ಕಾಶ್ಮೀರ: ಭದ್ರತಾ ಪಡೆಗಳು – ಉಗ್ರರ ನಡುವೆ ಘರ್ಷಣೆ; 16 ನಾಗರಿಕರಿಗೆ ಗಾಯ

Update: 2020-05-07 17:51 GMT

ಶ್ರೀನಗರ,ಮೇ7: ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿರುವ ಬೇಗ್‌ಪೊರಾ ಗ್ರಾಮದಲ್ಲಿ ಬುಧವಾರ ಭದ್ರತಾ ಪಡೆಗಳು ಹಾಗೂ ಪ್ರತಿಭಟನಕಾರರ ನಡುವೆ ಭುಗಿಲೆದ್ದ ಘರ್ಷಣೆಯಲ್ಲಿ ಕನಿಷ್ಠ 16 ಮಂದಿ ನಾಗರಿಕರು ಗಾಯಗೊಂಡಿದ್ದಾರೆ. ಹಿಜ್ಬುಲ್‌ಮುಜಾಹಿದ್ದೀನ್ ಕಮಾಂಡರ್ ರಿಯಾಝ್ ನೈಕೂ ಹಾಗೂ ಆತನ ಸಹಚರನನ್ನು ಭದ್ರತಾಪಡೆಗಳು ಗುಂಡಿಕ್ಕಿ ಹತ್ಯೆಗೈದ ಕೆಲವೇ ತಾಸುಗಳ ಬಳಿಕ ಬೇಗ್‌ಪೊರಾದಲ್ಲಿ ಕೆಲವರು ಬೀದಿಗಿಳಿದು ಕಲ್ಲೆಸೆತದಲ್ಲಿ ತೊಡಗಿದ್ದರು ಹಾಗೂ ಭದ್ರತಾ ಪಡೆಗಳ ಜೊತೆ ಸಂಘರ್ಷಕ್ಕಿಳಿದಿದ್ದರು.

ಘಟನೆಯಲ್ಲಿ 14 ಮಂದಿಗೆ ಪೆಲ್ಲೆಟ್‌ ಗುಂಡುಗಳಿಂದ ಗಾಯಗಳಾಗಿದ್ದು ಅವರನ್ನು ಶ್ರೀನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪುಲ್ವಾಮ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಆಧೀಕ್ಷಕ ಜಮೀಲ್ ಅಹ್ಮದ್ ತಿಳಿಸಿದ್ದಾರೆ. ಇತರಿಗೆ ಬುಲೆಟ್ ಗಾಯಗಳಾಗಿದ್ದು , ಎಲ್ಲಾ ಗಾಯಾಳುಗಳ ದೇಹಸ್ಥಿತಿ ಸ್ಥಿರವಾಗಿದೆಯೆಂದು ಅವರು ಹೇಳಿದ್ದಾರೆ.

ರಿಯಾಝ್ ನೈಕೂ ಹತ್ಯೆಯ ಬೆನ್ನಲ್ಲೇ ಕಾಶ್ಮೀರ ಕಣಿವೆಯ ಇತರ ಭಾಗಗಳಲ್ಲೂ ಘರ್ಷಣೆಗಳು ನಡೆದಿರುವ ಬಗ್ಗೆ ವರದಿಗಳು ಬಂದಿವೆ. ಉಗ್ರರೊಂದಿಗಿನ ಘರ್ಷಣೆ ಬೆನ್ನಲ್ಲೇ ಕಾಶ್ಮೀರ ಕಣಿವೆಯಾದ್ಯಂತ ಮೊಬೈಲ್ ಹಾಗೂ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಅಲ್ಲೀಗ ಬಿಎಸ್‌ಎನ್‌ಎಲ್ ಪೋಸ್ಟ್‌ಪೇಯ್ಡ್ ಸಂಪರ್ಕಗಳು ಹಾಗೂ ಲ್ಯಾಂಡ್‌ಲೈನ್ ಸೇವೆ ಮಾತ್ರವೇ ಕಾರ್ಯನಿರ್ವಹಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News