ಲಾಕ್‌ಡೌನ್ ಬಳಿಕದ ರಣತಂತ್ರ ಏನು:ಕೇಂದ್ರ ಸರಕಾರಕ್ಕೆ ಕಾಂಗ್ರೆಸ್ ಪ್ರಶ್ನೆ
ಹೊಸದಿಲ್ಲಿ, ಮೇ 6: ಕೋವಿಡ್-19 ನಿಯಂತ್ರಿಸಲು ಇನ್ನೆಷ್ಟು ದಿನ ಲಾಕ್‌ಡೌನ್ ಮುಂದುವರಿಸಬಹುದು ಎಂಬ ಕುರಿತು ಸರಕಾರ ಯಾವ ಮಾನದಂಡವನ್ನು ಅಳವಡಿಸಿಕೊಂಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಶ್ನಿಸಿದರು.
ಕಾಂಗ್ರೆಸ್ ಆಡಳಿತವಿರುವ ಮುಖ್ಯಮಂತ್ರಿಗಳ ಜೊತೆಗೆ ಬುಧವಾರ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸೋನಿಯಾ, ಮೇ 17ರ ಬಳಿಕ ಏನು ಎಂಬ ಪ್ರಶ್ನೆಗೆ ಉತ್ತರ ಬೇಕು. ಮೂರನೇ ಹಂತದ ಲಾಕ್‌ಡೌನ್ ಮೇ 17ಕ್ಕೆ ಕೊನೆಯಾಗಲಿದೆ ಎಂದರು.
ಸಭೆಯಲ್ಲಿ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ ಉಪಸ್ಥಿತರಿದ್ದರು.
ಮೇ 17ರ ಬಳಿಕ ಏನು, ಮೇ 17ರ ಬಳಿಕ ಹೇಗೆ?ಲಾಕ್‌ಡೌನ್ ಇನ್ನೆಷ್ಟು ದಿನ ಮುಂದುವರಿಸಬಹುದೆಂಬ ಕುರಿತಂತೆ ನಿರ್ಧರಿಸಲು ಕೇಂದ್ರ ಸರಕಾರ ಯಾವ ಮಾನದಂಡವನ್ನು ಬಳಸುತ್ತಿದೆ ಎಂದು ಕಾಂಗ್ರೆಸ್ ಸರಕಾರದ ಸಿಎಂಗಳ ಜೊತೆ ಸೋನಿಯಾ ನಡೆಸಿದ ವೀಡಿಯೊ ಕಾನ್ಫರೆನ್ಸ್‌ನಲ್ಲಿ ಪ್ರಶ್ನಿಸಿದರು ಎಂದು ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.
ಹಲವು ಅಡೆತಡೆಗಳ ನಡುವೆಯೂ ಸಾಕಷ್ಟು ಪ್ರಮಾಣದಲ್ಲಿ ಗೋಧಿಯನ್ನು ಪೂರೈಸಿ ಆಹಾರ ಭದ್ರತೆಯನ್ನು ಒದಗಿಸಿರುವ ರೈತರಿಗೆ ಅದರಲ್ಲೂ ಮುಖ್ಯವಾಗಿ ಪಂಜಾಬ್ ಹಾಗೂ ಹರ್ಯಾಣದ ರೈತರಿಗೆ ಸೋನಿಯಾ ಕೃತಜ್ಞತೆ ಸಲ್ಲಿಸಿದರು.
ಸೋನಿಯಾಜಿ ಈಗಾಗಲೇ ಬೆಟ್ಟು ಮಾಡಿದ್ದು, ದೇಶವನ್ನು ಲಾಕ್‌ಡೌನ್‌ನಿಂದ ಹೊರತರಲು ಭಾರತ ಸರಕಾರ ಯಾವ ರಣನೀತಿಯನ್ನು ಅನುಸರಿಸುತ್ತಿದೆ ಎಂದು ಮುಖ್ಯಮಂತ್ರಿಗಳು ಕೇಳಬೇಕಾಗಿದೆ ಎಂದು ಮನಮೋಹನ್ ಸಿಂಗ್ ಹೇಳಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪಂಜಾಬ್ ಸಿಎಂ ಅಮರಿಂದರ್ ಸಿಂಗ್, ನಾನು ಎರಡು ಸಮಿತಿಯನ್ನು ರಚಿಸಿದ್ದು, ಒಂದು ಸಮಿತಿಯು ಲಾಕ್‌ಡೌನ್‌ನಿಂದ ಹೊರಬರುವುದು ಹೇಗೆೆಂದು ರಣತಂತ್ರ ರೂಪಿಸಲಿದೆ.ಮತ್ತೊಂದು ಆರ್ಥಿಕ ಪುನಶ್ಚೇತನದ ಬಗ್ಗೆ ಚರ್ಚಿಸಲಿದೆ. ಆಯಾ ಸ್ಥಳದಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳದೆ ದಿಲ್ಲಿಯಲ್ಲಿ ಕುಳಿತ್ತಿರುವ ಜನರು ಕೋವಿಡ್-19 ವಲಯವನ್ನು ನಿರ್ಧರಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಮುಖ ಉತ್ತೇಜಿತ ಪ್ಯಾಕೇಜ್ ನೀಡುವ ತನಕ ರಾಜ್ಯಗಳು ಹಾಗೂ ದೇಶ ನಡೆಯುವುದು ಹೇಗೆ? ನಾವು ಈಗಾಗಲೇ 10,000 ಕೋ.ರೂ. ಆದಾಯ ಕಳೆದುಕೊಂಡಿದ್ದೇವೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.