×
Ad

ರಾಜ್ಯಸಭೆ ಸೀಟಿನಂತಹ ಹುದ್ದೆ ನಾನು ಸ್ವೀಕರಿಸುತ್ತಿರಲಿಲ್ಲ: ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ದೀಪಕ್ ಗುಪ್ತಾ

Update: 2020-05-08 16:20 IST

ಹೊಸದಿಲ್ಲಿ: ಸುಪ್ರೀಂ ಕೋರ್ಟ್ ನ್ಯಾಯಾಧೀಶ ಹುದ್ದೆಯಿಂದ ಬುಧವಾರ ನಿವೃತ್ತರಾದ ಜಸ್ಟಿಸ್ ದೀಪಕ್ ಗುಪ್ತಾ, ತಾವು ಸರಕಾರ ನೀಡುವ ಯಾವುದೇ ಹುದ್ದೆಯನ್ನೂ ಒಪ್ಪುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

indianexpress.comಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು,  ಕೆಲವು  ಆಯೋಗ ಮತ್ತು ಟ್ರಿಬ್ಯುನಲ್ ‍ಗಳಿಗೆ ನಿವೃತ್ತ  ಸುಪ್ರೀಂ ಕೋರ್ಟ್ ನ್ಯಾಯಾಧೀಶರುಗಳ ಅಗತ್ಯವಿದೆಯಾದರೂ ಈ ಹುದ್ದೆಗಳು ನನಗಲ್ಲ ಎಂದೂ ಅವರು ಹೇಳಿದ್ದಾರೆ. ಇದು ತಮ್ಮ ವೈಯಕ್ತಿಕ ಅಭಿಪ್ರಾಯವೆಂದೂ ಸ್ಪಷ್ಟಪಡಿಸಿದ್ದಾರೆ.

ನಿವೃತ್ತಿಯ ನಂತರ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರಿಗೆ ರಾಜ್ಯಸಭಾ ಹುದ್ದೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು “ಇದು ನನ್ನ ಅಭಿಪ್ರಾಯದಂತೆ  ನಿವೃತ್ತಿ ನಂತರದ  ಹುದ್ದೆ. ನಾನು ಅಂತಹ ಹುದ್ದೆಯನ್ನು ಸ್ವೀಕರಿಸುತ್ತಿರಲಿಲ್ಲ. ಮೇಲಾಗಿ ಅಂತಹ ಹುದ್ದೆಯನ್ನು ಯಾರೂ ನನಗೆ ಆಫರ್ ಮಾಡಬಾರದೆಂಬುದು ನನ್ನ ಅನಿಸಿಕೆ'' ಎಂದಿದ್ದಾರೆ.

ಜನವರಿ 12, 2018ರಂದು ನಾಲ್ಕು ಮಂದಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಆಗಿನ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ದೀಪಕ್ ಮಿಶ್ರಾ ಅವರ ಕಾರ್ಯಶೈಲಿ ಬಗ್ಗೆ ಅಸಮಾಧಾನ ಸೂಚಿಸಿ ನಡೆಸಿದ ಬಹಿರಂಗ ಪತ್ರಿಕಾಗೋಷ್ಠಿ ಕುರಿತು ಪ್ರತಿಕ್ರಿಯಿಸಿದ ಜಸ್ಟಿಸ್ ದೀಪಕ್ ಗುಪ್ತಾ, “ಆ ಪತ್ರಿಕಾಗೋಷ್ಠಿ ನಡೆದಾಗ ನಾನು ವಿದೇಶದಲ್ಲಿದ್ದೆ. ಅದರ ಬಗ್ಗೆ ತಿಳಿದಾಗ ಗಲಿಬಿಲಿಯಾಯಿತು. ಮಾಧ್ಯಮದ ಮುಂದೆ ಹೋಗುವುದು ಒಂದು ಒಳ್ಳೆಯ ಐಡಿಯಾ ಆಗಿರಲಿಲ್ಲ. ವ್ಯಕ್ತಿಗಿಂತ ಯಾವತ್ತೂ ಸಂಸ್ಥೆ ಮಿಗಿಲು. ಆ ನಾಲ್ಕು ಮಂದಿ ನ್ಯಾಯಾಧೀಶರೂ ಏನಿದ್ದರೂ ವ್ಯವಸ್ಥೆಯೊಳಗಡೆಯೇ ಸಮಸ್ಯೆ ಬಗೆಹರಿಸಬೇಕಿತ್ತು. ಅದೇ ಸಮಯ ಮುಖ್ಯ ನ್ಯಾಯಮೂರ್ತಿ ಕೂಡ ಎಲ್ಲಾ ನ್ಯಾಯಾಧೀಶರುಗಳನ್ನೂ ವಿಶ್ವಾಸಕ್ಕೆ ಪಡೆದುಕೊಳ್ಳುವುದು ಮುಖ್ಯ'' ಎಂದರು.

