ಅಣ್ಣಾವ್ರ ಅಭಿಮಾನಿಗಳು ಅರ್ಥ ಮಾಡಿಕೊಳ್ಳುವುದು ಮುಖ್ಯ: ಎಸ್.ಕೆ.ಭಗವಾನ್

Update: 2020-05-10 08:02 GMT

ನಿರ್ದೇಶಕ ಎಸ್.ಕೆ.ಭಗವಾನ್ ಅವರು ಸುದ್ದಿಯಲ್ಲಿದ್ದಾರೆ. ಈ ಬಾರಿ ಹೊಸ ನಿರ್ದೇಶನದ ಮೂಲಕ ಅಲ್ಲ; ಬದಲಿಗೆ ಹಳೆಯ ಸಂದರ್ಶನದ ಮೂಲಕ! ರಾಜ್ ಕುಮಾರ್ ನಟನೆಯ 36 ಚಿತ್ರಗಳನ್ನು ನಿರ್ದೇಶಿಸಿದ ಕೀರ್ತಿ ‘ದೊರೆ ಭಗವಾನ್’ ಜೋಡಿಯದ್ದು. ಇದೀಗ ಭಗವಾನ್ ಅವರು ಮತ್ತೆ ಸುದ್ದಿಯಾಗಿರುವುದು ಕೂಡ ರಾಜ್‌ಕುಮಾರ್ ಅವರ ವಿಚಾರದಲ್ಲೇ ಎನ್ನುವುದು ವಿಶೇಷ. ಹಿಂದೊಮ್ಮೆ ರಾಜ್ ಕುಮಾರ್ ಅವರಿಗಾಗಿ ‘ಗ್ರಹಣ’ ಕಾದಂಬರಿಯ ಹಕ್ಕು ಕೇಳಲು ಸಾಹಿತಿ ಎಸ್ .ಎಲ್.ಭೈರಪ್ಪನವರ ಬಳಿಗೆ ಹೋಗಿದ್ದಾಗ ಅವರು 'ರಾಜ್ ಕುಮಾರ್ ಒಬ್ಬ ಆಕ್ಟರೇನ್ರಿ?' ಎಂದು ಪ್ರಶ್ನಿಸಿ, ಕಾದಂಬರಿಯ ಹಕ್ಕು ಕೊಡುವುದಿಲ್ಲ ಎಂದಿದ್ದರಂತೆ. ಈ ವಿಚಾರವನ್ನು ಭಗವಾನ್ ಅವರು ತಮ್ಮ ಹಳೆಯ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದು, ಅದು ಈಗ ವಿವಾದಾಸ್ಪದವೆನಿಸಿದೆ. ಪ್ರಸ್ತುತ ರಾಜ್ ಕುಮಾರ್ ಅಭಿಮಾನಿಗಳು ಮತ್ತು ಅವರ ನಟನೆಯನ್ನು ಇಷ್ಟಪಡದವರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಅದುವೇ ದೊಡ್ಡ ಮಟ್ಟದ ಚರ್ಚೆಯಾಗಿದೆ. ಈ ಎಲ್ಲ ವಿಚಾರಗಳ ಬಗ್ಗೆ ಸ್ವತಃ ಎಸ್.ಕೆ.ಭಗವಾನ್ ಅವರು ತಮ್ಮ ಅನಿಸಿಕೆಯನ್ನು ‘ವಾರ್ತಾಭಾರತಿ’ಯೊಂದಿಗೆ ಹಂಚಿಕೊಂಡಿದ್ದಾರೆ.

