ಕೊರೋನ ವಾರಿಯರ್ಸ್ ಗೆ 1000 ಪಿಪಿಇ ಕಿಟ್ ದೇಣಿಗೆ ನೀಡಿದ ಫರ್ಹಾನ್ ಅಖ್ತರ್

Update: 2020-05-08 12:17 GMT

ಮುಂಬೈ ; ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ತಾವು 1000 ಪಿಪಿಇಗಳನ್ನು ಒದಗಿಸಿರುವುದಾಗಿ ನಟ ಫರ್ಹಾನ್ ಅಖ್ತರ್ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರಲ್ಲದೆ, ಹೆಚ್ಚು ಹೆಚ್ಚು ಪಿಪಿಇಗಳನ್ನು ವೈದ್ಯಕೀಯ ಸಿಬ್ಬಂದಿಗೆ ಒದಗಿಸುವ ಅವಶ್ಯಕತೆ ಇದೆ ಎಂದಿದ್ದಾರೆ.

ಈ ಕುರಿತಂತೆ ವೀಡಿಯೋ ಸಂದೇಶವೊಂದನ್ನೂ ಪೋಸ್ಟ್ ಮಾಡಿರುವ ಅವರು ತಾವು ಸರಕಾರಿ ಆಸ್ಪತ್ರೆಗಳಿಗೆ 1000 ಪಿಪಿಇ ಕಿಟ್ ನೀಡಿದ್ದು ಜನರು ಕೂಡ ಆದಷ್ಟು ಈ ನಿಟ್ಟಿನಲ್ಲಿ ಕೊಡುಗೆಗಳನ್ನು ನೀಡಬೇಕು ಎಂದು ಕರೆ ನೀಡಿದ್ದಾರೆ.

ತಲಾ ಪಿಪಿಇ ಕಿಟ್  ವೆಚ್ಚ ರೂ. 650 ಎಂದೂ ಬರೆದಿರುವ ಅವರು ತಮ್ಮ ಫಾಲೋವರ್ಸ್ ಹೇಗೆ ಅದನ್ನು ಕೊಡುಗೆಯಾಗಿ ನೀಡಬಹುದು ಎಂದು ವಿವರಿಸಿದ್ದಾರಲ್ಲದೆ, ತಾವು ಈ ಕೊಡುಗೆಗಳನ್ನು  ನೀಡುವವರಿಗೆ ವೈಯಕ್ತಿಕವಾಗಿ ಧನ್ಯವಾದ ತಿಳಿಸುವುದಾಗಿಯೂ ಹೇಳಿದ್ದಾರೆ.

ಕೊರೋನ ವಾರಿಯರ್ಸ್‍ಗೆ ಪಿಪಿಇ ಕಿಟ್‍ಗಳನ್ನು ಯಾವ ವೆಬ್ ಸೈಟ್ ಮೂಲಕ ಒದಗಿಸಬಹುದೆಂಬುದರ ಲಿಂಕ್ ಕೂಡ ಅವರು ನೀಡಿದ್ದಾರೆ. “ನಿಮ್ಮ ದೇಣಿಗೆಗಾಗಿ ನಾನು ನಿಮಗೆ ವೈಯಕ್ತಿಕವಾಗಿ ಧನ್ಯವಾದ ಹೇಳುತ್ತೇನೆ. ಒಂದೋ ಪೋಸ್ಟ್ ಮೂಲಕ, ರೆಕಾರ್ಡ್ ಮಾಡಲಾದ ವೀಡಿಯೋ ಮೂಲಕ ಅಥವಾ ವೀಡಿಯೋ ಕಾಲ್ ಮೂಲಕ'' ಎಂದು 46 ವರ್ಷದ ನಟ ಹೇಳಿದ್ದಾರೆ.

ಫರ್ಹಾನ್ ಅಖ್ತರ್ ಹೊರತಾಗಿ ನಟಿಯರಾದ ವಿದ್ಯಾ ಬಾಲನ್ ಹಾಗೂ ಸೊನಾಕ್ಷಿ ಸಿನ್ಹಾ ಕೂಡ  ಪಿಪಿಇ ಕಿಟ್‍ಗಳನ್ನು ದೇಣಿಗೆ ನೀಡಲು ಹಣ ಸಂಗ್ರಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News