×
Ad

ವಲಸೆ ಕಾರ್ಮಿಕರಿಗೆ ರೈಲು ಪ್ರಯಾಣ ಶುಲ್ಕ ವಿಧಿಸುವ ಬಗ್ಗೆ ಎಂದೂ ಹೇಳಿಲ್ಲ

Update: 2020-05-04 20:36 IST

ಹೊಸದಿಲ್ಲಿ,ಮೇ 4: ವಲಸೆ ಕಾರ್ಮಿಕರನ್ನು ಅವರ ತವರು ರಾಜ್ಯಗಳಿಗೆ ಕರೆದೊಯ್ಯಲು ವಿಶೇಷ ರೈಲುಗಳ ವಿವಾದದ ಕುರಿತು ಸರಕಾರವು ಕಾರ್ಮಿಕರಿಗೆ ರೈಲು ಪ್ರಯಾಣ ಶುಲ್ಕವನ್ನು ವಿಧಿಸುವ ಬಗ್ಗೆ ತಾನೆಂದೂ ಮಾತನಾಡಿರಲಿಲ್ಲ ಎಂದು ಸೋಮವಾರ ತಿಳಿಸಿದೆ.

“ರಾಜ್ಯಗಳ ಮನವಿಯ ಮೇರೆಗೆ ವಿಶೇಷ ರೈಲುಗಳನ್ನು ಓಡಿಸಲು ನಾವು ಅನುಮತಿಯನ್ನು ನೀಡಿದ್ದೇವೆ. ನಿಯಮಗಳಂತೆ ಪ್ರಯಾಣ ವೆಚ್ಚದ ಶೇ.85ರಷ್ಟನ್ನು ರೈಲ್ವೆಯು ಭರಿಸುತ್ತದೆ ಮತ್ತು ಉಳಿದ ಶೇ.15ರಷ್ಟನ್ನು ರಾಜ್ಯಗಳು ಭರಿಸಬೇಕಾಗುತ್ತದೆ. ಅತಂತ್ರರಾಗಿರುವ ಕಾರ್ಮಿಕರಿಂದ ರೈಲು ಪ್ರಯಾಣ ಶುಲ್ಕವನ್ನು ವಸೂಲು ಮಾಡುವಂತೆ ನಾವೆಂದೂ ರಾಜ್ಯಗಳಿಗೆ ಸೂಚಿಸಿರಲಿಲ್ಲ” ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ವಿಶೇಷ ರೈಲುಗಳ ಮೂಲಕ ತಮ್ಮ ಮನೆಗಳಿಗೆ ಪ್ರಯಾಣಿಸುವ ಎಲ್ಲ ವಲಸೆ ಕಾರ್ಮಿಕರು ಮತ್ತು ಹೊರರಾಜ್ಯಗಳಲ್ಲಿ ಅತಂತ್ರರಾಗಿರುವವರ ಪ್ರಯಾಣ ವೆಚ್ಚವನ್ನು ತನ್ನ ಪಕ್ಷವು ಪಾವತಿಸಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಕಟಿಸಿರುವ ಹಿನ್ನಲೆಯಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಅಗರವಾಲ್ ಉತ್ತರಿಸುತ್ತಿದ್ದರು.

  ಆದರೆ ವಿಶೇಷ ರೈಲುಗಳ ಓಡಾಟ ಕುರಿತು ಸರಕಾರವು ಶುಕ್ರವಾರ ಹೊರಡಿಸಿದ್ದ ಸುತ್ತೋಲೆಯು ಬೇರೆಯದನ್ನೇ ಹೇಳಿತ್ತು. ರಾಜ್ಯ ಸರಕಾರಗಳು ತಮ್ಮಿಂದ ಅನುಮತಿ ಪಡೆದಿರುವ ವಲಸೆ ಕಾರ್ಮಿಕರಿಗೆ ರೈಲು ಪ್ರಯಾಣದ ಟಿಕೆಟ್‌ಗಳನ್ನು ವಿತರಿಸಬೇಕು ಮತ್ತು ಅವರಿಂದ ಟಿಕೆಟ್ ಶುಲ್ಕವನ್ನು ಸಂಗ್ರಹಿಸಿ,ಒಟ್ಟು ಹಣವನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಬೇಕು ಎಂದು ಮಾಧ್ಯಮಗಳಿಗೆ ಲಭ್ಯವಾಗಿದ್ದ ಸುತ್ತೋಲೆಯಲ್ಲಿ ಹೇಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News