ಉತ್ತರ ಲಡಾಖ್ ನ ಗಡಿಯಲ್ಲಿ ಹಾರಾಡಿದ ಚೀನಿ ಹೆಲಿಕಾಪ್ಟರ್‌ಗಳು
ಹೊಸದಿಲ್ಲಿ,ಮೇ 12: ಉತ್ತರ ಲಡಾಖ್‌ನ ಇನ್ನೂ ಗುರುತಿಸಿರದ ಭಾರತ-ಚೀನಾ ಗಡಿ ಸಮೀಪದ ವಾಯುಪ್ರದೇಶದಲ್ಲಿ ಚೀನಿ ಹೆಲಿಕಾಪ್ಟರ್‌ಗಳು ಹಾರಾಟ ನಡೆಸಿದ್ದವೆಂದು ಅಧಿಕೃತ ಮೂಲಗಳು ತಿಳಿಸಿವೆ. ಕಳೆದ ವಾರವಷ್ಟೇ ಉತ್ತರ ಲಡಾಖ್‌ನಲ್ಲಿಯ ಪ್ಯಾಂಗಾಂಗ್ ಲೇಕ್ ಸಮೀಪ ಉಭಯ ದೇಶಗಳ ಸುಮಾರು 250 ಸೈನಿಕರು ಪರಸ್ಪರ ಘರ್ಷನೆಗೆ, ಇದು ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಿತ್ತು. ಮರುದಿನ ಸ್ಥಳೀಯ ಕಮಾಂಡರ್‌ಗಳ ಸಭೆಯಲ್ಲಿ ಬಿಕ್ಕಟ್ಟಿಗೆ ಅಂತ್ಯ ಹಾಡಲು ಉಭಯ ದೇಶಗಳು ನಿರ್ಧರಿಸುವುದರೊಂದಿಗೆ ಪರಿಸ್ಥಿತಿ ತಿಳಿಯಾಗಿತ್ತು.
ಈ ಬಿಕ್ಕಟ್ಟಿನ ಬಳಿಕ ಚೀನಿ ಹೆಲಿಕಾಪ್ಟರ್‌ಗಳು ಕನಿಷ್ಠ ಎರಡು ಬಾರಿ ವಾಸ್ತವಿಕ ನಿಯಂತ್ರಣ ರೇಖೆಯ ಬಳಿ ಹಾರಾಟ ನಡೆಸಿವೆ. ಇದಕ್ಕೆ ಉತ್ತರವಾಗಿ ಭಾರತೀಯ ವಾಯುಪಡೆಯ ಎಸ್‌ಯು-30 ಯುದ್ಧವಿಮಾನಗಳೂ ಪ್ರದೇಶದಲ್ಲಿ ಹಾರಾಟ ನಡೆಸಿವೆ. ಈ ಜಟಾಪಟಿಯ ಬಳಿಕ ಉಭಯ ದೇಶಗಳು ಈ ಪ್ರದೇಶಕ್ಕೆ ಹೆಚ್ಚುವರಿ ಸೈನಿಕರನ್ನು ರವಾನಿಸಿವೆ.
ಚೀನಿ ಹೆಲಿಕಾಪ್ಟರ್‌ಗಳು ಗಡಿಯ ತಮ್ಮ ವಾಯುಪ್ರದೇಶದಲ್ಲಿ ಮಾಮೂಲು ಹಾರಾಟಗಳನ್ನು ನಡೆಸುತ್ತಿರುತ್ತವೆ ಮತ್ತು ಭಾರತೀಯ ಹೆಲಿಕಾಪ್ಟರ್‌ಗಳೂ ಇಲ್ಲಿ ಹಾರಾಟ ನಡೆಸುತ್ತಿರುತ್ತವೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ಮೇ 5ರಂದು ಪ್ಯಾಂಗಾಂಗ್ ಲೇಕ್ ಪ್ರದೇಶದಲ್ಲಿ ಘರ್ಷನೆಗಿಳಿದಿದ್ದ ಭಾರತ ಮತ್ತು ಚೀನಾದ ಸೈನಿಕರು ಪರಸ್ಪರ ಕಲ್ಲು ತೂರಾಟಕ್ಕೂ ಇಳಿದಿದ್ದರು. ಇದರಿಂದಶಾಗಿ ಉಭಯ ದೇಶಗಳ ಹಲವಾರಿ ಸೈನಿಕರು ಗಾಯಗೊಂಡಿದ್ದರು. 2017,ಆಗಸ್ಟ್‌ನಲ್ಲಿ ಈ ಪ್ರದೇಶದಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಹೊಯ್-ಕೈ ನಡೆದಿತ್ತು. ಅದರ ನಂತರ ಇದೇ ಮೊದಲ ಬಾರಿಗೆ ಇಂತಹ ಘಟನೆ ನಡೆದಿದೆ.
ಪ್ರತ್ಯೇಕ ಘಟನೆಯಲ್ಲಿ ಶನಿವಾರ ಭಾರತ-ಚೀನಾ ಗಡಿಯ ಸಿಕ್ಕಿಂ ವಿಭಾಗದಲ್ಲಿಯ ನಾಕು ಲಾ ಪಾಸ್ ಬಳಿ ಉಭಯ ದೇಶಗಳ ಸುಮಾರು 150 ರಷ್ಟು ಸೈನಿಕರು ಪರಸ್ಪರ ಘರ್ಷಣೆಗಿಳಿದಿದ್ದು,ಕನಿಷ್ಠ 10 ಜನರು ಗಾಯಗೊಂಡಿದ್ದರು.