ಮನಮೋಹನ್ ಸಿಂಗ್ ಆರೋಗ್ಯ ಸ್ಥಿರ: ಏಮ್ಸ್
Update: 2020-05-11 13:32 IST
ಹೊಸದಿಲ್ಲಿ, ಮೇ 11: ಎದೆನೋವಿನ ಕಾರಣಕ್ಕೆ ರವಿವಾರ ರಾತ್ರಿ ದಿಲ್ಲಿಯ ಏಮ್ಸ್ (ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ)ದಾಖಲಾಗಿದ್ದ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ಇಂದು ಬೆಳಗ್ಗೆ ತಿಳಿಸಿವೆ.
ಕಾಂಗ್ರೆಸ್‌ನ ಹಿರಿಯ ನಾಯಕನನ್ನು ರವಿವಾರ ರಾತ್ರಿ 8:45ರ ಸುಮಾರಿಗೆ ವೈದ್ಯಕೀಯ ಸಂಸ್ಥೆಯ ಕಾರ್ಡಿಯೋ ಥೊರಾಸಿಕ್ ವಾರ್ಡ್‌ನೊಳಗೆ ಕರೆದೊಯ್ಯಲಾಗಿತ್ತು. ತಪಾಸಣೆಯ ಬಳಿಕ ಅವರು ಹೊಸ ಔಷಧಿಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಏಮ್ಸ್ ಮೂಲಗಳು ತಿಳಿಸಿವೆ.
ಕಾರ್ಡಿಯೋ ಥೊರಾಸಿಕ್‌ನ ವೈದ್ಯರ ತಂಡ ಸಿಂಗ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದು, ಜ್ವರಕ್ಕೆ ಇತರ ಕಾರಣವಿಲ್ಲ ಎಂದು ಮೂಲಗಳು ತಿಳಿಸಿವೆ.
87 ವಯಸ್ಸಿನ ಎರಡು ಬಾರಿ ಪ್ರಧಾನಮಂತ್ರಿಯಾಗಿದ್ದ ಸಿಂಗ್‌ರನ್ನು ಕಾರ್ಡಿಯೊಲಾಜಿಯ ಪ್ರೊಫೆಸರ್ ಡಾ.ನಿತೀಶ್ ನಾಯಕ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.