ಲಾಕ್‍ಡೌನ್ ನಂತರ ಶೇ.30ರಷ್ಟು ವಿದ್ಯಾರ್ಥಿಗಳ ಹಾಜರಾತಿಯೊಂದಿಗೆ ತರಗತಿ ಆರಂಭಕ್ಕೆ ಚಿಂತನೆ: ಕೇಂದ್ರ ಸಚಿವ

Update: 2020-05-14 12:33 GMT

ಹೊಸದಿಲ್ಲಿ: ಕೋವಿಡ್-19 ಲಾಕ್‍ಡೌನ್ ಮುಗಿದ ಬಳಿಕ ಶಾಲೆಗಳು ಪುನರಾರಂಭಗೊಂಡಾಗ ಅಲ್ಲಿ ಏಕಕಾಲಕ್ಕೆ ಕೇವಲ ಶೇ. 30ರಷ್ಟು ವಿದ್ಯಾರ್ಥಿಗಳ ಹಾಜರಾತಿಯಿರುವ ಸಾಧ್ಯತೆಯಿದೆ ಎಂದು ಕೇಂದ್ರಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ಹೇಳಿದ್ದಾರೆ. 

ತರಗತಿಗಳನ್ನು ಪುನರಾರಂಭಿಸುವ ನಿಟ್ಟಿನಲ್ಲಿರುವ ಮಾರ್ಗಸೂಚಿಗಳ ಕುರಿತಂತೆ ಶಿಕ್ಷಕರಿಗೆ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾಹಿತಿ ನೀಡುವ ವೇಳೆ ಸಚಿವರು ಮೇಲಿನಂತೆ ಹೇಳಿದ್ದಾರೆ.

“ಶಾಲೆಗಳನ್ನು ಪುನರಾರಂಭಿಸುವ ಕುರಿತಂತೆ ಮಾರ್ಗಸೂಚಿ ಸಿದ್ಧಪಡಿಸಲು ಎನ್‍ಸಿಇಆರ್‍ಟಿಗೆ ಹೇಳಿದ್ದೇವೆ ಹಾಗೂ ಈ ನಿಟ್ಟಿನಲ್ಲಿ ಹೆಚ್ಚಿನ ಕೆಲಸ ಆಗಿದೆ. ಈ ಮಾರ್ಗಸೂಚಿಗಳಂತೆ ಏಕಕಾಲಕ್ಕೆ ಶೇ 30ರಷ್ಟು ವಿದ್ಯಾರ್ಥಿಗಳಿಗೆ ತರಗತಿಗಳಿಗೆ ಹಾಜರಾಗಲು ಹೇಳುವುದು ಕೂಡ ಸೇರಿದೆ. ಇದು ಹೇಗೆ ಪರಿಣಾಮಕಾರಿಯಾಗಬಹುದು ಎಂಬುದು ನೋಡಬೇಕಿದೆ'' ಎಂದು ಸಚಿವರು ಹೇಳಿದರು.

ಕೆಲವು ವಿದ್ಯಾರ್ಥಿಗಳನ್ನು ಒಂದು ದಿನ ತರಗತಿಗೆ ಹಾಜರಾಗಲು ಹೇಳಿ ಉಳಿದ ವಿದ್ಯಾರ್ಥಿಗಳನ್ನು ಇನ್ನೊಂದು ದಿನ ಹಾಜರಾಗುವಂತೆ ಮಾಡುವ ಅಥವಾ ಶಿಫ್ಟ್ ಆಧಾರದಲ್ಲಿ ತರಗತಿ ನಡೆಸುವ ಕುರಿತಂತೆ ಎನ್‍ಸಿಇಆರ್‍ಟಿ ಸಲಹೆ ನೀಡಿದೆ ಎಂದು ಕೆಲ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News