ನಿಮ್ಮ ಹೇಳಿಕೆಯೊಂದು ವಿವಾದಕ್ಕೆ ಕಾರಣವಾದ ಬಗ್ಗೆ ಏನು ಹೇಳುತ್ತೀರ?
ಅಯ್ಯೋ.. ಅದನ್ನು ನಾನು ಯಾವತ್ತೋ ಹೇಳಿದ್ದೆ. ಈಗ ಕೆಲವರು ಮನೆಯಲ್ಲಿ ಕುಳಿತು ಹಳೆಯ ವೀಡಿಯೊ ತೆಗೆದು ವಿವಾದ ಮಾಡುತ್ತಿದ್ದಾರೆ. ‘ಎಮ್ಟಿ ಮೈಂಡ್ ಈಸ್ ಎ ಡೆವಿಲ್ಸ್ ವರ್ಕ್ ಶಾಪ್’ ಎನ್ನುವ ಆಂಗ್ಲ ಗಾದೆಮಾತಿನ ಹಾಗೆ, ಲಾಕ್‌ಡೌನ್‌ನಿಂದಾಗಿ ಖಾಲಿ ತಲೆಯೊಳಗೆ ಮನೆಯೊಳಗೆ ಕುಳಿತವರು ಅನಗತ್ಯವಾಗಿ ಹೀಗೆ ವಿವಾದ ಮಾಡಲು ಹೊರಟಿದ್ದಾರೆ. ಇಲ್ಲವಾದರೆ ನಾನು ಆ ಸಂದರ್ಶನದಲ್ಲಿ ಮಾತನಾಡಿ ವರ್ಷಗಳೇ ಆಗಿವೆ. ಅದನ್ನು ಈಗ ಸುದ್ದಿ ಮಾಡಬೇಕಿತ್ತೇ? ಅದರಲ್ಲಿ ಯಾರೆಲ್ಲರ ಹತ್ತಿರ ಕಾದಂಬರಿಗಳಿಗಾಗಿ ಹೋಗಿದ್ದೇನೆ, ಕಷ್ಟಪಟ್ಟಿದ್ದೇನೆ ಎನ್ನುವುದನ್ನು ಹೇಳುವಾಗ ಬಂದಂಥ ಮಾತು ಅದು. ಅದರಿಂದ ಅವರ ಪ್ರತಿಕ್ರಿಯೆಯನ್ನಷ್ಟೇ ಹೈಲೈಟ್ ಮಾಡಲಾಗುತ್ತಿದೆ.

ಭೈರಪ್ಪನವರು ಆ ಮಾತು ಹೇಳಿದ್ದನ್ನು ನೀವು ಡಾ.ರಾಜ್‌ಕುಮಾರ್ ಅವರಲ್ಲಿ ಹೇಳಿದ್ದಿರಾ?
ಇಲ್ಲ! ಯಾಕೆಂದರೆ ಅಂದು ಅದು ನನಗೆ ಮುಖ್ಯವಾಗಿರಲಿಲ್ಲ. ಆಗಲೇ ಹೇಳಿದಂತೆ ನಾನು ಯಾವುದಾದರೊಂದು ಒಳ್ಳೆಯ ಕಾದಂಬರಿಯನ್ನು ಸಿನೆಮಾ ಮಾಡುವ ಗುರಿಯಷ್ಟೇ ಹೊಂದಿದ್ದೆ. ಒಬ್ಬರಲ್ಲದಿದ್ದರೆ ಮತ್ತೊಬ್ಬರು ಸಾಹಿತಿಯ ಒಳ್ಳೆಯ ಕಾದಂಬರಿ ತಂದು ಚಿತ್ರ ಮಾಡಬೇಕು ಎನ್ನುವುದಷ್ಟೇ ನನ್ನ ಉದ್ದೇಶವಾಗಿತ್ತು. ಹಾಗಾಗಿ ಭೈರಪ್ಪನವರ ನಿರಾಕರಣೆಯ ಮಾತುಗಳನ್ನು ಅಲ್ಲೇ ಮರೆತು ಬಂದೆ. ಮಾತ್ರವಲ್ಲ, ಅದನ್ನು ದೊಡ್ಡದು ಮಾಡುವ ಸ್ವಭಾವವೂ ನನ್ನದಲ್ಲ. ಈಗಲೂ ಅಷ್ಟೇ ಭೈರಪ್ಪನವರ ಹೇಳಿಕೆ ಇರಿಸಿಕೊಂಡು ವಿವಾದ ಮಾಡಬೇಕಾದ ಅಗತ್ಯ ನನಗಿಲ್ಲ. ಅವರು ಹಾಗೆ ಹೇಳಿದ್ದು ನಿಜವಾದರೂ, ಈ ಸಮಯದಲ್ಲಿ ನಾನು ಅದನ್ನು ವಿವಾದವಾಗಿಸಿದಂತೆ ಕಂಡು ಬಂದಲ್ಲಿ ನಾನು ಭೈರಪ್ಪನವರ ಕ್ಷಮೆ ಕೇಳುತ್ತೇನೆ. ಆ ದೊಡ್ಡ ಸಾಹಿತಿಗೆ ಸಾಷ್ಟಾಂಗ ಬೀಳಲು ನಾನು ಸಿದ್ಧನಿದ್ದೇನೆ.

