‘ಅರ್ನಬ್ ಗೋಸ್ವಾಮಿ ವಿಚಾರಣೆ ನಡೆಸಿದ್ದ ಒಬ್ಬ ಪೊಲೀಸ್ ಅಧಿಕಾರಿಗೆ ಕೊರೋನ ವೈರಸ್ ಸೋಂಕು’

Update: 2020-05-11 16:36 GMT

ಹೊಸದಿಲ್ಲಿ, ಮೇ. 11: ಕೋಮುಸೌಹಾರ್ದ ಕದಡುವ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ರಿಪಬ್ಲಿಕ್ ಟಿವಿಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರ ಮಧ್ಯಂತರ ಜಾಮೀನಿನ ಅವಧಿಯನ್ನು ಸುಪ್ರೀಂಕೋರ್ಟ್ ಮುಂದಿನ ಆದೇಶದವರೆಗೆ ವಿಸ್ತರಿಸಿದೆ.

ತನ್ನ ವಿರುದ್ಧದ ಆರೋಪಗಳಿಗೆ ಸಂಬಂಧಿಸಿ ಮಹಾರಾಷ್ಟ್ರ ಪೊಲೀಸರು ಸಲ್ಲಿಸಿರುವ ಎಫ್‌ಐಆರ್ ವರದಿಯನ್ನು ರದ್ದುಪಡಿಸಬೇಕೆಂದು ಕೋರಿ ಅರ್ನಬ್ ಗೋಸ್ವಾಮಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

  ಅರ್ನಬ್ ಅವರ ಅರ್ಜಿಯ ಮೇಲಿನ ಆದೇಶವನ್ನು ನ್ಯಾಯಾಲಯ ಇಂದು ಕಾದಿರಿಸಿದ್ದು, ಮುಂದಿನ ವಾರ ಅದನ್ನು ಪ್ರಕಟಿಸುವ ನಿರೀಕ್ಷೆಯಿದೆ. ಗೋಸ್ವಾಮಿ ಅವರಿಗೆ ಎಪ್ರಿಲ್ 24ರವರೆಗೆ ಮಧ್ಯಂತರ ಜಾಮೀನು ನೀಡಲಾಗಿತ್ತು. ‘ನ್ಯಾಯಾಲಯದ ಆದೇಶ ಪ್ರಕಟವಾಗುವವರೆಗೆ ಈ ಆದೇಶವು ಚಾಲ್ತಿಯಲ್ಲಿರುವುದು’’ ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ ಹಾಗೂ ಎಂ.ಆರ್.ಶಾ ಅವರಿದ್ದ ನ್ಯಾಯಪೀಠ ಸೂಚಿಸಿದೆ.

ಪ್ರಕರಣದ ತನಿಖೆಯನ್ನು ಸ್ವತಂತ್ರ ತನಿಖಾ ಸಂಸ್ಥೆಗೆ ವರ್ಗಾಯಿಸಬೇಕೆಂಬ ಕೋರಿ ಅರ್ನಬ್ ಸಲ್ಲಿಸಿರುವ ಮನವಿಯನ್ನು ಕೂಡಾ ತಾನು ಪರಿಶೀಲಿಸುವುದಾಗಿ ನ್ಯಾಯಾಲಯ ತಿಳಿಸಿದೆ. ಗೋಸ್ವಾಮಿಯವರು ಒತ್ತಡ ಹಾಗೂ ಬೆದರಿಕೆಯ ತಂತ್ರವನ್ನು ಅನುಸರಿಸುತ್ತಿದ್ದಾರೆಂಬ ಪೊಲೀಸರ ಆರೋಪಗಳ ಬಗ್ಗೆಯೂ ತನಿಖೆ ನಡೆಸುವುದಾಗಿ ಅದು ಹೇಳಿದೆ.

ಎಪ್ರಿಲ್ 24ರಂದು ನ್ಯಾಯಾಲಯವು ಗೋಸ್ವಾಮಿಗೆ ಮಧ್ಯಂತರ ಜಾಮೀನು ರಕ್ಷಣೆಯನ್ನು ನೀಡಿದ್ದು, ಅವರ ವಿರುದ್ಧ ಎಲ್ಲಾ ಎಫ್‌ಐಆರ್‌ಗಳಿಗೆ ತಡೆಯಾಜ್ಞೆ ವಿಧಿಸಿತ್ತು. ಮಹಾರಾಷ್ಟ್ರದ ಕಾಂಗ್ರೆಸ್ ಸಚಿವ ನಿತಿನ್ ರಾವತ್ ಆರಂಭದಲ್ಲಿ ಅರ್ನಬ್ ವಿರುದ್ಧ ನಾಗಪುರದಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಆದರೆ ಸುಪ್ರೀಂಕೋರ್ಟ್ ಪ್ರಕರಣವನ್ನು ಮುಂಬೈಗೆ ವರ್ಗಾಯಿಸಿತ್ತು.

ತನ್ನ ವಿರುದ್ಧ ಸಲ್ಲಿಸಿದ ಎಫ್‌ಐಆರ್ ರಾಜಕೀಯ ಪ್ರೇರಿತ ಹಾಗೂ ಮುಂಬೈ ಪೊಲೀಸರು ತನ್ನ ವಿರುದ್ಧ ಕೆಟ್ಟ ಭಾವನೆ ಹಾಗೂ ದ್ವೇಷವನ್ನು ಹೊಂದಿದ್ದಾರೆಂದು ಅವರು ಆಪಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News