ಬಸ್‌ಗಳ ವ್ಯವಸ್ಥೆ ಮಾಡಿ: ಪ್ರಧಾನಿ ಪ್ಯಾಕೇಜ್ ಬಗ್ಗೆ ಸೈಕಲ್‌ನಲ್ಲಿ ಮನೆಯತ್ತ ಹೊರಟ ವಲಸೆ ಕಾರ್ಮಿಕರ ಪ್ರತಿಕ್ರಿಯೆ
ಲಕ್ನೊ, ಮೇ 13: ಕೊರೋನ ವೈರಸ್ ಬಳಿಕ ಲಾಕ್‌ಡೌನ್‌ನಿಂದ ಪರದಾಡುತ್ತಿರುವ ಸಣ್ಣ ವ್ಯಾಪಾರಿಗಳು,ರೈತರು ಹಾಗೂ ವಲಸೆ ಕಾರ್ಮಿಕರಿಗೆ ನೆರವಾಗಲು ಪ್ರಧಾನಮಂತ್ರಿ ನರೇಂದ್ರ ಮೋದಿ 20 ಲಕ್ಷ ಕೋಟಿ ರೂ.ವಿಶೇಷ ಪ್ಯಾಕೇಜ್‌ನ್ನು ಘೋಷಿಸಿದ್ದರು. ಸೈಕಲ್ ತುಳಿದುಕೊಂಡೇ ಲಕ್ನೊದಿಂದ ಛತ್ತೀಸ್‌ಗಢದಲ್ಲಿರುವ ತಮ್ಮ ಹಳ್ಳಿಯನ್ನು ತಲುಪಲು ಯತ್ನಿಸುತ್ತಿರುವ ವಲಸೆ ಕಾರ್ಮಿಕರ ಕುಟುಂಬ ಪ್ರಧಾನಿ ಘೋಷಣೆಯ ಬೆನ್ನಿಗೆ ಪ್ರತಿಕ್ರಿಯಿಸುತ್ತಾ,"ಇಷ್ಟೊಂದು ದೊಡ್ಡ ಮೊತ್ತದ ಘೋಷಣೆಯಿಂದ ನಮಗೆ ಹೆಚ್ಚೇನು ಸಂತೋಷವಾಗಿಲ್ಲ. ವೇಗವಾಗಿ ಸಾಗುವ ವಾಹನಗಳ ಅಡಿ ಊರತ್ತ ಸೈಕಲ್‌ನಲ್ಲಿ ಹೊರಟವರು ಬಿದ್ದು ಸಾಯುವುದನ್ನು ಕೇಳಿ ಭಯವಾಗುತ್ತಿದೆ. ಸರಕಾರ ನಮಗೆ ಬಸ್‌ಗಳ ವ್ಯವಸ್ಥೆ ಮಾಡಿದರೆ ಉತ್ತಮ'' ಎಂದು ಹೇಳಿದ್ದಾರೆ.
ನಮಗೆ ಕೆಲಸವೇ ಇಲ್ಲ. ಹೀಗಾಗಿ ನಮಗೆ ಈ ಪ್ಯಾಕೇಜ್‌ನಿಂದ ಖುಷಿಯೇ ಇಲ್ಲ. ನಾನು ಕಾರ್ಮಿಕ. ನನಗೆ ಕೆಲಸವೇ ಇಲ್ಲ.ನಾವು ಏನನ್ನು ತಿನ್ನುವುದು? ಹೀಗಾಗಿ ನನ್ನೂರಿಗೆ ತೆರಳಿ ಹೊಲದಲ್ಲಿ ಕೆಲಸ ಮಾಡುವುದೇ ಉತ್ತಮ ಎಂದು ಉತ್ತರಪ್ರದೇಶದ ರಾಜಧಾನಿಯಲ್ಲಿ ತನ್ನ ಪತಿಯೊಂದಿಗೆ ಕೂಲಿ ಕೆಲಸ ಮಾಡುತ್ತಿರುವ ಲಕ್ಷ್ಮೀ ಸಾಹು ಹೇಳಿದ್ದಾರೆ.
ಲಕ್ಷ್ಮೀ ಕುಟುಂಬ ರಸ್ತೆ ಬದಿಯಲ್ಲಿ ಉರಿ ಬಿಸಿಲಿನಲ್ಲಿ ಬಿಸ್ಕಿಟ್ ಹಾಗೂ ಚಹಾ ಕುಡಿದು ಊರತ್ತ ಪ್ರಯಾಣ ಬೆಳೆಸಿದೆ. ಮಂಗಳವಾರ ರಾತ್ರಿ ತಮ್ಮ ಗುಡಿಸಲಿನಿಂದ ಪ್ರಯಾಣ ಬೆಳೆಸಿದ್ದಾರೆ. 70 ಕಿ.ಮೀ.ದೂರದಲ್ಲಿರುವ ರಾಯ್‌ಬರೇಲಿಗೆ ಇಂದು ಬೆಳಗ್ಗೆ ತಲುಪಿದ್ದಾರೆ.
ಪ್ರಧಾನಮಂತ್ರಿ ಪ್ಯಾಕೇಜ್‌ನ ಲಾಭದ ಕುರಿತು ಪತ್ರಕರ್ತನೊಬ್ಬ ಪದೇ ಪದೇ ಪ್ರಶ್ನೆ ಕೇಳಿದಾಗ ಉತ್ತರಿಸಿದ ಲಕ್ಷ್ಮೀ,"ಏನು ಲಾಭವಿದೆ? ನಾವು ಪಡಿತರವನ್ನು ಕೂಡ ಪಡೆಯಲು ಸಾಧ್ಯವಾಗಿಲ್ಲ. ನಾನು ಮೂರು ಬಾರಿ ರೇಶನ್ ಅಂಗಡಿಗೆ ಹೋಗಿದ್ದೆ. ಪ್ರತಿಯೊಬ್ಬರೂ ಆಧಾರ್ ಕಾರ್ಡ್ ಕೇಳುತ್ತಾರೆ ಹೊರತು ರೇಶನ್ ಕೊಡುವುದಿಲ್ಲ. ನಮಗೆ ಊರಿಗೆ ತೆರಳಲು ಬಸ್ ವ್ಯವಸ್ಥೆ ಮಾಡಿದ್ದರೆ ಉತ್ತಮವಾಗುತ್ತಿತ್ತು. ಹೀಗೆ ಮಾಡಿದರೆ ಸರಕಾರ ನಮ್ಮ ಮೇಲೆ ಕಾಳಜಿ ವಹಿಸಿದೆ ಎಂದು ಹೇಳಬಹುದು'' ಎಂದು ತನ್ನ ಪತಿ,ಮಕ್ಕಳೊಂದಿಗೆ ಸೈಕಲ್‌ನಲ್ಲಿ ಪ್ರಯಾಣ ಮುಂದುವರಿಸುವ ಮೊದಲು ಲಕ್ಷ್ಮೀ ಹೇಳಿದರು.