ಒಂದು ವೇಳೆ ರಾಜ್‌ಕುಮಾರ್ ಅವರಲ್ಲೇ ನೀವು ಈ ಮಾತು ಹೇಳಿದ್ದರೆ ಏನಾಗುತ್ತಿತ್ತು?

ಅಣ್ಣಾವ್ರು ಅದನ್ನು ಕೇಳಿ ಹೌದು ನಾವು ಇನ್ನಷ್ಟು ಚೆನ್ನಾಗಿ ನಟಿಸಬೇಕಿದೆ ಎಂದು ಹೇಳುತ್ತಿದ್ದರೇನೋ! ಯಾಕೆಂದರೆ ಅವರು ಇದ್ದಾಗ ಕೂಡ ವಿಮರ್ಶೆಗಳಿಗೆ ಕೊರತೆ ಇರಲಿಲ್ಲ. ಅವರು ಎಲ್ಲವನ್ನು ಕೂಡ ಸ್ವೀಕರಿಸುತ್ತಿದ್ದರು. ಅದರಲ್ಲಿ ಕೂಡ ಸಾಹಿತಿಗಳ ಮಾತು ಎಂದರೆ ತುಂಬ ಗೌರವಿಸುತ್ತಿದ್ದರು. ಅವರೆಂದಿಗೂ ತಮ್ಮನ್ನೊಬ್ಬ ದೊಡ್ಡ ನಟ ಎಂದು ಅಂದುಕೊಂಡಿರದ ಕಾರಣ ವಿಮರ್ಶೆಗಳು ಅವರನ್ನು ಘಾಸಿಗೊಳಿಸುತ್ತಿರಲಿಲ್ಲ. ಬದಲಾಗಿ ಹೊಗಳಿಕೆ ಬಂದಾಗ ತಾವು ಮಾಡಿರುವುದಕ್ಕಿಂತ ಹೆಚ್ಚಿನ ಪ್ರಶಂಸೆ ಬಂತೇನೋ ಎನ್ನುವಂತೆ ವರ್ತಿಸುತ್ತಿದ್ದರು. ಇದು ತೋರ್ಪಡಿಕೆಯಾಗಿರಲಿಲ್ಲ. ಯಾಕೆಂದರೆ ಅಣ್ಣಾವ್ರು ತಮ್ಮ ನಟನೆಯ ಯಾವುದೇ ಚಿತ್ರವನ್ನು ಕೂಡ ನಮ್ಮಂದಿಗೆ ಕುಳಿತು ನೋಡಿದವರಲ್ಲ. ಹಾಗೆ ನೋಡುವಷ್ಟು ಚೆನ್ನಾಗಿ ನಾನು ನಟಿಸಿಲ್ಲ ಎನ್ನುವುದು ಅವರ ಆತಂಕ! ಅವರು ಥಿಯೇಟರಲ್ಲಿ ನೋಡಿದ ತಮ್ಮ ಚಿತ್ರ ‘ಮಂತ್ರಾಲಯ ಮಹಾತ್ಮೆ’ ಮಾತ್ರ! ಉಳಿದವನ್ನೆಲ್ಲ ಕ್ಯಾಸೆಟ್ ಬಂದ ಮೇಲಷ್ಟೇ ನೋಡಿದ್ದರು!

ನೀವು ರಾಜ್‌ಕುಮಾರ್ ಅವರ ಅಭಿಮಾನಿಗಳಲ್ಲಿ ಹೇಳಬಯಸುವುದೇನು?

