ಲಿ ಕ್ವಾರಂಟೈನ್‍ ನಲ್ಲಿರಿಸಲಾಗಿದೆಯೆಂಬ ಆರೋಪಗಳು ಮಧ್ಯ ಪ್ರದೇಶ ಸರಕಾರವನ್ನು ವಿವಾದದಲ್ಲಿ ಸಿಲುಕಿಸಿದೆ.

ದಂಪತಿ ಶೌಚಾಲಯದೊಳಗೆ ಕುಳಿತುಕೊಂಡು ಊಟ ಮಾಡುತ್ತಿರುವ ಚಿತ್ರ ಇತ್ತೀಚೆಗೆ ವೈರಲ್ ಆಗಿತ್ತು. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷ ರಾಜ್ಯದ ಶಿವರಾಜ್ ಸಿಂಗ್ ಚೌಹಾಣ್ ಸರಕಾರವನ್ನೂ ತರಾಟೆಗೆ ತೆಗೆದುಕೊಂಡಿತ್ತು.

ಆದರೆ ಆರೋಪಗಳನ್ನು ಅಧಿಕಾರಿಗಳು ನಿರಾಕರಿಸಿದ್ದು, ತೊಡಾರ ಗ್ರಾಮಕ್ಕೆ ಕುಟುಂಬ ಮರಳಿದ ನಂತರ ಅವರ ಸಂಬಂಧಿಕರು ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಲು ಒಪ್ಪದೇ ಇದ್ದುದರಿಂದ ಅವರನ್ನು ಶಾಲೆಯೊಂದರಲ್ಲಿರಿಸಲಾಗಿತ್ತು ಎಂದು ಹೇಳಿದ್ದಾರೆ. ಆದರೆ ವೈರಲ್ ಆಗಿರುವ ಚಿತ್ರಗಳನ್ನು ಅಧಿಕಾರಿಗಳು ಅಲ್ಲಗಳೆದಿಲ್ಲ. ಆ ಕುಟುಂಬದ ವ್ಯಕ್ತಿ ಪಾನಮತ್ತನಾಗಿ ಶೌಚಾಲಯ ಸೇರಿಕೊಂಡಿದ್ದ ಎಂದೂ ಅವರು ಹೇಳಿದ್ದಾರೆ.

ವೈರಲ್ ವೀಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಯನ್ನು ಭೈಯ್ಯಾಲಾಲ್ ಸಹಾರಿಯಾ ಎಮದು ಗುರುತಿಸಲಾಗಿದೆ. ಆತ  ಹಾಗೂ ಆತನ ಪತ್ನಿ ಮಕ್ಕಳು ರಾಜಘರ್ ಜಿಲ್ಲೆಗೆ ಕಾರ್ಮಿಕರಾಗಿ ಕೆಲಸ ಮಾಡಲು ಬಂದಿದ್ದರೆನ್ನಲಾಗಿದ್ದು ಕೆಲಸ ಮುಗಿದ ನಂತರ ತೊಡಾರ ಗ್ರಾಮಕ್ಕೆ ಶನಿವಾರ ಸಂಜೆ ಮರಳಿದ್ದರು.

ಕುಟುಂಬವನ್ನು ಶೌಚಾಲಯದಲ್ಲಿ ಕ್ವಾರಂಟೈನ್‍ ಗೊಳಿಸಲಾಗಿದೆ ಎಂಬ ಚಿತ್ರಗಳು ವೈರಲ್ ಆದಂತೆ ಕುಟುಂಬವನ್ನು ಶಾಲಾ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಆದರೆ ಗುನಾದ ರಾಘೋಘರ್ ಸಿಇಒ ಜಿತೇಂದ್ರ ಸಿಂಗ್ ಢಕ್ರೆ ಪ್ರತಿಕ್ರಿಯಿಸಿ “ಭೈಯ್ಯಾಲಾಲ್ ಕುಡಿದು ಬಂದು ಶೌಚಾಲಯದೊಳಕ್ಕೆ ಪ್ರವೇಶಿಸಿ ಅಲ್ಲಿಯೇ ಊಟ ಮಾಡಿದಾಗ ಜತೆಗೆ ಆತನ ಪತ್ನಿಯೂ ಇದ್ದಳು” ಎಂದು ಹೇಳಿಕೊಂಡಿದ್ದಾರೆ.

ಒಟ್ಟಾರೆಯಾಗಿ ಈ ಘಟನೆ ರಾಜ್ಯದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದು ಆಡಳಿತ ಬಿಜೆಪಿ ಮಾತ್ರ ತನ್ನಿಂದೇನೂ ತಪ್ಪು ನಡೆದಿಲ್ಲ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News