ಕ್ವಾರಂಟೈನ್ ಕೇಂದ್ರದಲ್ಲಿದ್ದ ಮಹಿಳೆಗೆ ಗರ್ಭಪಾತ: ರಕ್ತಸ್ರಾವವಾಗುತ್ತಿದ್ದರೂ 3 ದಿನಗಳ ನಂತರ ಆಸ್ಪತ್ರೆಗೆ

Update: 2020-05-14 14:42 GMT
ಸಾಂದರ್ಭಿಕ ಚಿತ್ರ

 ಲಕ್ನೋ,ಮೇ 14: ಕೋವಿಡ್-19 ಪರೀಕ್ಷೆಯ ವರದಿ ನಾಲ್ಕು ಬಾರಿ ನೆಗೆಟಿವ್ ಆಗಿದ್ದರೂ ಕಳೆದ 48 ದಿನಗಳಿಂದ ಇಲ್ಲಿಯ ಕ್ವಾರಂಟೈನ್ ಕೇಂದ್ರದಲ್ಲಿ ಕೊಳೆಯುತ್ತಿರುವ ಮಹಿಳೆಗೆ ಗರ್ಭಪಾತವಾಗಿದ್ದು, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಸಿಬ್ಬಂದಿಗಳು ಮೂರು ದಿನಗಳ ಕಾಲ ಕಾಯಿಸಿದ ಅಮಾನವೀಯ ಘಟನೆ ನಡೆದಿದೆ ಎಂದು Thewire.in ವರದಿ ಮಾಡಿದೆ.

 29ರ ಹರೆಯದ ಗರ್ಭಿಣಿ ರಿಝ್ವಾನಾ,ಆಕೆಯ ಪತಿ ಮತ್ತು ಇತರ ಎಂಟು ಜನರು ತಬ್ಲೀಗಿ ಜಮಾಅತ್‌ನಲ್ಲಿ ಭಾಗಿಯಾಗಲೆಂದು ಫೆ.14ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಿಂದ ಪ್ರಯಾಣಿಸಿದ್ದರು. ಮಾರ್ಚ್ ಅಂತ್ಯ ಮತ್ತು ಎಪ್ರಿಲ್ ಆರಂಭದಲ್ಲಿ ಹಲವಾರು ತಬ್ಲೀಗಿ ಜಮಾತ್ ಸದಸ್ಯರಲ್ಲಿ ಕೊರೋನ ವೈರಸ್ ಸೋಂಕು ಪತ್ತೆಯಾಗತೊಡಗಿದ್ದು, ಇದು ದೇಶಾದ್ಯಂತ ದೃಢೀಕೃತ ಪ್ರಕರಣಗಳು ಹೆಚ್ಚುವಂತೆ ಮಾಡಿತ್ತು. ಈ ವೇಳೆಗೆ ಗುಂಟೂರಿನ ತಂಡ ಲಕ್ನೋದ ಮೆಹಮೂದ್ ‌ನಗರದಲ್ಲಿತ್ತು. ಎ.3ರಂದು ರಿಝ್ವಾನಾ ಸೇರಿದಂತೆ ಎಲ್ಲ ಹತ್ತೂ ಜನರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದ ಉ.ಪ್ರ.ಪೊಲೀಸರು ಅವರ ವಿರುದ್ಧ ಐಪಿಸಿ ಮತ್ತು ಸಾಂಕ್ರಾಮಿಕಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.

ಜಿಸಿಆರ್‌ಜಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ‌ಸ್‌ನಲ್ಲಿ ಅವರೆಲ್ಲರನ್ನು ನಾಲ್ಕು ಬಾರಿ ಕೊರೋನ ವೈರಸ್ ಪರೀಕ್ಷೆಗೊಳಪಡಿಸಲಾಗಿತ್ತು. ಎಲ್ಲ ವರದಿಗಳೂ ನೆಗೆಟಿವ್ ಆಗಿದ್ದವು. ಒಂದು ದಿನದ ಬಳಿಕ ಮನೆಗೆ ವಾಪಸ್ ಕಳುಹಿಸುವುದಾಗಿ ಭರವಸೆ ನೀಡಿದ್ದ ಪೊಲೀಸರು ಅವರನ್ನು ಮೇ 3ರಂದು ತಾತ್ಕಾಲಿಕ ಜೈಲು ಎಂದು ಘೋಷಿಸಲಾಗಿದ್ದ ರಾಮಸ್ವರೂಪ್ ಕಾಲೇಜಿನ ಕ್ವಾರಂಟೈನ್ ಕೇಂದ್ರಕ್ಕೆ ರವಾನಿಸಿದ್ದರು. ಇದಾಗಿ ಎರಡು ವಾರಗಳು ಕಳೆಯುತ್ತಿದ್ದರೂ ಈ ನತದೃಷ್ಟರು ಈಗಲೂ ಅಲ್ಲಿಯೇ ಕೊಳೆಯುತ್ತಿದ್ದಾರೆ.

