ಸೈಕಲ್‌ನಲ್ಲಿ 1,500 ಕಿ.ಮೀ.ದೂರದ ಸ್ವಗ್ರಾಮ ತಲುಪುವ ಪ್ರಯತ್ನದಲ್ಲಿ ಕಾರ್ಮಿಕ ಮೃತ್ಯು
ಹೊಸದಿಲ್ಲಿ,ಮೇ 6: ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಸಾರ್ವಜನಿಕ ಸಾರಿಗೆ ಸ್ಥಗಿತಗೊಂಡಿರುವುದರಿಂದ ಗುಜರಾತಿನ ಅಂಕಲೇಶ್ವರದಿಂದ 1,500 ಕಿ.ಮೀ.ದೂರದ ಉತ್ತರ ಪ್ರದೇಶದ ಖುಷಿನಗರದ ತನ್ನ ಮನೆಯನ್ನು ತಲುಪಲು ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದ ರಾಜೇಶ ಸಹಾನಿ (40) ಎಂಬಾತ ಮಾರ್ಗಮಧ್ಯೆ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.
ಅಂಕಲೇಶ್ವರದ ವಿದ್ಯುತ್ ಉತ್ಪಾದನಾ ಸ್ಥಾವರವೊಂದರ ಉದ್ಯೋಗಿಯಾಗಿದ್ದ ರಾಜೇಶ್ ಅಲ್ಲಿ ಸಿಬ್ಬಂದಿ ವಸತಿಗೃಹದಲ್ಲಿ ವಾಸವಾಗಿದ್ದ. ಸೋಮವಾರ ತನ್ನ ಸ್ವಗ್ರಾಮ ಬಹಾಸ್‌ಗೆ ಸೈಕಲ್‌ನಲ್ಲಿ ಪ್ರಯಾಣ ಆರಂಭಿಸಿದ್ದ ರಾಜೇಶ್ ರಾ.ಹೆ.8ರಲ್ಲಿ 55 ಕಿ.ಮೀ.ಪ್ರಯಾಣಿಸುವಷ್ಟರಲ್ಲಿ ಆಯಾಸದಿಂದ ಕುಸಿದು ಬಿದ್ದವನು ಮತ್ತೆ ಮೇಲಕ್ಕೇಳಲಿಲ್ಲ. ಆತನಿಗೆ ಯಾವುದೇ ಕಾಯಿಲೆಗಳಿರದೆ ಆರೊಗ್ಯವಂತನಾಗಿದ್ದ,ಆತನಲ್ಲಿ ಕೋವಿಡ್-19 ಲಕ್ಷಣಗಳೂ ಇರಲಿಲ್ಲ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಆದರೆ ರಾಜೇಶನ ಸಾವಿಗೆ ಆತನ ಕುಟುಂಬವು ನೀಡಿರುವ ಕಾರಣವು ವಿಭಿನ್ನವಾಗಿದೆ. ಬಳಲಿಕೆ ತನ್ನ ಪತಿಯನ್ನು ಕೊಂದಿದ್ದಲ್ಲ,ಇಂತಹ ಬಿಕ್ಕಟ್ಟಿನ ಸಮಯದಲ್ಲಿ ತನ್ನ ಕುಟುಂಬವನ್ನು ಭೇಟಿಯಾಗುವಲ್ಲಿಯ ಅಸಹಾಯಕತೆಯು ಕೊಂದಿದೆ. ಕೊನೆಯದಾಗಿ ಒಂದು ಬಾರಿ ಪತಿಯ ಮುಖವನ್ನು ನೋಡಲೂ ಸಾಧ್ಯವಾಗಲಿಲ್ಲ ಎಂದು ರಾಜೇಶ ಪತ್ನಿ ಇಂದ್ರಾವತಿ ಅಳಲು ತೋಡಿಕೊಂಡರು.
ರಾಜೇಶನ ಹಿರಿಯ ಸೋದರ ರಾಜು ಕೂಡ ಅದೇ ವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದಾನೆ. ಸೋಮವಾರ ಬೆಳಿಗ್ಗೆ ಕೆಲಸಕ್ಕೆ ತೆರಳುವ ಮುನ್ನ ರಾಜೇಶ್ ರಾಜುವನ್ನು ಭೇಟಿಯಾಗಿದ್ದ. ಇಂದ್ರಾವತಿ ರಾಜೇಶನಿಗೆ ಪೋನ್ ಮಾಡಿದಾಗ ಆತ ಉತ್ತರಿಸಿರಲಿಲ್ಲ, ಹೀಗಾಗಿ ತನ್ನ ಪತಿಯ ಬಗ್ಗೆ ತಿಳಿಯಲು ಆಕೆ ರಾಜುವಿಗೆ ಕರೆ ಮಾಡಿದ್ದರು. ರಾಜು ಪೊಲೀಸರಿಗೆ ಫೋನ್ ಮಾಡಿದಾಗಲೇ ರಾಜೇಶನ ಸಾವಿನ ವಿಷಯ ಗೊತ್ತಾಗಿತ್ತು.
ರಾಜು ಅಂಕಲೇಶ್ವರದಲ್ಲಿ ದುಡಿಯುತ್ತಿದ್ದ ತನ್ನ ಗ್ರಾಮದ 26 ವಲಸೆ ಕಾರ್ಮಿಕರಲ್ಲಿ ಒಬ್ಬನಾಗಿದ್ದ. ಕೃಷಿ ಕಾರ್ಮಿಕನಾಗಿದ್ದ ಆತ ಕಳೆದ ಫೆಬ್ರವರಿಯಲ್ಲಷ್ಟೇ ತನ್ನ ಗ್ರಾಮದಿಂದ ಅಂಕಲೇಶ್ವರಕ್ಕೆ ಬಂದು ಕೆಲಸಕ್ಕೆ ಸೇರಿದ್ದ.