×
Ad

ನನ್ನ ಹಣವನ್ನು ಪಡೆದು ಪ್ರಕರಣವನ್ನು ಕೈಬಿಡಿ:ಕೇಂದ್ರಕ್ಕೆ ವಿಜಯ ಮಲ್ಯ ಮನವಿ

Update: 2020-05-14 15:19 IST

ಲಂಡನ್, ಮೇ 14: ನನ್ನ ಬಾಕಿಯಿರುವ ಸಾಲದ 100 ಶೇಕಡವನ್ನೂ ಪಾವತಿಸುತ್ತೇನೆ, ಅದನ್ನು ತೆಗೆದುಕೊಂಡು ನನ್ನ ವಿರುದ್ಧದ ಮೊಕದ್ದಮೆಯನ್ನು ಕೈಬಿಡಬೇಕು ಎಂದು ಭಾರತದ ಬ್ಯಾಂಕ್‌ಗಳಿಗೆ ವಂಚಿಸಿ ಬ್ರಿಟನ್‌ಗೆ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯ ಗುರುವಾರ ಭಾರತ ಸರಕಾರಕ್ಕೆ ಮನವಿ ಮಾಡಿದ್ದಾರೆ.

20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್‌ಗಾಗಿ ಭಾರತ ಸರಕಾರವನ್ನು ಅಭಿನಂದಿಸಿರುವ ಮಲ್ಯ, ನನ್ನ ಸಾಲಗಳನ್ನು ಮರುಪಾವತಿ ಮಾಡಲು ಪದೇ ಪದೇ ನಾನು ಮಾಡಿರುವ ಪ್ರಯತ್ನಗಳು ವಿಫಲವಾಗಿದೆ ಎಂದು ಹೇಳಿದ್ದಾರೆ.

ಕೋವಿಡ್-19 ಪರಿಹಾರ ಪ್ಯಾಕೇಜ್‌ಗಾಗಿ ನಾನು ಭಾರತ ಸರಕಾರವನ್ನು ಅಭಿನಂದಿಸುತ್ತೇನೆ. ಅವರಿಗೆ ಎಷ್ಟು ಬೇಕೋ ಅಷ್ಟು ಹಣವನ್ನು ಅವರು ಪ್ರಿಂಟ್ ಮಾಡಬಹುದು. ಆದರೆ ನನ್ನಂಥ ಸಣ್ಣ ದೇಣಿಗೆದಾರನನ್ನು ಅವರು ನಿರಂತರವಾಗಿ ತಿರಸ್ಕರಿಸಬೇಕೇ? ಸರಕಾರಿ ಒಡೆತನದ ಬ್ಯಾಂಕ್‌ಗಳಿಗೆ ನಾನು ನೀಡಬೇಕಾಗಿರುವ 100 ಶೇಕಡ ಹಣವನ್ನು ಮರುಪಾವತಿಸುವುದಾಗಿ ನಾನು ಹೇಳುತ್ತಾ ಬಂದಿದ್ದೇನೆ ಎಂಬುದಾಗಿ ಮಲ್ಯ ಟ್ವೀಟ್ ಮಾಡಿದ್ದಾರೆ.

ಭಾರತೀಯ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ವಂಚಿಸಿರುವ ಪ್ರಕರಣದಲ್ಲಿ ವಿಚಾರಣೆಯನ್ನು ಎದುರಿಸುವುದಕ್ಕಾಗಿ ಭಾರತಕ್ಕೆ ಗಡಿಪಾರಾಗುವ ಸಾಧ್ಯತೆಯನ್ನು ವಿಜಯ ಮಲ್ಯ ಈಗ ಎದುರಿಸುತ್ತಿದ್ದಾರೆ. ಅವರು ಈಗ ಚಾಲ್ತಿಯಲ್ಲಿಲ್ಲದ ಕಿಂಗ್‌ ಫಿಶರ್ ಏರ್‌ಲೈನ್ಸ್‌ನ ಮಾಲಕರಾಗಿದ್ದಾರೆ. ಅವರು ಬ್ಯಾಂಕ್‌ಗಳಿಗೆ 9,000 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ವಂಚಿಸಿರುವುದಾಗಿ ಆರೋಪಿಸಲಾಗಿದೆ.

ನಾನು ಕೊಡಬೇಕಾಗಿರುವ ಹಣವನ್ನು ದಯವಿಟ್ಟು ನಿಶ್ಶರ್ತವಾಗಿ ತೆಗೆದುಕೊಳ್ಳಿ ಹಾಗೂ ಸಾಲವನ್ನು ಮುಚ್ಚಿಬಿಡಿ ಎಂದು ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಇನ್ನು ಭಾರತಕ್ಕೆ ಗಡಿಪಾರು ಖಚಿತ?

ಲಂಡನ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಬ್ರಿಟನ್ ಸುಪ್ರೀಮ್ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಉದ್ಯಮಿ ವಿಜಯ ಮಲ್ಯಗೆ ಗುರುವಾರ ಅವಕಾಶ ನಿರಾಕರಿಸಲಾಗಿದೆ. ಇದರೊಂದಿಗೆ ಭಾರತಕ್ಕೆ ಗಡಿಪಾರಾಗುವುದನ್ನು ತಪ್ಪಿಸಿಕೊಳ್ಳಲು ವಿಜಯ ಮಲ್ಯಗೆ ಬ್ರಿಟನ್‌ನಲ್ಲಿ ಇನ್ನು ಯಾವ ಅವಕಾಶವೂ ಉಳಿದಿಲ್ಲ.

ಬ್ಯಾಂಕ್‌ಗಳಿಗೆ ವಂಚಿಸಿರುವ ಆರೋಪಗಳಿಗೆ ಸಂಬಂಧಿಸಿ ಭಾರತದಲ್ಲಿ ವಿಚಾರಣೆಯನ್ನು ಎದುರಿಸಲು ಮಲ್ಯರನ್ನು ಗಡಿಪಾರು ಮಾಡಬೇಕೆಂದು 2018ರಲ್ಲಿ ಲಂಡನ್‌ನ ವಿಚಾರಣಾ ನ್ಯಾಯಾಲಯವೊಂದು ನೀಡಿರುವ ಆದೇಶವನ್ನು ಪ್ರಶ್ನಿಸಿ ಅವರು ಲಂಡನ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಹೈಕೋರ್ಟ್ ಅವರ ಮನವಿಯನ್ನು ತಿರಸ್ಕರಿಸಿ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿತ್ತು.

ಹೈಕೋರ್ಟ್ ತೀರ್ಪನ್ನು ಬ್ರಿಟನ್ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಅವರು ಸಿದ್ಧತೆಗಳನ್ನು ನಡೆಸಿದ್ದರು. ಆದರೆ ಈಗ ತನ್ನ ಗಡಿಪಾರನ್ನು ಪ್ರಶ್ನಿಸುವ ಅವರ ಎಲ್ಲ ಆಯ್ಕೆಗಳು ಮುಗಿದಿವೆ.

ಭಾರತ-ಬ್ರಿಟನ್ ಗಡಿಪಾರು ಒಪ್ಪಂದದಂತೆ, ಇನ್ನು ಬ್ರಿಟಿಶ್ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್, ಮಲ್ಯರನ್ನು 28 ದಿನಗಳೊಳಗೆ ಭಾರತಕ್ಕೆ ಗಡಿಪಾರು ಮಾಡಬೇಕೆನ್ನುವ ಆದೇಶಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News