ಅತ್ಯಾಚಾರದ ಚಾಟ್: ಆಕ್ರೋಶ ಸೃಷ್ಟಿಸಿದ್ದ BoisLockerRoom ಚಾಟ್ ರೂಂ ಪ್ರಕರಣದಲ್ಲಿ ಹೊಸ ತಿರುವು

Update: 2020-05-11 10:03 GMT

ಹೊಸದಿಲ್ಲಿ: ದಿಲ್ಲಿಯ ಶಾಲಾ ಬಾಲಕರ ಇನ್‍ ಸ್ಟಾಗ್ರಾಂ ಗ್ರೂಪ್ ಒಂದರ #BoisLockerRoom ಎಂಬ ಚಾಟ್ ರೂಂನಲ್ಲಿ ‘ಗ್ಯಾಂಗ್ ರೇಪ್’ ಕುರಿತಾದ ಕಮೆಂಟ್ ಒಂದು ಕಳೆದ ವಾರ ಭಾರೀ  ಕೋಲಾಹಲವನ್ನೇ ಸೃಷ್ಟಿಸಿದ್ದರೆ, ಇದೀಗ ಈ ಪ್ರಕರಣದಲ್ಲೊಂದು ತಿರುವು ದೊರಕಿದೆ. ಈ ನಿರ್ದಿಷ್ಟ ‘ಗ್ಯಾಂಗ್ ರೇಪ್' ಕಮೆಂಟ್ ಆ ಚಾಟ್ ರೂಂನಲ್ಲಿ ನಡೆದೇ ಇರಲಿಲ್ಲ ಬದಲಾಗಿ  ತಾನೊಬ್ಬ ಹುಡುಗ ಎಂದು ಬಿಂಬಿಸಿ ಹುಡುಗಿಯೊಬ್ಬಳು  ಹುಡುಗನೊಬ್ಬನ ಪ್ರತಿಕ್ರಿಯೆ ತಿಳಿಯಲು ಈ ಕಮೆಂಟ್ ಮಾಡಿದ್ದಳೆಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.

ಈ ಹುಡುಗಿ ಹಾಗೂ ಹುಡುಗ ಇಬ್ಬರೂ ಈ #BoisLockerRoom ರೂಂ ಜತೆ ನಂಟು ಹೊಂದಿಲ್ಲವೆನ್ನಲಾಗಿದೆ. ಆದರೆ ಅವರ ಸ್ನ್ಯಾಪ್ ಚ್ಯಾಟ್ ಸಂವಾದದ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ  #BoisLockerRoom  ಇನ್‍ಸ್ಟಾಗ್ರಾಂ ಗ್ರೂಪ್‍ನ ಚ್ಯಾಟ್ ಜತೆ ಸೇರಿಕೊಂಡಿದ್ದರಿಂದ ಈ ಗೊಂದಲವೇರ್ಪಟ್ಟಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

“ಆ ನಿರ್ದಿಷ್ಟ ವಿವಾದಾತ್ಮಕ ಸ್ನ್ಯಾಪ್ ಚ್ಯಾಟ್ ಸಂವಾದ  ಅದನ್ನು ಕಳುಹಿಸಿದ ಹುಡುಗಿ ಹಾಗೂ  ಅದಕ್ಕೆ ಉತ್ತರಿಸಿದ ಹುಡುಗನ ನಡುವೆ ನಡೆದಿತ್ತು. ಆ ಹುಡುಗಿಯ ಸ್ನ್ಯಾಪ್ ಚ್ಯಾಟ್ ಖಾತೆಯ ಹೆಸರು `ಸಿದ್ಧಾರ್ಥ್ ಆಗಿತ್ತು'' ಎಂದು ಪೊಲೀಸರು ತಿಳಿಸಿದ್ದಾರೆ.

“ನಕಲಿ ಐಡಿ  ಹೊಂದುವುದು ತಪ್ಪಾದರೂ, ಈ ನಿರ್ದಿಷ್ಟ ಪ್ರಕರಣದಲ್ಲಿ ಹುಡುಗಿ ಕೆಟ್ಟ ಉದ್ದೇಶ ಹೊಂದಿರದ ಕಾರಣ ಯಾವುದೇ ದೂರು ದಾಖಲಿಸಲಾಗುವುದಿಲ್ಲ'' ಎಂದು ಪೊಲೀಸರು ತಿಳಿಸಿದ್ದಾರೆ.

ಆ ಹುಡುಗಿಯ ಜತೆ ಸ್ನ್ಯಾಪ್ ಚ್ಯಾಟ್ ನಲ್ಲಿ  ಆ ಹುಡುಗ ಸಂಬಂಧ ಕಡಿದುಕೊಂಡಿದ್ದು ನಂತರ  ಈ ಸಂವಾದದ ಕುರಿತಂತೆ ಆತ  ತನ್ನ ಸ್ನೇಃಹಿತರ ಜತೆ ಚರ್ಚಿಸಿದ್ದ ಹಾಗೂ ಆ ನಿರ್ದಿಷ್ಟ ಸಂವಾದದ ಸ್ಕ್ರೀನ್ ಶಾಟ್ ಶೇರ್ ಮಾಡಿದ್ದ. ಇದಕ್ಕೆ ತಾನು ಕಾರಣ ಎಂದು ತಿಳಿದಿದ್ದ ಹುಡುಗಿ ಘಟನೆ ಕುರಿತು ದೂರು ನೀಡಿಲ್ಲ.

#BoisLockerRoom ಆರಂಭಿಸಿದ್ದ 12ನೇ ತರಗತಿ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ಕಳೆದ ವಾರ ಬಂಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News