ಗದಗ: ಕೊರೋನ ಭೀತಿಯಿಂದ ಸಂಕಷ್ಟಕ್ಕೀಡಾದ ಕಾರ್ಮಿಕರು

Update: 2020-05-06 06:21 GMT
ಸಾಂದರ್ಭಿಕ ಚಿತ್ರ

ಗದಗ, ಮೇ 5: ದೇಶಾದ್ಯಂತ ಕೊರೋನ ವೈರಸ್ ತಾಂಡವವಾಡುತ್ತಿದ್ದು, ಕೊರೋನ ಸೋಂಕು ಭೀತಿಯಿಂದ ಲಕ್ಷಾಂತರ ಕಾರ್ಮಿಕರ ಬದುಕು ದುಸ್ತರವಾಗಿ ಪರಿಣಮಿಸಿದ್ದು, ಸರಕಾರಿ ಸೌಲಭ್ಯಗಳಿಂದಲೂ ನೈಜ ಫಲಾನುಭವಿಗಳು ವಂಚಿತರಾಗುತ್ತಿರುವ ವಿದ್ಯಮಾನ ಕೂಡ ಹೊಸದೇನಲ್ಲ.
ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣಕ್ಕಾಗಿ ಕೇಂದ್ರ ಸರಕಾರ ರೂಪಿಸಿರುವ ಕಾಯ್ದೆಯು ಸೂಕ್ತವಾಗಿ ಅನುಷ್ಠಾನಗೊಳ್ಳದ ಕಾರಣ ಗದಗ ಜಿಲ್ಲೆಯ ಸಾವಿರಾರು ಕಾರ್ಮಿಕರ ಜೀವನ ಬೀದಿಪಾಲಾಗುವಂತಾಗಿದೆ.

ಕಾರ್ಮಿಕರ ಕಲ್ಯಾಣಕ್ಕಾಗಿ ಹಲವು ಯೋಜನೆಗಳಿದ್ದರೂ ಸೂಕ್ತ ಪ್ರಚಾರ ಹಾಗೂ ಅನುಷ್ಠಾನದ ಕೊರತೆಯಿಂದ ಕಟ್ಟಡ ಕಾರ್ಮಿಕರು ಸಿಗಬೇಕಾದ ಸೌಲಭ್ಯಗಳಿಂದ ದೂರ ಉಳಿಯುವಂತಾಗಿದೆ. ಬೆವರು ಸುರಿಸಿ ದುಡಿದು ಬದುಕು ಸವೆಸುತ್ತಿದ್ದ ಕಾರ್ಮಿಕರ ಪಾಲಿಗೆ ಕೊರೋನ ಸೋಂಕಿನ ಹಾವಳಿ ಬರಸಿಡಿಲಿನಂತೆ ಬಂದೆರಗಿದೆ. ಒಂದೂವರೆ ತಿಂಗಳಿಂದ ಕೆಲಸವಿಲ್ಲದೆ ಕುಳಿತಿರುವ ಕಾರ್ಮಿಕರಿಗೆ ಈಗ ದಿಕ್ಕೇ ತೋಚದಂತಾಗಿದೆ.

ಕುಟುಂಬದ ಜವಾಬ್ದಾರಿ ಹೊತ್ತು ಆರ್ಥಿಕ ಸದೃಢತೆ ಸಾಧಿಸಲು ಬೃಹತ್ ನಗರಗಳತ್ತ ಮುಖ ಮಾಡುವ ಕಾರ್ಮಿಕರು ಅಲ್ಲಲ್ಲಿ ಗುಡಿಸಲು, ತಾತ್ಕಾಲಿಕ ಟೆಂಟ್ ನಿರ್ಮಿಸಿಕೊಂಡು ಬದುಕು ಸಾಗಿಸುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರಿಗೆ ಸರಕಾರ ಘೋಷಿಸುವ ಸೌಲಭ್ಯಗಳ ಮಾಹಿತಿ ಇರುವುದೇ ಇಲ್ಲ. ಸೌಲಭ್ಯಗಳು ನೈಜ ಫಲಾನುಭವಿಗಳಿಗೆ ತಲುಪುವುದೂ ಕನಸಿನ ಮಾತೇ ಸರಿ. ಫಲಾನುಭವಿಗಳಿಗೆ ಸಲ್ಲಬೇಕಾದ ಸೌಲಭ್ಯಗಳು ನಕಲಿ ಕಾರ್ಮಿಕರ ಪಾಲಾಗುತ್ತಿವೆ ಎಂದು ಎಐಟಿಯುಸಿ ರಾಜ್ಯ ಘಟಕದ ಉಪಾಧ್ಯ್ಷ ಉಮೇಶ್ ಎಚ್.ಜಿ. ಆರೋಪಿಸಿದ್ದಾರೆ.

