ವಲಸೆ ಕಾರ್ಮಿಕರು ಹಳಿಗಳು, ರಸ್ತೆಗಳಲ್ಲಿ ಕಾಲ್ನಡಿಗೆಯಿಂದ ಸಾಗದಂತೆ ನೋಡಿಕೊಳ್ಳಿ: ರಾಜ್ಯಗಳಿಗೆ ಕೇಂದ್ರದ ಸೂಚನೆ

Update: 2020-05-11 18:11 GMT

ಹೊಸದಿಲ್ಲಿ, ಮೇ 11: ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳಲು ರೈಲ್ವೆ ಹಳಿಗಳು ಮತ್ತು ರಸ್ತೆಗಳಲ್ಲಿ ಕಾಲ್ನಡಿಗೆಯಿಂದ ಸಾಗದಂತೆ ನೋಡಿಕೊಳ್ಳಬೇಕೆಂದು ಕೇಂದ್ರವು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೋಮವಾರ ತಿಳಿಸಿದೆ. ಅವರನ್ನು ಸಮಾಲೋಚನೆಗೆ ಒಳಪಡಿಸುವಲ್ಲಿ ಮತ್ತು ಲಾಕ್‌ಡೌನ್‌ನಿಂದಾಗಿ ಅತಂತ್ರರಾಗಿರುವ ಕಾರ್ಮಿಕರಿಗಾಗಿ ಹೆಚ್ಚು ಶ್ರಮಿಕ್ ರೈಲುಗಳನ್ನು ಓಡಿಸುವಲ್ಲಿ ಸಹಕರಿಸುವಂತೆಯೂ ಅದು ಕೋರಿಕೊಂಡಿದೆ.

ಇತ್ತೀಚಿಗೆ ಮಹಾರಾಷ್ಟ್ರದ ಔರಂಗಾಬಾದ್ ಬಳಿ ಮಧ್ಯಪ್ರದೇಶದ ತಮ್ಮ ಸ್ವಗ್ರಾಮಕ್ಕೆ ವಾಪಸಾಗುತ್ತಿದ್ದ 16 ವಲಸೆ ಕಾರ್ಮಿಕರು ಸರಕು ಸಾಗಣೆ ರೈಲಿಗೆ ಬಲಿಯಾದ ಹಿನ್ನೆಲೆಯಲ್ಲಿ ಸರಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಪತ್ರವನ್ನು ಬರೆದಿದೆ.

ರವಿವಾರ ಸಂಪುಟ ಕಾರ್ಯದರ್ಶಿ ರಾಜೀವ ಗಾಬಾ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯನ್ನು ಪತ್ರದಲ್ಲಿ ಪ್ರಸ್ತಾಪಿಸಿರುವ ಕೇಂದ್ರ ಗೃಹ ಕಾರ್ಯದರ್ಶಿ ಅಜಯ ಭಲ್ಲಾ ಅವರು,ವಲಸೆ ಕಾರ್ಮಿಕರು ರಸ್ತೆಗಳು ಮತ್ತು ರೈಲ್ವೆ ಹಳಿಗಳಲ್ಲಿ ನಡೆದುಕೊಂಡು ಹೋಗುತ್ತಿರುವ ಸ್ಥಿತಿಯ ಬಗ್ಗೆ ಸಭೆಯು ಕಳವಳ ವ್ಯಕ್ತಪಡಿಸಿದೆ ಎಂದು ತಿಳಿಸಿದ್ದಾರೆ.

ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳಲು ಬಸ್‌ಗಳು ಮತ್ತು ಶ್ರಮಿಕ್ ರೈಲುಗಳ ಸಂಚಾರಕ್ಕೆ ಈಗಾಗಲೇ ಅವಕಾಶವನ್ನು ನೀಡಲಾಗಿರುವುದರಿಂದ ಈ ಕಾರ್ಮಿಕರು ರಸ್ತೆಗಳು ಮತ್ತು ರೈಲುಹಳಿಗಳಲ್ಲಿ ನಡೆದುಕೊಂಡು ಹೋಗುವ ದುಸ್ಸಾಹಸಕ್ಕೆ ಇಳಿಯದಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನೋಡಿಕೊಳ್ಳಬೇಕು. ಕಾರ್ಮಿಕರು ಕಾಲ್ನಡಿಗೆಯಿಂದ ಸಾಗುತ್ತಿರುವುದು ಕಂಡುಬಂದರೆ ಅವರನ್ನು ಸೂಕ್ತ ಸಮಾಲೋಚನೆಗೊಳಪಡಿಸಬೇಕು ಹಾಗೂ ಅವರು ತಮ್ಮ ಊರುಗಳಿಗೆ ಮರಳಲು ಬಸ್‌ಗಳು ಅಥವಾ ಶ್ರಮಿಕ್ ರೈಲುಗಳನ್ನು ಹತ್ತುವವರೆಗೆ ಅವರಿಗೆ ವಸತಿ ಮತ್ತು ಅನ್ನಾಹಾರಗಳನ್ನು ಒದಗಿಸಬೇಕು ಎಂದು ಗೃಹ ಸಚಿವಾಲಯವು ಪತ್ರದಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News