ನೀರವ್ ಮೋದಿಯನ್ನು ರಕ್ಷಿಸಲು ಕಾಂಗ್ರೆಸ್ ಪ್ರಯತ್ನ: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಆರೋಪ

Update: 2020-05-14 12:28 GMT

ಹೊಸದಿಲ್ಲಿ : ಪಿಎನ್‍ಬಿ ಬ್ಯಾಂಕ್‍ಗೆ ಬಹುಕೋಟಿ ವಂಚನೆಗೈದ ಪ್ರಕರಣದ ಆರೋಪಿ, ದೇಶ ಬಿಟ್ಟು ಇಂಗ್ಲೆಂಡ್‍ಗೆ ಪರಾರಿಯಾಗಿ ಇದೀಗ ಗಡೀಪಾರು ಕುರಿತಂತೆ ಲಂಡನ್‍ನಲ್ಲಿ ವಿಚಾರಣೆ ಎದುರಿಸುತ್ತಿರುವ ವಜ್ರೋದ್ಯಮಿ ನೀರವ್ ಮೋದಿಯನ್ನು ಬಚಾವ್ ಮಾಡಲು ಕಾಂಗ್ರೆಸ್ ತನ್ನ ಕೈಲಾದಷ್ಟು ಶ್ರಮಿಸುತ್ತಿದೆ ಎಂದು ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಆರೋಪಿಸಿದ್ದಾರೆ.

ಲಂಡನ್‍ನ ವೆಸ್ಟ್ ಮಿನಿಸ್ಟರ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ವೇಳೆ ಮಾಜಿ ಹೈಕೋರ್ಟ್ ನ್ಯಾಯಾಧೀಶರೂ ಆಗಿರುವ ಕಾಂಗ್ರೆಸ್ ಸದಸ್ಯರೊಬ್ಬರು ನೀರವ್ ಪರ ಸಾಕ್ಷಿಯಾಗಿ ಹಾಜರಿದ್ದರು ಎಂದು ಪ್ರಸಾದ್ ಆರೋಪಿಸಿದ್ದಾರೆ.

“ಕಾಂಗ್ರೆಸ್ ಪಕ್ಷ ನೀರವ್ ಮೋದಿಯನ್ನು ಬಚಾವ್ ಮಾಡಲು ತನ್ನ ಕೈಲಾದಷ್ಟು ಶ್ರಮಿಸುತ್ತಿದೆ ಎಂಬುದರ ಸುಳಿವು ನೀಡುವ ಶಂಕಾಸ್ಪದ ಸನ್ನಿವೇಶಗಳಿವೆ. ಮಾಜಿ ನ್ಯಾಯಾಧೀಶರೊಬ್ಬರು ಕಾಂಗ್ರೆಸ್  ಸೂಚನೆಯಂತೆ ಇಂಗ್ಲೆಂಡ್ ‍ನಲ್ಲಿ ನ್ಯಾಯಾಂಗ ಪ್ರಕ್ರಿಯೆ ಮೇಲೆ ಪ್ರಭಾವ ಬೀರುವ ಕೆಲಸ ಮಾಡುತ್ತಿದ್ದಾರೆ. ನಮ್ಮ ತನಿಖಾ ಏಜನ್ಸಿ ಇದರ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ'' ಎಂದು ಸಚಿವರು ಹೇಳಿದ್ದಾರೆ.

ಈ ಮಾಜಿ ನ್ಯಾಯಾಧೀಶರು ಯಾರು ಎಂದು ರವಿ ಶಂಕರ್ ಪ್ರಸಾದ್ ಹೇಳದೇ ಇದ್ದರೂ  ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರ ಆರೋಪದಂತೆ ನೀರವ್ ಮೋದಿ ಪ್ರಕರಣದಲ್ಲಿ  ಬಾಂಬೆ ಹೈಕೋರ್ಟಿನ ಮಾಜಿ ನ್ಯಾಯಾಧೀಶ ಅಭಯ್ ತಿಪ್ಸೆ ಅವರು ಸಾಕ್ಷಿಯಾಗಿ ಹಾಜರಾಗಿದ್ದಾರೆ.

ತಿಪ್ಸೆ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜತೆಗಿರುವ ಚಿತ್ರವೊಂದನ್ನೂ ಪೋಸ್ಟ್ ಮಾಡಿರುವ ಸಂಬಿತ್ ಪಾತ್ರ, “ಇಲ್ಲಿ ಭಾರತದಲ್ಲಿ ರಾಹುಲ್ ಗಾಂಧಿ ಅವರು ನೀರವ್ ಮೋದಿ ಪ್ರಕರಣ ಕುರಿತಂತೆ ಕೇಂದ್ರ ಸರಕಾರವನ್ನು ಪ್ರಶ್ನಿಸುತ್ತಿದ್ದಾರೆ. ಅತ್ತ ರಾಹುಲ್ ಅವರ ಸಮೀಪವರ್ತಿ ಹಾಗೂ ಕಾಂಗ್ರೆಸ್ ನಾಯಕ ಅಭಯ್ ತಿಪ್ಸೆ (ಮಾಜಿ ನ್ಯಾಯಾಧೀಶ) ನೀರವ್ ಮೋದಿ ಪರ ಸಾಕ್ಷಿಯಾಗಿದ್ದಾರೆ. ನೀರವ್ ಭಾರತಕ್ಕೆ ವಾಪಸ್ ಬರಬಾರದೆಂದು ರಾಹುಲ್  ಏಕೆ ಬಯಸುತ್ತಿದ್ದಾರೆ ? ಆ ಪಾರ್ಟಿಯಲ್ಲಿ ರಾಹುಲ್ ಹಾಗೂ ನೀರವ್ ಮಧ್ಯೆ ಏನು  ವ್ಯವಹಾರ ನಡೆಯುತು?'' ಎಂದು ಪಾತ್ರ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News