ನಾಗರಿಕರಿಂದ ಸೇನೆಯಲ್ಲಿ 3 ವರ್ಷ ಸೇವೆ: ಮಹತ್ವದ ಯೋಜನೆ ಜಾರಿಗೆ ಚಿಂತನೆ ?

Update: 2020-05-14 08:23 GMT

ಹೊಸದಿಲ್ಲಿ: ಅತ್ಯಂತ ಮಹತ್ವವೆನ್ನಬಹುದಾದ ಬೆಳವಣಿಗೆಯಲ್ಲಿ ಯುವ ವೃತ್ತಿಪರರ ಸಹಿತ ನಾಗರಿಕರಿಗೆ ಸೇನೆಯಲ್ಲಿ ಅಧಿಕಾರಿಗಳಾಗಿ ಹಾಗೂ ಲಾಜಿಸ್ಟಿಕ್ಸ್ ಮತ್ತಿತರ ಪ್ರಮುಖ ವಲಯಗಳಲ್ಲಿ ಮೂರು ವರ್ಷಗಳ ಕಾಲ ದುಡಿಯಲು ಅವಕಾಶ ಕಲ್ಪಿಸುವ ಪ್ರಸ್ತಾವ ಸದ್ಯ ಸೇನೆಯ ಪರಿಶೀಲನೆಯಲ್ಲಿದೆ.

ಅರೆಸೇನಾ ಪಡೆಗಳು ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಿಬ್ಬಂದಿಯ ಸೇವೆಯನ್ನೂ ಏಳು ವರ್ಷಗಳ ಕಾಲ ಪಡೆದು ನಂತರ ಅವರಿಗೆ ಅವರ ಮಾತೃ ಸಂಘಟನೆಗಳನ್ನು ಸೇರಿಕೊಳ್ಳುವ ಅವಕಾಶ ನೀಡುವ ಬಗ್ಗೆಯೂ ಚಿಂತಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

`ಗೇಮ್ ಚೇಂಜಿಂಗ್' ಎಂದು ತಿಳಿಯಲಾಗಿರುವ ಈ ಪ್ರಸ್ತಾವವನ್ನು ಸೇನೆಯ ಪ್ರಮುಖ ಕಮಾಂಡರುಗಳು ಪರಿಶೀಲಿಸುತ್ತಿದ್ದು.  ಇದಕ್ಕೆ ಅನುಮತಿ ದೊರೆತಲ್ಲಿ ನಾಗರಿಕರು ಸ್ವಯಂಪ್ರೇರಿತರಾಗಿ ಸೇನೆ ಸೇರಬಹುದಾಗಿದ್ದು, ಆದರೆ ಆಯ್ಕೆ ಮಾನದಂಡದಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ. ಪ್ರಾರಂಭಿಕ ಹಂತದಲ್ಲಿ 100 ಅಧಿಕಾರಿಗಳು ಹಾಗೂ 1000 ಸೈನಿಕರ ನೇಮಕಾತಿ  ಕುರಿತಂತೆ ಪರಿಶೀಲಿಸಲಾಗುತ್ತಿದೆ ಎನ್ನಲಾಗಿದೆ. ನೇಮಕಾತಿಗಾಗಿ ವಯಸ್ಸು ಹಾಗೂ ದೈಹಿಕ ಕ್ಷಮತೆ ಪ್ರಮುಖ ಮಾನದಂಡವಾಗಲಿದ್ದು ನಾಗರಿಕರನ್ನು ‘ಟೂರ್ ಆಫ್ ಡ್ಯೂಟಿ’ ಅಥವಾ  ‘ಮೂರು ವರ್ಷಗಳ ಅಲ್ಪಾವಧಿ ಸೇವೆ’ ಯೋಜನೆಯಡಿ ಸೇನೆಗೆ ಸೇರಿಸಲಾಗುವುದು ಎಂದು ತಿಳಿದು ಬಂದಿದೆ.

ಸೇನೆಯ ಟಾಪ್ ಕಮಾಂಡರ್‍ಗಳ ಸಭೆಯಲ್ಲಿ ಈ ಪ್ರಸ್ತಾವ ಕುರಿತಂತೆ ಚರ್ಚೆ ನಡೆದು ನಂತರ ಅಂತಿಮ ನಿರ್ಧಾರ ಕೈಗೊಳ್ಳುವ  ಸಾಧ್ಯತೆಯಿದೆ. ಸದ್ಯ ಸೇನೆಯಲ್ಲಿರುವ  ಶೇ 60ರಷ್ಟು ಅಲ್ಪಾವಧಿ  ಕಮಿಷನ್ಡ್ ಅಧಿಕಾರಿಗಳಿಗೆ ಖಾಯಂಗೊಳಿಸಿದಾಗ ಅವರು 54 ವರ್ಷಗಳ ತನಕ ಸೇವೆಗಾಗಿ ಸಾಕಷ್ಟು ಖರ್ಚು ತಗಲುತ್ತದೆ. ಇದನ್ನೆಲ್ಲ ಕಡಿತಗೊಳಿಸಿ  ಈ ಮೊತ್ತವನ್ನು ಸೇನೆಯ ಆಧುನೀಕರಣಕ್ಕೆ ಬಳಸಬಹುದಾಗಿದೆ ಎನ್ನಲಾಗಿದೆ. ಜತೆಗೆ ಸೇನೆಯಲ್ಲಿ ಸೇವೆ ಸಲ್ಲಿಸಿದವರಿಗೆ ಕಾರ್ಪೊರೇಟ್ ಮತ್ತಿತರ ಸರಕಾರಿ ವಲಯಗಳಲ್ಲಿ ಉದ್ಯೋಗ ದೊರೆಯಲೂ ಅನುಕೂಲಕರವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News