ಕಟ್ಟಡ ಕಾರ್ಮಿಕರ ಕಲ್ಯಾಣಕ್ಕೆಂದೇ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸಲಾಗಿದೆ. ಮಂಡಳಿಯಲ್ಲಿ ಸುಮಾರು 900 ಕೋಟಿ ರೂ. ಸಂಗ್ರಹವಿದ್ದು, ಕಾರ್ಮಿಕರಿಗಾಗಿ ಸಮರ್ಪಕವಾಗಿ ಬಳಕೆ ಮಾಡುತ್ತಿಲ್ಲ. ಆದರೆ ಇದನ್ನು ಸದ್ಬಳಕೆ (ಕ್ಲೇಮ್) ಮಾಡಿಕೊಳ್ಳಲು ಅರ್ಹರು ಸಿಗುತ್ತಿಲ್ಲ ಎನ್ನುವುದನ್ನೂ ತಳ್ಳಿಹಾಕುವಂತಿಲ್ಲ. ಮೊದಲೇ ಯೋಜನೆಯ ಪ್ರಚಾರವಿಲ್ಲ. ಸೂಕ್ತ ರೀತಿಯಲ್ಲಿ ಅನುಷ್ಠಾನಗೊಳಿಸಲು ತಳಮಟ್ಟದಲ್ಲಿ ಯೋಜನೆ ರೂಪಿಸಿಲ್ಲ. ಅರ್ಹ ನೋಂದಾಯಿತ ಸದಸ್ಯರ ಕೊರತೆಯನ್ನೂ ನಿರ್ಲಕ್ಷಿಸುವಂತಿಲ್ಲ. ರಾಜ್ಯದಲ್ಲಿ ಬಹುತೇಕ ಕಾರ್ಮಿಕರು ನೋಂದಣಿ ಮಾಡಿಕೊಳ್ಳುವ ಗೋಜಿಗೆ ಹೋಗದಿರುವುದು ಮತ್ತೊಂದು ಕಾರಣವಾಗಿದೆ ಎನ್ನುತ್ತಾರೆ ಉಮೇಶ್.

ರಾಜ್ಯ ಸರಕಾರವು ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣಕ್ಕಾಗಿ ಪ್ರತಿ ತಿಂಗಳು 2,000 ರೂ. ಸಹಾಯಧನ ನೀಡಲು ಮುಂದಾಗಿದೆ. ಇದಕ್ಕೆ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಬಹುತೇಕ ಕಾರ್ಮಿಕರು ಅನಕ್ಷರಸ್ಥರಾಗಿದ್ದು, ಅವರು ಖುದ್ದಾಗಿ ನೋಂದಣಿ ಮಾಡಿಸುವುದು ಕಷ್ಟಸಾಧ್ಯ. ಸಹಾಯಧನ ಪಡೆಯುವಲ್ಲಿಯೂ ನಕಲಿ ಕಾರ್ಮಿಕರ ಹಾವಳಿ ಹೆಚ್ಚುತ್ತಿದೆ. ಇದರಿಂದ ಬಹುಸಂಖ್ಯಾತ ನೈಜ ಕಾರ್ಮಿಕರು ಈ ಕಲ್ಯಾಣ ಕಾರ್ಯಕ್ರಮದಿಂದಲೂ ವಂಚಿತರಾಗುತ್ತಿರುವುದು ಬೇಸರ ಮೂಡಿಸಿದೆ ಎಂದು ಉಮೇಶ್ ಕಳವಳ ವ್ಯಕ್ತಪಡಿಸಿದ್ದಾರೆ.

