×
Ad

ತಾಯಿ ಎಳೆದುಕೊಂಡು ಹೋಗುತ್ತಿದ್ದ ಸೂಟ್ ಕೇಸ್ ಮೇಲೆ ಮಲಗಿದ ಬಾಲಕ: ಫೋಟೊ ವೈರಲ್

Update: 2020-05-14 13:57 IST

ಹೊಸದಿಲ್ಲಿ :  ಪುಟ್ಟ ಬಾಲಕನೊಬ್ಬ ತನ್ನ ತಾಯಿ ದೂಡಿಕೊಂಡು ಹೋಗುತ್ತಿದ್ದ ಗಾಲಿಯಿರುವ ಸೂಟ್ ಕೇಸಿಗೆ ತಾಗಿಕೊಂಡು ಮಲಗಿರುವುದು ಹಾಗೂ ಭಾರವಾಗಿರುವ ಸೂಟ್ ಕೇಸ್ ಮತ್ತು ತನ್ನ ಮಗನ ಭಾರವನ್ನೂ  ತಾಳಿಕೊಂಡು ಆ ತಾಯಿ ಹೆದ್ದಾರಿಯಲ್ಲಿ ಸಾಗುತ್ತಿರುವ ವೀಡಿಯೋವೊಂದು ಹಲವರ ಮನ ಕಲಕಿದೆ.

ಇದು ಲಾಕ್ ಡೌನ್‍ನಿಂದಾಗಿ ಸಂಚಾರ ಸೌಲಭ್ಯ ದೊರೆಯದೆ ತಮ್ಮ ಊರುಗಳಿಗೆ ನಡೆದುಕೊಂಡೇ ಈ ರಣಬಿಸಿಲಿನಲ್ಲಿ ಸಾಗುತ್ತಿರುವ ನೂರಾರು ವಲಸಿಗ ಕಾರ್ಮಿಕರ ಬವಣೆಯ ಬದುಕಿನ ಚಿತ್ರಣ.

ಆಗ್ರಾದ ಹೆದ್ದಾರಿಯಲ್ಲಿ ವಲಸಿಗ ಕಾರ್ಮಿಕರ ಒಂದು ಸಣ್ಣ ಗುಂಪಿನ ಜತೆ ಈ ಮಹಿಳೆ ಮತ್ತಾಕೆಯ ಗಾಲಿಯಿರುವ ಸೂಟ್ ಕೇಸ್‍ಗೆ ಒರಗಿ ಮಲಗಿಕೊಂಡು  ಸಾಗುತ್ತಿರುವ ಪುಟ್ಟ ಬಾಲಕನೂ ಕಂಡಿದ್ದಾನೆ. ಇವರೆಲ್ಲರೂ ಪಂಜಾಬ್ ರಾಜ್ಯದಿಂದ ಸುಮಾರು 800 ಕಿಮೀ ದೂರದ ಝಾನ್ಸಿಗೆ ತೆರಳುವವರೆಂದು  ತಿಳಿದು ಬಂದಿದೆ.  ಅನೇಕ ಕಡೆ ವಲಸಿಗ ಕಾರ್ಮಿಕರಿಗಾಗಿ ಬಸ್ ಹಾಗೂ ರೈಲಿನ ಏರ್ಪಾಟು ಮಾಡಲಾಗಿದೆಯಾದರೂ ಇವರೇಕೆ ಅದರಲ್ಲಿ ಸಂಚರಿಸುತ್ತಿಲ್ಲ ಎಂಬುದಕ್ಕೆ ಅವರಿಂದ ಉತ್ತರ ದೊರಕಿಲ್ಲ.

ಇಂತಹುದೇ ಮನಕಲಕುವ ಚಿತ್ರಣಗಳು ಹಲವೆಡೆ ಕಂಡು ಬಂದಿವೆ. ಮಧ್ಯ ಪ್ರದೇಶದಲ್ಲಿ ಒಂದೆಡೆ ವ್ಯಕ್ತಿಯೊಬ್ಬ ಸೈಕಲಿನಲ್ಲಿಯೇ ನಿದ್ದೆ ಹೋಗಿರುವ ತನ್ನ ಪುಟ್ಟ ಮಕ್ಕಳನ್ನು ಅದು ಹೇಗೋ ಸಂಭಾಳಿಸಿಕೊಂಡು ಮುಂದೆ ನಡೆಯುತ್ತಿರುವುದು ಕಾಣಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News