ಸೂರತ್ ನಲ್ಲಿ ವಲಸೆ ಕಾರ್ಮಿಕರ ಪ್ರತಿಭಟನೆ: ಪೊಲೀಸರ ಮೇಲೆ ಕಲ್ಲುತೂರಾಟ

Update: 2020-05-04 18:04 GMT

ಸೂರತ್, ಮೇ 4: ಲಾಕ್‌ಡೌನ್ ಹೇರಿಕೆಯ ಬಳಿಕ ತಮ್ಮ ಊರುಗಳಿಗೆ ವಾಪಸಾಗಲು ಹಲವಾರು ದಿನಗಳಿಂದ ಹಾತೊರೆಯುತ್ತಿರುವ ನೂರಾರು ವಲಸೆ ಕಾರ್ಮಿಕರು ಸೋಮವಾರ ಹತಾಶರಾಗಿ ಪೊಲೀಸರೊಂದಿಗೆ ಘರ್ಷಣೆಗಿಳಿದ ಘಟನೆ ಗುಜರಾತ್‌ನ ಸೂರತ್ ಜಿಲ್ಲೆಯಲ್ಲಿ ವರದಿಯಾಗಿದೆ.

ಸೂರತ್ ನಗರದ ಹೊರವಲಯದಲ್ಲಿರುವ ವರೇಲಿ ಗ್ರಾಮದಲ್ಲಿ ನೂರಾರು ವಲಸೆ ಕಾರ್ಮಿಕರು ಲಾಕ್‌ಡೌನ್‌ನಿಂದಾಗಿ ದುಡಿಮೆಯಿಲ್ಲದೆ ತಾವು ಕಂಗಾ ಲಾಗಿದ್ದು, ತಮ್ಮನ್ನು ಊರಿಗೆ ಕಳುಹಿಸಲು ಏರ್ಪಾಡು ಮಾಡಬೇಕೆಂದು ಪಟ್ಟುಹಿಡಿದು ದಾಂಧಲೆ ನಡೆಸಿದರು.ಹಿಂಸಾಚಾರಕ್ಕಿಳಿದ ವಲಸೆ ಕಾರ್ಮಿಕರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು ಹಾಗೂ ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದ್ದಾರೆ. ಘರ್ಷಣೆಯಲ್ಲಿ 11 ಮಂದಿ ಪೊಲೀಸರಿಗೆ ಗಾಯಗಳಾಗಿರುವುದಾಗಿ ತಿಳಿದುಬಂದಿದೆ.

ಉದ್ರಿಕ್ತ ಕಾರ್ಮಿಕರು ಸೂರತ್-ಕಡೋದರ ರಸ್ತೆಯಲ್ಲಿರುವ ಕೆಲವು ವಾಹನಗಳಿಗೂ ಹಾನಿ ಮಾಡಿದ್ದಾರೆಂದು ಅವರು ಹೇಳಿದ್ದಾರೆ. ಪರಿಸ್ಥಿತಿಯನ್ನು ಈಗ ನಿಯಂತ್ರಣಕ್ಕೆ ತರಲಾಗಿದ್ದು, ಇಡೀ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆಯೆಂದು ಅವರು ಹೇಳಿದ್ದಾರೆ.

ಗುಜರಾತ್‌ನ ರಾಜ್‌ಕೋಟ್‌ನಲ್ಲಿಯೂ ಹಲವಾರು ವಲಸೆ ಕಾರ್ಮಿಕರು ಬೀದಿಗಿಳಿದು, ತಮ್ಮನ್ನು ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿ, ಘೋಷಣೆಗಳನ್ನು ಕೂಗಿದರು.

ಈ ಮಧ್ಯೆ ಸೂರತ್‌ನ ಪಾಂಡೆಸಾರ ಪ್ರದೇಶದ ಲ್ಲಿ 50 ಮಂದಿ ವಲಸೆ ಕಾರ್ಮಿಕರು, ತಮ್ಮ ತಲೆಗಳನ್ನು ಬೋಳಿಸಿ ಪ್ರತಿಭಟನೆ ನಡೆಸಿದ್ದಾರೆ. ಉತ್ತರಪ್ರದೇಶ ಹಾಗೂ ಜಾರ್ಖಂಡ್‌ನಲ್ಲಿರುವ ತಮ್ಮ ಊರುಗಳಿಗೆ ಬಸ್ಸುಗಳಲ್ಲಿ ತೆರಳುವುದಕ್ಕೆ ತಮಗೆ ಅನುಮತಿ ನೀಡಲಾಗಿತ್ತು. ಆದರೆ ಸೂರತ್‌ನ ಕೋಸಾಂಬದಲ್ಲಿ ಬಸ್‌ಗಳನ್ನು ತಡೆಹಿಡಿದು, ಅನುಮತಿ ಪತ್ರವಿಲ್ಲವೆಂಬ ನೆಪ ಹೇಳಿ ಹಿಂದಕ್ಕೆ ಕಳುಹಿಸಲಾಗಿದೆ ಎಂದು ಅವರು ದೂರಿದ್ದಾರೆ.

 ತಮ್ಮ ಊರುಗಳಿಗೆ ತೆರಳಲು ತಾವು ಕಾತರರಾಗಿದ್ದು, ತಮ್ಮ ಪ್ರಯಾಣಕ್ಕೆ ಸರಕಾರವು ಅನುಮತಿ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ. ಆರ್ಥಿಕ ಸಂಕಷ್ಟಗಳ ನಡುವೆಯೂ ಹಣವನ್ನು ಹೊಂದಿಸಿಕೊಂಡು ತಾವು ಬಸ್‌ಗಳನ್ನು ವ್ಯವಸ್ಥೆ ಮಾಡಿದ್ದೆವು. ಆದರೆ ಆ ಹಣವನ್ನು ತಮಗೆ ಮರುಪಾವತಿಸಲಾಗಿಲ್ಲವೆಂದು ವಲಸೆ ಕಾರ್ಮಿಕರು ಆರೋಪಿಸಿದ್ದಾರೆ. ಯಾವುದೇ ವಿಳಂಬವಿಲ್ಲದೆ ತಮ್ಮ ಊರುಗಳಿಗೆ ಮರಳಲು ಗುಜರಾತ್ ಹಾಗೂ ಉತ್ತರಪ್ರದೇಶ ಸರಕಾರಗಳು ಏರ್ಪಾಡುಗಳನ್ನು ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News