×
Ad

ಕೋವಿಡ್ ಪಾಸಿಟಿವ್ ಆದ ಇನ್‌ಸ್ಪೆಕ್ಟರ್‌ಗೆ ಇಲಾಖೆಯಿಂದಲೇ ಕಿರುಕುಳ: ಸಿಎಂಗೆ ಪುತ್ರನ ದೂರು

Update: 2020-05-13 09:44 IST

ಮುಂಬೈ, ಮೇ 13: ಕಳೆದ ವಾರ ಔರಂಗಾಬಾದ್‌ನಲ್ಲಿ 56 ವರ್ಷದ ಪೊಲೀಸ್ ಇನ್‌ಸ್ಪೆಕ್ಟರ್‌ಗೆ ಕೊರೋನ ವೈರಸ್ ಸೋಂಕು ತಗುಲಿತ್ತು. ಕೆಲವೇ ದಿನಗಳಲ್ಲಿ ಅವರ ಮನೆಯ ಐದು ಮಂದಿಯೂ ಸೋಂಕಿತರಾದರು. ಆದರೆ ಕೊರೋನ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು, ಸೋಂಕಿತರಾದ ಇಂಥ ಕ್ಲಿಷ್ಟ ಪರಿಸ್ಥಿತಿಯಲ್ಲಿ ಅವರಿಗೆ ಸಾಂಸ್ಥಿಕ ನೆರವು ಸಿಗುವ ಬದಲು, ಹಿರಿಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ನಾನು ಹಾಗೂ ಕುಟುಂಬ ತಾರತಮ್ಯಕ್ಕೆ ಒಳಗಾಗಿದ್ದೇವೆ. ಹಿರಿಯ ಅಧಿಕಾರಿಗಳು ಅನುಚಿತವಾಗಿ ನಡೆಸಿಕೊಳ್ಳುತ್ತಿದ್ದಾರೆ ಎನ್ನುವುದು ಅವರ ಆರೋಪ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಯವರಿಗೆ ಈ ಅಧಿಕಾರಿಯ ಮಗ, ಯುವ ಐಎಎಸ್ ಆಕಾಂಕ್ಷಿ ಈ ಸಂಬಂಧ ಪತ್ರ ಬರೆದು, ಔರಂಗಾಬಾದ್ ಪೊಲೀಸ್ ಇಲಾಖೆ ತನ್ನ ಹೊಣೆಯಿಂದ ನುಣುಚಿಕೊಳ್ಳುತ್ತಿದೆ ಹಾಗೂ ತಂದೆಗೆ ಕೊರೋನ ಸೋಂಕು ತಗುಲಿದ ಬಳಿಕ ಅವರನ್ನು ಮತ್ತು ನಮ್ಮ ಕುಟುಂಬವನ್ನು ಮುಸ್ಲಿಮರು ಎಂಬ ಕಾರಣಕ್ಕೆ ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ ಎಂದು ಆಪಾದಿಸಿದ್ದಾರೆ.

ರಾಜ್ಯದಲ್ಲಿ 50 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಅಧಿಕಾರಿಗಳನ್ನು ಕ್ಷೇತ್ರಕ್ಕೆ ಕಳುಹಿಸದಿರಲು ಸರ್ಕಾರ ನಿರ್ಧರಿಸಿತ್ತು. ಆದರೆ 56 ವರ್ಷದ ತಂದೆಯನ್ನು ಬಲವಂತವಾಗಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಹೈಪರ್ ಟೆನ್ಷನ್ ಹಾಗೂ ಬೊಜ್ಜಿನ ಹೊರತಾಗಿಯೂ ಪ್ರತಿದಿನ ಮುಂಜಾನೆ ಗಸ್ತು ಕಾರ್ಯಕ್ಕೆ ಕಳುಹಿಸಲಾಗುತ್ತಿತ್ತು ಎಂದು ಮೇ 8ರಂದು ಬರೆದ ಪತ್ರದಲ್ಲಿ ವಿವರಿಸಿದ್ದಾರೆ. ನನ್ನ ತಪಾಸಣೆ ವರದಿ ತಂದೆಯ ಆರೋಗ್ಯ ತಪಾಸಣಾ ವರದಿಗಿಂತ ಮೊದಲು ಬಂದ ಹಿನ್ನೆಲೆಯಲ್ಲಿ ಇಲಾಖೆ, ಕುಟುಂಬಕ್ಕೆ ಸೋಂಕು ಹರಡಿದ ಆರೋಪವನ್ನು ನನ್ನ ಮೇಲೆ ಹೊರಿಸುವ ಯತ್ನ ಮಾಡಿತು ಎಂದು ನಾಗರಿಕ ಸೇವಾ ಪರೀಕ್ಷೆಗೆ ಸಜ್ಜಾಗುತ್ತಿದ್ದ ಅವರು ದೂರಿದರು. ಅವರು ಮಾರ್ಚ್ 20ರಂದು ದಿಲ್ಲಿಯಿಂದ ವಾಪಸ್ಸಾಗಿದ್ದರು.

ಸಿಎಂಗೆ ಬರೆದ ಪತ್ರದಲ್ಲಿ ಕಾಲ್ ರೆಕಾರ್ಡಿಂಗ್ ತುಣುಕನ್ನೂ ಲಗತ್ತಿಸಲಾಗಿದೆ. ಮಗ ಅಸ್ಥಸ್ಥರಾಗುವುದಕ್ಕೆ ಒಂದೂವರೆ ತಿಂಗಳು ಮೊದಲು  ದಿಲ್ಲಿಯಿಂದ  ವಾಪಸ್ಸಾಗಿದ್ದಾನೆ ಎಂದು ಇನ್‌ಸ್ಪೆಕ್ಟರ್ ಡಿಸಿಪಿ ಮೀನಾ ಮಕ್ವಾನಾ ಅವರಿಗೆ ಹೇಳುತ್ತಿರುವುದು ತುಣುಕಿನಲ್ಲಿ ಕೇಳಿಸುತ್ತದೆ. ಆದಾಗ್ಯೂ ಮಗನೇ ವೈರಸ್‌ನ ಮೂಲ ಎಂದು ಪೊಲೀಸ್ ಇಲಾಖೆ ಮೇ 7ರಂದು ಪತ್ರಿಕಾ ಪ್ರಕಟನೆ ನೀಡಿತ್ತು. ಕರ್ತವ್ಯದಲ್ಲಿದ್ದಾಗ ತಂದೆಗೆ ಕೊರೋನಾ ಹರಡಿದ ಹಿನ್ನೆಲೆಯಲ್ಲಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಇಲಾಖೆ ಯತ್ನಿಸುತ್ತಿದೆ ಎಂದು ಅವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News