ಕಟ್ಟಡ ನಿರ್ಮಾಣ ಕಾರ್ಮಿಕರು ಈ ಕಾಯ್ದೆಯಲ್ಲಿ ನೋಂದಣಿ ಮಾಡಿಸಿಕೊಂಡಲ್ಲಿ ಶೈಕ್ಷಣಿಕ, ವೈದ್ಯಕೀಯ, ಪಿಂಚಣಿ, ಅಪಘಾತ ಪರಿಹಾರ, ಕೌಶಲ್ಯ ತರಬೇತಿ, ಅಂತ್ಯಕ್ರಿಯೆ, ಮದುವೆಗೆ ಸಹಾಯಧನ ಸಹಿತ 15ಕ್ಕೂ ಸೌಲಭ್ಯಗಳು ದೊರೆಯಲಿವೆ. ಕಾರ್ಮಿಕ ಕಲ್ಯಾಣ ಇಲಾಖೆಯಿಂದ ಹಲವು ಪ್ರಯೋಜನಗಳು ಇದ್ದರೂ ನಿಜವಾದ ಕಾರ್ಮಿಕರು ಯೋಜನೆ ಸದುಪಯೋಗಪಡಿಸಿಕೊಳ್ಳಲು ಮುಂದೆ ಬರುತ್ತಿಲ್ಲ ಎಂದು ಉಮೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾರ್ಮಿಕ ಕಲ್ಯಾಣ ಯೋಜನೆಯಡಿ ಗದಗ ಜಿಲ್ಲೆಯಲ್ಲಿ ಈಗಾಗಲೇ 25,065 ಕಾರ್ಮಿಕರು ನೋಂದಣಿ ಮಾಡಿಸಿಕೊಂಡಿದ್ದು, ಈ ಪೈಕಿ 21,000 ಕಾರ್ಮಿಕರ ವರದಿಯನ್ನು ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ. ಇದರಲ್ಲಿ 6,400 ಕಾರ್ಮಿಕರ ಖಾತೆಗೆ ಪರಿಹಾರ ಧನ ಜಮೆಯಾಗಿದೆ. ನೋಂದಣಿ ಪ್ರಕ್ರಿಯೆ ಮುಂದುವರಿದಿದೆ. ಆದರೆ ಬಹುತೇಕ ಕಾರ್ಮಿಕರು ಸಲ್ಲಿಸಿದ ಆಧಾರ್ ಕಾರ್ಡ್ ನಂಬರ್ ನಕಲಿಯಾಗಿರುವುದರಿಂದ ಪ್ರಕ್ರಿಯೆ ನಿಧಾನಗತಿಯಲ್ಲಿದೆ.
ಸುಧಾ ಗರಗ, ಕಾರ್ಮಿಕ ಇಲಾಖೆ ಜಿಲ್ಲಾ ಅಧಿಕಾರಿ, ಗದಗ

ಕಾರ್ಮಿಕ ಕಲ್ಯಾಣ ಕಾಯ್ದೆಯಡಿ ನೋಂದಾಯಿಸಲ್ಪಟ್ಟವರಲ್ಲಿ ಕೇವಲ ಶೇ.30ರಷ್ಟು ಫಲಾನುಭವಿಗಳ ಬ್ಯಾಂಕ್ ಖಾತೆಗೆ 2,000 ರೂ.ಯಂತೆ ಪರಿಹಾರಧನ ಜಮೆಯಾಗಿದೆ. ಇನ್ನು ಬಹುತೇಕ ಕಾರ್ಮಿಕರಿಗೆ ಹಣ ಜಮೆಯಾಗಿಲ್ಲ. ನಕಲಿ ದಾಖಲೆ ನೀಡಿ ಹಣ ಲಪಟಾಯಿಸುವ ವಂಚಕರ ಸಂಖ್ಯೆಗೇನೂ ಕಡಿಮೆ ಇಲ್ಲವೆಂದರೂ ಉತ್ಪ್ರೇಕ್ಷೆಯಾಗಲಾರದು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.
ಉಮೇಶ್ ಎಚ್.ಜಿ., ಎಐಟಿಯುಸಿ ರಾಜ್ಯ ಉಪಾಧ್ಯಕ್ಷ

Writer - ಬಂದೇನವಾಝ್ ಮ್ಯಾಗೇರಿ

contributor

Editor - ಬಂದೇನವಾಝ್ ಮ್ಯಾಗೇರಿ

contributor

Similar News