×
Ad

ಕಟ್ಟಿಗೆ ಬಂಡಿಯಲ್ಲಿ ಗರ್ಭಿಣಿ ಪತ್ನಿ, ಹೆಣ್ಣುಮಗುವನ್ನು 700 ಕಿ.ಮೀ. ಎಳೆದುಕೊಂಡು ಹೋದ ವಲಸೆ ಕಾರ್ಮಿಕ

Update: 2020-05-14 11:40 IST

ಭೋಪಾಲ್,ಮೇ 14: ಮಧ್ಯಪ್ರದೇಶದ ಯುವ ವಲಸಿಗ ಕಾರ್ಮಿಕ ರಾಮು ತನ್ನ ಗರ್ಭಿಣಿ ಪತ್ನಿ ಹಾಗೂ ಎಳೆಯ ಹೆಣ್ಣುಮಗುವಿನೊಂದಿಗೆ ಹೈದರಾಬಾದ್‌ನಿಂದ 700 ಕಿ.ಮೀ.ದೂರದಲ್ಲಿರುವ ತನ್ನ ಊರಿಗೆ ಪ್ರಯಾಸಕರ ಪ್ರಯಾಣ ಬೆಳೆಸಿದ್ದರು.  ಲಾಕ್‌ಡೌನ್‌ನಿಂದಾಗಿ ತನ್ನ ಊರಿಗೆ ವಾಪಸಾಗಲು ಬಸ್ ಅಥವಾ ಟ್ರಕ್ ಸಿಗದ ಕಾರಣ ರಾಮು ಕಾಲ್ನಡಿಗೆಯಲ್ಲಿ ಊರತ್ತ ಹೊರಟರು. ತನ್ನ ಹೆಣ್ಣುಮಗುವನ್ನು ಎತ್ತಿಕೊಂಡ ರಾಮುವಿಗೆ ಗರ್ಭಿಣಿ ಪತ್ನಿಯೊಂದಿಗೆ ಹೆಚ್ಚು ದೂರ ನಡೆದುಕೊಂಡು ಹೋಗಲು ಅಸಾಧ್ಯವಾದಾಗ ಕಾಡಿನಲ್ಲಿ ಸಿಕ್ಕಿದ ಮರ ಹಾಗೂ ಕೋಲುಗಳಿಂದ ತಾತ್ಕಾಲಿಕ ಮರದ ಬಂಡಿ ನಿರ್ಮಿಸಿದರು. ಬಂಡಿಯನ್ನು ಎಳೆದುಕೊಂಡು ಊರತ್ತ ಹೊರಟರು. ಈ ಮನಕಲಕುವ ದೃಶ್ಯ ವೀಡಿಯೊದಲ್ಲಿ ಸೆರೆಯಾಗಿದ್ದು,ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಾಮು ಮಂಗಳವಾರ ಬೆಳಗ್ಗೆ ಬಾಲಾಘಾಟ್ ಜಿಲ್ಲೆಗೆ ತಲುಪಿದರು. ತನ್ನೂರಿಗೆ ತಲುಪುವ ತನಕ ರಾಮು ಏನನ್ನೂ ತಿಂದಿರಲಿಲ್ಲ.ಮಹಾರಾಷ್ಟ್ರದಿಂದ ತವರು ಜಿಲ್ಲೆಗೆ ಕಾಲಿಡುತ್ತಿದ್ದಂತೆಯೇ ಉಪವಿಭಾಗೀಯ ಅಧಿಕಾರಿ ನಿತೇಶ್ ಭಾರ್ಗವ್ ಮೂವರಿಗೆ ಬಿಸ್ಕಿಟ್ ಹಾಗೂ ಆಹಾರವನ್ನು ನೀಡಿದರು. ಹೆಣ್ಣುಮಗುವಿಗೆ ಚಪ್ಪಲ್‌ನ್ನು ಕೊಟ್ಟರು.

ನಾವು ಕುಟುಂಬ ಸದಸ್ಯರನ್ನು ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ವಾಹನದ ಮೂಲಕ ಅವರ ಊರಿಗೆ ಕಳುಹಿಸಿಕೊಟ್ಟಿದ್ದೇವೆ.ಅಲ್ಲಿ ಅವರು 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಲಿದ್ದಾರೆ ಎಂದು ಭಾರ್ಗವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News