 ಕ್ವಾರಂಟೈನ್ ಕೇಂದ್ರದಲ್ಲಿ ಸರಿಯಾಗಿ ಆಹಾರವೂ ದೊರೆಯುತ್ತಿಲ್ಲ,ಜೊತೆಗೆ ಇತರ ಸಮಸ್ಯೆಗಳೂ ಅಲ್ಲಿ ತುಂಬಿದ್ದವು. ಅಗತ್ಯ ಔಷಧಿಗಳನ್ನು ಪಡೆಯುವುದು ಸುಲಭವಾಗಿರಲಿಲ್ಲ. ಈ ಕೇಂದ್ರಕ್ಕೆ ಸೇರಿಸಿದಾಗಿನಿಂದ ತೀವ್ರ ಒತ್ತಡದಲ್ಲಿದ್ದ ರಿಝ್ವಾನಾ ಗೆ ಮೇ 9ರಂದು ರಾತ್ರಿ ಗರ್ಭಪಾತ ಸಂಭವಿಸಿತ್ತು. ಈ ಹಿಂದೆ ಎರಡು ಬಾರಿ ಗರ್ಭಪಾತಕ್ಕೆ ಗುರಿಯಾಗಿದ್ದ ರಿಝ್ವೆನಾಳ ತಾಯಿಯಾಗುವ ಕನಸು ಈ ಬಾರಿಯೂ ಕಮರಿ ಹೋಗಿತ್ತು. ಕೇಂದ್ರದ ಸಿಬ್ಬಂದಿಗಳು ರಿಝ್ವಾನಾ ಗರ್ಭಪಾತದಿಂದಾಗಿ ತೀವ್ರ ರಕ್ತಸ್ರಾವ ಮತ್ತು ಯಾತನೆಯನ್ನು ಅನುಭವಿಸುತ್ತಿದ್ದರೂ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಮೇ 12ರ ರಾತ್ರಿಯವರೆಗೆ ಕಾಯಿಸಿದ್ದರು.

ಮೇ 9ರಂದು ರಾತ್ರಿ ರಿಝ್ವಾನಾ ಗೆ ಗರ್ಭಪಾತವಾಗಿದ್ದರೂ,ಮೇ 10ರ ಸಂಜೆಯವರೆಗೆ ಆಕೆಯನ್ನು ನೋಡಲು ಯಾವುದೇ ವೈದ್ಯರು ಬಂದಿರಲಿಲ್ಲ. ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಬಂದಿದ್ದ ಮಹಿಳಾ ವೈದ್ಯರು ಕೆಲವು ಮಾತ್ರೆಗಳನ್ನು ನೀಡಿ ಅಲ್ಟ್ರಾಸೌಂಡ್ ಪರೀಕ್ಷೆ ಅಗತ್ಯವಾಗಿರುವುದರಿಂದ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದರು. ಆದರೆ ವೈದ್ಯೆಯ ಶಿಫಾರಸಿನ ನಂತರವೂ ರಿಝ್ವೆನಾ ಕಾಯಬೇಕಿತ್ತು. ಕೊನೆಗೂ ಆ್ಯಂಬುಲನ್ಸ್‌ನಲ್ಲಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದೆಗ ಅಲ್ಟ್ರಾಸೌಂಡ್ ಪರೀಕ್ಷೆ ಮಾಡಲು ನಿರಾಕರಿಸಿದ್ದರು. ತಂಡದ ಮುಖ್ಯಸ್ಥ ಹಾಗೂ ರಿಝ್ವೆನಾಳ ಸೋದರ ಸಂಬಂಧಿ ಜೊತೆಯಲ್ಲಿದ್ದ ಪೊಲೀಸ್ ಕಾನ್‌ಸ್ಟೇಬಲ್ ನೆರವಿನಿಂದ ಆಕೆಯನ್ನು ಇನ್ನೆತರಡು ಆಸ್ಪತ್ರೆಗೆ ಕರೆದೊಯ್ದಿದ್ದರೂ ಅಲ್ಲಿಯೂ ಪರೀಕ್ಷೆಗೆ ನಿರಾಕರಿಸಿದ್ದರು.

ಲಕ್ನೋದ ತಬ್ಲೀಗಿ ಜಮಾಅತ್ ಮುಖ್ಯಸ್ಥ ವೌಲಾನಾ ಅನೀಸ್ ನದ್ವಿ ಅವರೂ ರಿಝ್ವಾನಾ ಗೆ ಚಿಕಿತ್ಸೆ ದೊರೆಯುವಂತೆ ಮಾಡಲು ಪ್ರಯತ್ನಿಸಿದ್ದರು. ಅವರು ಮುಖ್ಯಮಂತ್ರಿ ಆದಿತ್ಯನಾಥರ ಕಚೇರಿಯನ್ನೂ ದೂರವಾಣಿ ಮೂಲಕ ಸಂಪರ್ಕಿಸಿದ್ದರು. ಆದರೆ ಏನೂ ಪ್ರಯೋಜನವಾಗಲಿಲ್ಲ.

 ತನ್ಮಧ್ಯೆ ರಿಝ್ವಾನಾ ಗೆ ಸಣ್ಣಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಮಸ್ವರೂಪ್ ಕ್ವಾರಂಟೈನ್ ಕೇಂದ್ರದ ಅಧಿಕಾರಿಗಳು ಆಕೆಯನ್ನು ಮತ್ತೊಮ್ಮೆ ಕೊರೋನ ವೈರಸ್ ಪರೀಕ್ಷೆಗೆ ಒಳಪಡಿಸಿದ್ದಾರೆ .ಆದರೆ ಅದರ ವರದಿ ಇನ್ನೂ ರಿಝ್ವಾನಾಳ ಕೈ ಸೇರಿಲ್ಲ. ತನಗೆ ಬದುಕೇ ಸಾಕಾಗಿಬಿಟ್ಟಿದೆ,ತನ್ನನ್ನು ಮನೆಗೆ ಹೋಗಲು ಬಿಡಿ ಎಂದು ಆಕೆ ಕೇಳಿಕೊಳ್ಳುತ್ತಿದ್ದರೂ ಅದು ಯಾರ ಕಿವಿಗೂ ಬೀಳುತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News