ಇಲ್ಲಿನ ನಿವಾಸಿಗಳ ಫೋನ್ ‍ನಲ್ಲಿ 'ಆರೋಗ್ಯ ಸೇತು' ಆ್ಯಪ್ ಇಲ್ಲದಿದ್ದರೆ ದಂಡ, ಜೈಲು ಶಿಕ್ಷೆ !

Update: 2020-05-06 08:29 GMT

ನೋಯ್ಡಾ: ನೊಯ್ಡಾ ಮತ್ತು ಗ್ರೇಟರ್ ನೊಯ್ಡಾ ನಿವಾಸಿಗಳಿಗೆ ತಮ್ಮ ಮೊಬೈಲ್ ಫೋನ್‍ ನಲ್ಲಿ ಆರೋಗ್ಯ ಸೇತು ಆ್ಯಪ್ ಹೊಂದುವುದು ಕಡ್ಡಾಯವಾಗಿದೆ. ಯಾರಾದರೂ ತಮ್ಮ ಫೋನ್‍ ನಲ್ಲಿ ಈ ಆ್ಯಪ್ ಹೊಂದಿಲ್ಲವೆಂದಾದರೆ ಅವರು ಆರು ತಿಂಗಳು ಜೈಲು ಶಿಕ್ಷೆ ಅಥವಾ 1000 ರೂ. ದಂಡ ಪಾವತಿಸಬೇಕಾಗುತ್ತದೆ ಎಂದು ನೋಯ್ಡಾ ಪೊಲೀಸರು ಹೇಳಿದ್ದಾರೆ.

ಇತರೆಡೆಗಳಿಂದ ನೊಯ್ಡಾ ಅಥವಾ ಗ್ರೇಟರ್ ನೊಯ್ಡಾ ಪ್ರವೇಶಿಸುವವರು ಕೂಡ  ತಮ್ಮ ಮೊಬೈಲ್ ಫೋನ್ ನಲ್ಲಿ ಈ ಆ್ಯಪ್ ಹೊಂದಿರಬೇಕಿದೆ.

ತಪ್ಪಿತಸ್ಥರ ವಿರುದ್ಧ ಐಪಿಸಿಯ ಸೆಕ್ಷನ್ 188 ಅನ್ವಯ ಕ್ರಮ ಕೈಗೊಳ್ಳಬಹುದಾಗಿದೆ. ಅವರು ವಿಚಾರಣೆ ಎದುರಿಸಬೇಕೇ, ಅವರಿಗೆ ದಂಡ ವಿಧಿಸಬೇಕೇ ಅಥವಾ ಎಚ್ಚರಿಕೆ ನೀಡಿ ಬಿಟ್ಟುಬಿಡಬೇಕೇ ಎಂಬ ವಿಚಾರವನ್ನು ಮ್ಯಾಜಿಸ್ಟ್ರೇಟ್ ನಿರ್ಧರಿಸಲಿದ್ದಾರೆ ಎಂದು ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಖಿಲೇಶ್ ಕುಮಾರ್ ತಿಳಿಸಿದ್ದಾರೆ.

ತಪ್ಪಿತಸ್ಥರು ಸಿಕ್ಕಿ ಬಿದ್ದ ಕೂಡಲೇ ಈ ಆ್ಯಪ್ ಡೌನ್‍ಲೋಡ್ ಮಾಡಿದರೆ ಅವರನ್ನು ಬಿಟ್ಟುಬಿಡುತ್ತೇವೆ. ಆದರೆ ಸತತ ಎಚ್ಚರಿಕೆ ನಂತರವೂ ಆರೋಗ್ಯ ಸೇತು ಆ್ಯಪ್ ಅನ್ನು ಅವರು ಡೌನ್‍ಲೋಡ್ ಮಾಡದೇ ಇದ್ದರೆ ಕ್ರಮ ಕೈಗೊಳ್ಳಲಾಗುವುದು. ಮೊಬೈಲ್ ಡಾಟಾ ಹೊಂದಿರದೇ ಇದ್ದವರಿಗೆ ಹಾಟ್‍ಸ್ಪಾಟ್ ಸಂಪರ್ಕ ನೀಡಿ ಡೌನ್‍ಲೋಡ್ ಮಾಡಲು ಹೇಳಲಾಗುವುದು. ಜನರು ಈ ಆ್ಯಪ್ ಡೌನ್‍ಲೋಡ್ ಮಾಡಿದ್ದಾರೆಯೇ ಎಂದು  ಪೊಲೀಸರು ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಗಡಿ ಪ್ರದೇಶಗಳಲ್ಲಿ ತಪಾಸಣೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News