ಮಾಜಿ ಸಿಜೆಐ ರಂಜನ್ ಗೊಗೊಯಿ ಅಧಿಕಾರದಲ್ಲಿದ್ದ ಸಂದರ್ಭ ಅವರ ವಿರುದ್ಧ ಕೇಳಿ ಬಂದ ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ  ಎಪ್ರಿಲ್ 20, 2019 ಶನಿವಾರ ಬೆಳಗ್ಗೆ ಗೊಗೊಯಿ ಅವರ ನೇತೃತ್ವದಲ್ಲಿಯೇ ನಡೆದ ವಿಶೇಷ ಕಲಾಪದ ಕುರಿತಂತೆ ಪ್ರತಿಕ್ರಿಯಿಸಿದ ಜಸ್ಟಿಸ್ ದೀಪಕ್ ಗುಪ್ತಾ,  ಇದು ಸರಿಯಾದ ಕ್ರಮವಾಗಿರಲಿಲ್ಲ. ಈ ಘಟನೆಯಿಂದ ಸುಪ್ರೀಂ ಕೋರ್ಟ್ ಉತ್ತಮವಾಗಿ ಹೊರಬಂದಿಲ್ಲ ಎಂದರು.

ಸುಪ್ರೀಂ ಕೋರ್ಟ್ ನಲ್ಲಿ ಚುನಾವಣಾ ಬಾಂಡ್‍ನಂತಹ ಪ್ರಮುಖ ಪ್ರಕರಣದ ವಿಚಾರಣೆ ಬಹಳಷ್ಟು ವಿಳಂಬಗೊಂಡು ಇತರ ಪ್ರಕರಣಗಳು ಯಾವುದೇ ಕಾರಣವಿಲ್ಲದೆ ಬೇಗನೇ ವಿಚಾರಣೆಗೆ ಬರುವ ಕುರಿತಂತೆ ಮಾತನಾಡಿದ ಅವರು , ಸದ್ಯ ಪ್ರಕರಣಗಳ ವಿಚಾರಣೆ ಯಾವಾಗ ನಡೆಯಬೇಕು ಎಂಬ ಕುರಿತಂತೆ ರಿಜಿಸ್ಟ್ರಿ ಹಾಗೂ ಮುಖ್ಯ ನ್ಯಾಯಮೂರ್ತಿ ನಿರ್ಧರಿಸುವುದರಿಂದ  ಪ್ರಕರಣಗಳು ಯಾವಾಗ ವಿಚಾರಣೆ ನಡೆಯಬೇಕೆಂಬುದು ತಂತ್ರಜ್ಞಾನ ಆಧರಿತವಾಗಬೇಕು. ಇಲ್ಲಿ ಯಾವುದೇ  ರೀತಿಯ ತಾರತಮ್ಯಕ್ಕೆ ಅವಕಾಶವಿರಬಾರದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News