ಕಾರ್ಮಿಕ ಹಕ್ಕುಗಳ ದಮನಕ್ಕೆ ಕೊರೋನ ವೈರಸ್ ನೆಪವಾಗಬಾರದು: ರಾಹುಲ್

Update: 2020-05-11 16:04 GMT

ಹೊಸದಿಲ್ಲಿ,ಮೇ 11: ಕಾರ್ಮಿಕ ಕಾನೂನುಗಳನ್ನು ದುರ್ಬಲಗೊಳಿಸು ತ್ತಿರುವುದಕ್ಕಾಗಿ ರಾಜ್ಯ ಸರಕಾರಗಳ ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಅವರು ಕೊರೋನ ವೈರಸ್ ಹಾವಳಿಯ ನೆಪದಲ್ಲಿ ಕಾರ್ಮಿಕರನ್ನು ಅವರ ಮೂಲಭೂತ ಹಕ್ಕುಗಳಿಂದ ವಂಚಿತರನ್ನಾಗಿಸಲು ಸಾಧ್ಯವಿಲ್ಲವೆಂದು ಎಚ್ಚರಿಕೆ ನೀಡಿದ್ದಾರೆ.

‘‘ಹಲವಾರು ರಾಜ್ಯಗಳು ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿಗೊಳಿಸುತ್ತಿವೆ. ನಾವೆಲ್ಲರೂ ಕೊರೋನ ವೈರಸ್ ವಿರುದ್ಧ ಒಟ್ಟಾಗಿ ಹೋರಾಡುತ್ತಿದ್ದೇವೆ. ಆದರೆ ಮಾನವಹಕ್ಕುಗಳನ್ನು ದಮನಿಸಲು, ಅಸುರಕ್ಷಿತ ಕೆಲಸದ ಸ್ಥಳಗಳಿಗೆ ಅನುಮತಿ ನೀಡಲು, ಕಾರ್ಮಿಕರನ್ನು ಶೋಷಿಸಲು ಮತ್ತು ಅವರ ಧ್ವನಿಗಳನ್ನು ಹತ್ತಿಕ್ಕಲು ಕೊರೋನವೈರಸ್ ಹಾವಳಿ ಒಂದು ನೆಪವಾಗಬಾರದು. ನಮ್ಮ ಮೂಲಭೂತ ತತ್ವಾದರ್ಶಗಳೊಂದಿಗೆ ನಾವು ರಾಜಿ ಮಾಡಿಕೊಳ್ಳಕೂಡದು’’ ಅವರು ಟ್ವೀಟ್ ಮಾಡಿದ್ದಾರೆ.

ಈ ಮಧ್ಯೆ ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಕಾರ್ಮಿಕ ಕಾನೂನುಗಳನ್ನು ದುರ್ಬಲಗೊಳಿಸುವುದರಿಂದ ಅಪಾಯಕಾರಿ ಪರಿಣಾಮಗಳಾಗಲಿವೆಯೆಂದು ರಾಜ್ಯ ಸರಕಾರಗಳಿಗೆ ಎಚ್ಚರಿಕೆ ನೀಡಿದ್ದಾರೆ. ‘‘ ಮೋದಿ ಸರಕಾರ ಯೋಜನೆ ಹಾಕಿಕೊಂಡಿರುವಂತೆ, ಆರ್ಥಿಕ ಪುನಶ್ಚೇತನ ಹಾಗೂ ಉತ್ತೇಜನ ನೀಡುವ ನೆಪದಲ್ಲಿ ಕಾರ್ಮಿಕ, ಭೂ ಹಾಗೂ ಪರಿಸರ ಕಾನೂನು, ಕಾಯ್ದೆಗಳನ್ನು ಸಡಿಲಗೊಳಿಸುವುದು ವಿನಾಶಕಾರಿಯಾಗಿದೆ’’ ಎಂದವರು ಟ್ವೀಟಿಸಿದ್ದಾರೆ.

‘ಕಾರ್ಮಿಕ ಕಾನೂನುಗಳನ್ನು ದುರ್ಬಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಮೊದಲ ಹೆಜ್ಜೆಗಳನ್ನಿಡಲಾಗಿದೆ. ನಗದು ಅಮಾನ್ಯತೆಯ ಹಾಗೆ ಇದು ಕೂಡಾ ಒಂದು ಪೊಳ್ಳು ಪರಿಹಾರವಾಗಿದೆ’ ಎಂದು ಅವರು ಟ್ವಿಟರ್‌ನಲ್ಲಿ ಟೀಕಿಸಿದ್ದಾರೆ.

ಕೊರೋನವೈರಸ್ ಹಾವಳಿ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ದೇಶಾದ್ಯಂತ ಲಾಕ್‌ಡೌನ್ ಹೇರಿರುವುದರಿಂದ ಆರ್ಥಿಕ ಚಟುವಟಿಕೆಗಳಿಗೆ ಭಾರೀ ಹಾನಿಯುಂಟಾಗಿದ್ದು, ಅದಕ್ಕೆ ಪುನಶ್ಚೇತನ ನೀಡುವುದಕ್ಕಾಗಿ ಉತ್ತರಪ್ರದೇಶ ಸೇರಿದಂತೆ ಹಲವಾರು ಸರಕಾರಗಳು ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿಗೊಳಿಸಲು ನಿರ್ಧರಿಸಿವೆ. ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಕಾಯ್ದೆ, ವೇತನ ಪಾವತಿ ಕಾಯ್ದೆಯ ಸೆಕ್ಷನ್ 5, ಕಾರ್ಮಿಕರ ಪರಿಹಾರ ಕಾಯ್ದೆ ಹಾಗೂ ಜೀತ ಕಾರ್ಮಿಕರ ಕಾಯ್ದೆ, ಇವುಗಳಿಗೆ ತಿದ್ದುಪಡಿ ಮಾಡಲು ಅವು ನಿರ್ಧರಿಸಿವೆ.

ಮಧ್ಯಪ್ರದೇಶ ಸರಕಾರವು ಕಂಪೆನಿಗಳಿಗೆ ಕಾರ್ಮಿಕ ಇಲಾಖೆಯ ಪರಿಶೀಲನೆಗೊಳಪಡುವುದರಿಂದ ವಿನಾಯಿತಿ ನೀಡಲಾಗಿದೆ. ಕಾರ್ಮಿಕರ ಪಾಳಿಗಳ ಅವಧಿಯನ್ನು ವಿಸ್ತರಿಸುವುದಕ್ಕೆ ಅವಕಾಶ ನೀಡುವುದಕ್ಕಾಗಿ ಕಾರ್ಮಿಕರ ನೋಂದಣಿ ಪುಸ್ತಕಗಳ ಕಡ್ಡಾಯ ನಿರ್ವಹಣೆಯಿಂದಲೂ ಅವುಗಳಿಗೆ ವಿನಾಯಿತಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News