ನಕಲಿ ಚಿತ್ರ ಶೇರ್ ಮಾಡಿದ ಆರೋಪ: ಕೇಂದ್ರ ಸಚಿವ ಸುಪ್ರಿಯೋ ವಿರುದ್ಧ ಪ್ರಕರಣ

Update: 2020-05-11 14:44 GMT

ಕೋಲ್ಕತಾ,ಮೇ 11: ಪ.ಬಂಗಾಳ ಸರಕಾರದ ಮುಖ್ಯ ಕಾರ್ಯದರ್ಶಿ ರಾಜೀವ ಸಿನ್ಹಾ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸೋದರ ಕಾರ್ತಿಕ್ ಬ್ಯಾನರ್ಜಿ ಸೇರಿದಂತೆ ಕೆಲವರೊಂದಿಗೆ ಪಾನಕೂಟದಲ್ಲಿ ಭಾಗಿಯಾಗಿರುವುದನ್ನು ತೋರಿಸಿರುವ ‘ನಕಲಿ’ ಚಿತ್ರವೊಂದನ್ನು ಟ್ವಟರ್‌ನಲ್ಲಿ ಶೇರ್ ಮಾಡಿದ್ದಕ್ಕಾಗಿ ಕೋಲ್ಕತಾ ಪೊಲೀಸರು ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಮತ್ತು ಇತರ ಕೆಲವರ ವಿರುದ್ಧ ಐಪಿಸಿಯ ಜಾಮೀನುರಹಿತ ಕಲಮ್‌ಗಳಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಎಂದು ಹಿರಿಯ ಅಧಿಕಾರಿಯೋರ್ವರು ಸೋಮವಾರ ಇಲ್ಲಿ ತಿಳಿಸಿದರು.

ನಕಲಿ ಪೋಸ್ಟ್‌ಗಳು/ಚಿತ್ರಗಳನ್ನು ಶೇರ್ ಮಾಡಿಕೊಳ್ಳುವುದು ದಂಡನಾರ್ಹ ಅಪರಾಧವಾಗಿದೆ ಎಂದರು.

ಇದಕ್ಕೂ ಮುನ್ನ ದಕ್ಷಿಣ ಕೋಲ್ಕತಾದ ಡಿಸಿಪಿ,‘ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಪೋಸ್ಟ್ ನಕಲಿಯಾಗಿದೆ. ಸಂದೇಶದಲ್ಲಿ ಶೇರ್ ಮಾಡಿಕೊಂಡಿರುವ ಮಾಹಿತಿಯು ಸುಳ್ಳಾಗಿದೆ. ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡು,ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ ’ಎಂದು ಟ್ವೀಟಿಸಿದ್ದರು.

 ತನ್ನ ವಿರುದ್ಧ ಪ್ರಕರಣವನ್ನು ದಾಖಲಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಸುಪ್ರಿಯೊ,‘ಚಿತ್ರವನ್ನು ತಾನು ಬಿಡುಗಡೆಗೊಳಿಸಿರಲಿಲ್ಲ. ಅದಾಗಲೇ ವೈರಲ್ ಆಗಿದ್ದನ್ನು ತಾನು ಮೇ 8ರಂದು ಶೇರ್ ಮಾಡಿದ್ದೆ. ರಾಜ್ಯ ಪೊಲೀಸರು ತೃಣಮೂಲ ಕಾಂಗ್ರೆಸ್‌ನ ವಿಸ್ತರಿತ ಭಾಗವಾಗಿದ್ದಾರೆ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಿದೆ ’ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News