‘ಆರೋಗ್ಯ ಸೇತು’ ಆ್ಯಪ್ ಹ್ಯಾಕ್ ಮಾಡಿದ್ದೇನೆ ಎಂದ ಬೆಂಗಳೂರು ಮೂಲದ ಟೆಕ್ಕಿ

Update: 2020-05-14 08:38 GMT

ಹೊಸದಿಲ್ಲಿ:  ಕೇಂದ್ರ ಸರಕಾರದ ಕೋವಿಡ್-19 ಟ್ರ್ಯಾಕರ್ ಆ್ಯಪ್ ‘ಆರೋಗ್ಯ ಸೇತು’ವನ್ನು ತಾನು ಹ್ಯಾಕ್ ಮಾಡಿದ್ದೇನೆ ಎಂದು ಬೆಂಗಳೂರು ಮೂಲದ ಹ್ಯಾಕರ್ ಒಬ್ಬರು ಹೇಳಿದ್ದಾರೆ. ಈ ಆ್ಯಪ್ ಡೌನ್‍ಲೋಡ್ ಮಾಡುವಂತೆ ಬಲವಂತಪಡಿಸುವುದು ಹಾಗೂ ಸರಕಾರದಿಂದ ದಿನದ 24 ಗಂಟೆಯೂ ಕಣ್ಗಾವಲು ಇಡುವುದು ತನಗೆ ಸರಿ ಕಂಡಿರಲಿಲ್ಲ ಎಂದು ಈ ಯುವ ಇಂಜಿನಿಯರ್‍ ತಿಳಿಸಿದ್ದಾರೆ.

ಈ ಅಪ್ಲಿಕೇಶನ್ ಅನ್ನು ಹ್ಯಾಕ್ ಮಾಡಿದ ಅವರು ಡಾಟಾ ತುಂಬಿಸಬೇಕಾದ ಎಲ್ಲಾ ಪ್ರಕ್ರಿಯೆಗಳನ್ನೂ ತಪ್ಪಿಸಿಕೊಂಡರು. ಅಷ್ಟೇ ಅಲ್ಲದೆ ವೈಯಕ್ತಿಕ ಮಾಹಿತಿಗಳಾದ ಹೆಸರು, ವಯಸ್ಸು, ಲಿಂಗ, ಪ್ರಯಾಣ ಹಿಸ್ಟರಿ ಹಾಗೂ ಕೋವಿಡ್-19 ಲಕ್ಷಣಗಳ ಕುರಿತು ಮಾಹಿತಿ ನೀಡಬೇಕಾದ  ಪುಟವನ್ನೂ ತಪ್ಪಿಸುವಲ್ಲಿ ಯಶಸ್ವಿಯಾದರು.  ಫೋನ್‍ನ ಬ್ಲೂಟೂತ್ ಹಾಗೂ  ಜಿಪಿಎಸ್ ಬಳಸಲು ಅನುಮತಿ ಪಡೆಯುವ ಮನವಿಗಳನ್ನೂ  ಅವರು ತಳ್ಳಿ ಹಾಕುವಲ್ಲಿ ಯಶಸ್ವಿಯಾದರು. ಇಷ್ಟೆಲ್ಲಾ ಮಾಡಿದ ಈ ಸಾಫ್ಟ್‍ವೇರ್ ಇಂಜಿನಿಯರ್ ರ ಆರೋಗ್ಯ ಸೇತು ಆ್ಯಪ್‍ನಲ್ಲಿ ಇದೀಗ ಗ್ರೀನ್ ಬ್ಯಾಡ್ಜ್ ಕಾಣಿಸಿಕೊಂಡಿದ್ದು, ಅವರು ಕೋವಿಡ್-19ನಿಂದ ಸುರಕ್ಷಿತವಾಗಿದ್ದಾರೆಂಬುದನ್ನು ಇದು ದೃಢೀಕರಿಸುತ್ತದೆ. ಆದರೆ ಇದಕ್ಕಾಗಿ ಅವರು  ಈ ಆ್ಯಪ್ ಅಳವಡಿಸಬೇಕಾದವರು ಅನುಸರಿಸಬೇಕಾದ ಪ್ರಕ್ರಿಯೆಗಳನ್ನೆಲ್ಲಾ ಪಾಲಿಸಿಯೇ ಇಲ್ಲ.

ತಾವು ಈ ಆ್ಯಪ್ ಹ್ಯಾಕ್ ಮಾಡಿರುವ ವಿಚಾರವನ್ನು ಅವರು ತಮ್ಮ ಸ್ನೇಹಿತರ ಜತೆ ಶೇರ್ ಮಾಡಿದ್ದಾರೆ. ಇದೇ ರೀತಿ ಹಲವರು ಕೂಡ ಮಾಡಲು ಪ್ರಯತ್ನಿಸುವ ಸಾಧ್ಯತೆಯಿದೆ. ಈ ಆ್ಯಪ್ ಜನರ ಖಾಸಗಿತನಕ್ಕೆ ಧಕ್ಕೆ ತರುತ್ತದೆ ಎಂದು ಎಥಿಕಲ್ ಹ್ಯಾಕರ್ ಇಲಿಯಟ್ ಆಲ್ಟರ್ಸನ್ ಅವರು ಕಳವಳ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಈಗಾಗಲೇ ಸುಮಾರು 10 ಕೋಟಿ ಭಾರತೀಯರು ಈ ಆ್ಯಪ್ ಅಳವಡಿಸಿದ್ದಾರೆಂದು ಸರಕಾರ ಹೇಳುತ್ತಿದೆ.

ಕೃಪೆ: buzzfeednews.com

   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News