ಕೊರೋನ ಭೀತಿ: ಇಬ್ಬರು ಸಿಆರ್‌ಪಿಎಫ್ ಅಧಿಕಾರಿಗಳ ಆತ್ಮಹತ್ಯೆ

Update: 2020-05-12 16:31 GMT

ಶ್ರೀನಗರ: ಕಾಶ್ಮೀರದಲ್ಲಿ ಮಂಗಳವಾರ ಕೊರೋನ ಭೀತಿಯಿಂದ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯ ಇಬ್ಬರು ಅಧಿಕಾರಿಗಳು ತಮ್ಮ ಸರ್ವೀಸ್ ರೈಫಲ್‌ನಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಮತ್ತನ್ ಎಂಬಲ್ಲಿ ಸಿಆರ್‌ಪಿಎಫ್ ಇನ್‌ಸ್ಪೆಕ್ಟರ್ ಫತಾಹ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದು, ಇವರು ರಾಜಸ್ಥಾನದ ಜೈಸಲ್ಮೇರ್ ಮೂಲದವರು. “ನನಗೆ ಕೊರೋನಾ ಸೋಂಕು ತಗುಲಿರುವ ಬಗ್ಗೆ ನನಗೆ ಭೀತಿ ಇದೆ” ಎಂದು ಆತ್ಮಹತ್ಯೆ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

ಇವರ ಮೃತದೇಹದ ಅಂತ್ಯಸಂಸ್ಕಾರ ವಿಚಾರದಲ್ಲಿ ಕೋವಿಡ್-19 ಶಿಷ್ಟಾಚಾರ ಅನುಸರಿಸಲಾಗುವುದು ಎಂದು ಮತ್ತನ್ ಠಾಣೆಯ ಠಾಣಾಧಿಕಾರಿ ಜಝೀಬ್ ಅಹ್ಮದ್ ಸ್ಪಷ್ಟಪಡಿಸಿದ್ದಾರೆ. ಅವರ ಗಂಟಲು ಸ್ರಾವ ಮಾದರಿ ಪಡೆಯಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಅವರಿಗೆ ಕೊರೋನ ಸೋಂಕು ತಗುಲಿತ್ತೇ ಎನ್ನುವುದು ಪರೀಕ್ಷಾ ವರದಿಯ ಬಳಿಕ ಖಚಿತವಾಗಲಿದೆ ಎಂದು ಅವರು ಹೇಳಿದ್ದಾರೆ.

ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಶ್ರೀನಗರದಲ್ಲಿ ಕರ್ತವ್ಯದಲ್ಲಿದ್ದ ಸಿಆರ್‌ಪಿಎಫ್ ಎಎಸ್‌ಐ ಕೂಡಾ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರು ಈ ನಿರ್ಧಾರ ಕೈಗೊಳ್ಳಲು ಏನು ಕಾರಣ ಎನ್ನುವುದನ್ನು ಹುಡುಕುವ ಪ್ರಯತ್ನ ನಡೆದಿದೆ ಎಂದು ಸಿಆರ್‌ಪಿಎಫ್ ವಿಶೇಷ ಮಹಾನಿರ್ದೇಶಕ ಜುಲ್ಫೀಕರ್ ಹಸನ್ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News