ಅಣ್ಣಾವ್ರು ಸಾಹಿತಿಗಳಿಗೆ, ಬರಹಗಾರರಿಗೆ ಎಷ್ಟು ಗೌರವ ಕೊಡುತ್ತಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸಿನೆಮಾದ ಯಶಸ್ವಿ ಕಾರ್ಯಕ್ರಮಗಳಿಗೆ ಅತಿಥಿಗಳಾಗಿ ಸಾಹಿತಿಗಳನ್ನು ಕರೆಯೋಣ ಎಂದು ಹೇಳುತ್ತಿದ್ದರು. ಬರಗೂರು ರಾಮಚಂದ್ರಪ್ಪ, ನಿಸಾರ್ ಅಹಮದ್ ಮೊದಲಾದವರು ಆಗಾಗ ಮನೆಗೆ ಬರುತ್ತಿದ್ದರು. ಅಣ್ಣಾವ್ರು ತಮ್ಮಅಭಿಮಾನಿಗಳನ್ನು ದೇವರು ಅಂದಿದ್ದವರು. ಹಾಗಾಗಿ ಅವರು ತಮ್ಮ ಹೆಸರಿನಲ್ಲಿ ನಡೆಯುವ ಈ ರೀತಿಯ ವಿವಾದಗಳನ್ನು ಖಂಡಿತವಾಗಿ ಇಷ್ಟಪಡುತ್ತಿರಲಿಲ್ಲ. ಕ್ಷಮಿಸುವವನು ದೊಡ್ಡವನು ಎಂದು ಅವರು ಹೇಳುತ್ತಿದ್ದರು. ನನ್ನ ಹೇಳಿಕೆಗಳಿಂದ ಅಭಿಮಾನಿಗಳಿಗೆ ನೋವಾಗಿದ್ದರೆ ನನ್ನನ್ನು ಕ್ಷಮಿಸಬೇಕು. ‘ಒಬ್ಬರ ಪಾಲಿನ ಪಾಯಸ ಮತ್ತೊಬ್ಬರ ಪಾಲಿಗೆ ಪಾಯ್ಸನ್ ಆಗಬಹುದು’ ಎಂದು ಕೈಲಾಸಂ ಅವರು ಹೇಳುತ್ತಿದ್ದರು. ಅವರವರ ಅಭಿಪ್ರಾಯ ಅವರವರಿಗೆ. ಇನ್ನೊಬ್ಬರ ಇಷ್ಟಾನಿಷ್ಟಗಳನ್ನು ಬಲವಂತದಿಂದ ತಿದ್ದುವ ಬದಲು ಕ್ಷಮಿಸುವುದು ದೊಡ್ಡತನ.

ನೀವು ಈ ಲಾಕ್‌ಡೌನ್ ಸಂದರ್ಭವನ್ನು ಹೇಗೆ ಕಳೆಯುತ್ತಿದ್ದೀರಿ?

 ನಾನು ವರ್ಷಾರಂಭದಿಂದಲೇ ಓಡಾಟ ಕಡಿಮೆ ಮಾಡಿದ್ದೆ. ವಾಕಿಂಗ್ ಒಂದು ಅಭ್ಯಾಸವಿತ್ತು. ಈಗ ಕೊರೋನ ವೈರಸ್ ಕಾಟದಿಂದ ಅದು ಕೂಡ ನಿಂತಿದೆ. ನನ್ನ ವಯಸ್ಸಿನವರು ಹೊರಗೆ ಬರಲೇ ಬಾರದಂತೆ. ಹಾಗಾಗಿ ಒಳಗೆಯೇ ಇದ್ದು ಸಿನೆಮಾ ನೋಡುತ್ತಿರುತ್ತೇನೆ. ಪುಸ್ತಕ ಓದುತ್ತೇನೆ. ಏನಾದರೂ ಬರೆಯುವುದು ಇರುತ್ತದೆ. ಇತ್ತೀಚಿನ ವರ್ಷಗಳಲ್ಲಿ ನಮ್ಮ ಕನ್ನಡದಲ್ಲಿ ಒಳ್ಳೆಯ ಪ್ರಯೋಗಗಳು ನಡೆಯುತ್ತಿವೆ. ಸ್ಟಾರ್ ಇಲ್ಲದಿದ್ದರೂ ಚಿತ್ರ ನೋಡಿ ಗೆಲ್ಲಿಸುವಂಥ ಪ್ರೇಕ್ಷಕರು ಕೂಡ ನಮ್ಮಲ್ಲಿದ್ದಾರೆ. ‘ಕಿರಿಕ್ ಪಾರ್ಟಿ’, ‘ಒಂದು ಮೊಟ್ಟೆಯ ಕತೆ’ ಮೊದಲಾದ ಚಿತ್ರಗಳ ಮೂಲಕ ಅಂಥದೊಂದು ಟ್ರೆಂಡ್ ಆರಂಭವಾಗಿದೆ. ನಾನಂತೂ ಇನ್ನು ಹೊಸ ಸಿನೆಮಾ ನಿರ್ದೇಶನದ ಕನಸು ಕಾಣಲಾರೆ. ಆದರೆ ಒಳ್ಳೆಯ ಸಿನೆಮಾಗಳನ್ನು ನೋಡಿ ಕಾಲಕಳೆಯುತ್ತಿದ್ದೇನೆ.

Writer - ಸಂದರ್ಶನ: ಶಶಿಕರ ಪಾತೂರು

contributor

Editor - ಸಂದರ್ಶನ: ಶಶಿಕರ ಪಾತೂರು

contributor

Similar News