ಲಾಕ್ ಡೌನ್ ಎಫೆಕ್ಟ್: ದೇಶದ ರಿಟೇಲ್ ಕ್ಷೇತ್ರಕ್ಕೆ 5.50 ಲಕ್ಷ ಕೋಟಿ ರೂ. ನಷ್ಟ
ಮುಂಬೈ: ಕೋವಿಡ್-19 ಸೋಂಕು ಹರಡುವಿಕೆ ತಡೆಗಟ್ಟಲು ಮಹತ್ವದ ಕ್ರಮವಾಗಿ ದೇಶಾದ್ಯಂತ ಹೇರಲಾದ ಲಾಕ್‍ಡೌನ್‍ನಿಂದಾಗಿ ಸುಮಾರು 7 ಕೋಟಿ ವರ್ತಕರನ್ನು ಹೊಂದಿರುವ ದೇಶದ ರಿಟೇಲ್ ಕ್ಷೇತ್ರ 5.50 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ವರ್ತಕರ ಸಂಘಟನೆಯಾದ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ಹೇಳಿದೆ.
ಮುಂದಿನ ಕೆಲ ತಿಂಗಳುಗಳಲ್ಲಿ ಕನಿಷ್ಠ ಶೇ 20ರಷ್ಟು ಭಾರತೀಯ ರಿಟೇಲರ್‍ಗಳು ತಮ್ಮ ಉದ್ಯಮವನ್ನು ಮುಚ್ಚಬಹುದು ಎಂದೂ ಸಂಘಟನೆ ಅಂದಾಜಿಸಿದೆ.
ಈ ಹಿನ್ನೆಲೆಯಲ್ಲಿ ಸಾಕಷ್ಟು ನಷ್ಟ ಅನುಭವಿಸಿರುವ ವರ್ತಕರಿಗೆ ಸಹಕಾರಿಯಾಗುವಂತಹ ಹಾಗೂ ಮುಂದೆಯೂ ತಮ್ಮ ವ್ಯಾಪಾರವನ್ನು ನಡೆಸಿಕೊಂಡು ಹೋಗಲು ಅನುವಾಗುವಂತಹ ಪ್ಯಾಕೇಜ್ ಘೋಷಿಸಬೇಕೆಂದೂ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಸರಕಾರವನ್ನು ಆಗ್ರಹಿಸಿದ್ದಾರೆ. ರಿಟೇಲ್ ಕ್ಷೇತ್ರದಲ್ಲಿ ಉಂಟಾಗುವ ನಷ್ಟವು ಇಡೀ ದೇಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂದೂ ಅವರು ಎಚ್ಚರಿಸಿದ್ದಾರೆ.
“ಭಾರತದ ರಿಟೇಲರ್ ಗಳು ಪ್ರತಿದಿನ ಸುಮಾರು 15,000 ಕೋಟಿ ರೂ.ಗಳಷ್ಟು ವ್ಯವಹಾರ ನಡೆಸುತ್ತಾರೆ, ಆದರೆ ಲಾಕ್ ಡೌನ್ ಘೋಷಣೆಯಾದಂದಿನಿಂದ ಅವರಿಗೆ 5.50 ಲಕ್ಷ ಕೋಟಿ ರೂ.ಗೂ ಅಧಿಕ ನಷ್ಟವಾಗಿದೆ ಇದರಿಂದ ಸುಮಾರು 1.5 ಕೋಟಿ ವರ್ತಕರು ಬಾಗಿಲು ಮುಚ್ಚುವ ಅನಿವಾರ್ಯತೆ ಎದುರಾಗಬಹುದು. ಇದು ಅವರ ಮೇಲೆ ಅವಲಂಬಿತ ಇನ್ನೂ 75 ಲಕ್ಷ ವರ್ತಕರನ್ನು ಬಾಧಿಸಬಹುದು'' ಎಂದು ಅವರು ಹೇಳಿದ್ದಾರೆ.
ಭಾರತದ ಕನಿಷ್ಠ 2.5 ಕೋಟಿ ವರ್ತಕರು ಸಣ್ಣ ಮತ್ತು ಅತಿ ಸಣ್ಣ ವರ್ತಕರಾಗಿದ್ದಾರೆ, ಉದ್ಯೋಗಿಗಳ ವೇತನ, ಅಂಗಡಿ ಬಾಡಿಗೆ ಮತ್ತಿತರ ಮಾಸಿಕ ವೆಚ್ಚಗಳಿಂದ ಅವರು ಜರ್ಜರಿತರಾಗಿದ್ದಾರೆ. ಉದ್ಯಮವು ಕನಿಷ್ಠ ಮುಂದಿನ ಆರರಿಂದ ಒಂಬತ್ತು ತಿಂಗಳ ತನಕ ಸಹಜ ಸ್ಥಿತಿಗೆ ಮರಳುವ ಸಾಧ್ಯತೆಯಿಲ್ಲ ಎಂದು ಅವರು ಹೇಳಿದ್ದಾರೆ.
ಸರಕಾರ ಕೂಡಲೇ ಮಧ್ಯಪ್ರವೇಶಿಸಬೇಕು, ಇಲ್ಲದೇ ಹೋದಲ್ಲಿ ದೇಶಕ್ಕೆ ತುಂಬಲಾರದ ನಷ್ಟವುಂಟಾದೀತು ಎಂದು ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಬಿ ಸಿ ಭಾರ್ತಿಯ ಹೇಳಿದ್ದಾರೆ.