ಕೊರೋನ ವೈರಸ್‌ಗೆ ಆಯುಷ್ ಮದ್ದು: ವಾರದೊಳಗೆ ನಾಲ್ಕು ಔಷಧಿಗಳ ಪ್ರಾಯೋಗಿಕ ಪರೀಕ್ಷೆ ಆರಂಭ

Update: 2020-05-14 15:27 GMT

ಹೊಸದಿಲ್ಲಿ, ಮೇ 14: ಮಾರಕವಾದ ಕೊರೋನ ವೈರಸ್ ಸೋಂಕಿಗೆ ಔಷಧಿ ಕಂಡುಹಿಡಿಯುವ ಪ್ರಯತ್ನದಲ್ಲಿ ಆಯುಷ್ ಸಚಿವಾಲಯ ಕೂಡಾ ಕೈಜೋಡಿಸಿದೆ. ಕೊರೋನ ವೈರಸ್ ಸೋಂಕಿನ ಚಿಕಿತ್ಸೆಗಾಗಿ ನಾಲ್ಕು ವಿಧದ ಸಾಂಪ್ರದಾಯಿಕ ಔಷಧಿ ಸಂಯೋಜನೆಗಳನ್ನು ಸಿದ್ಧಪಡಿಸಿದ್ದು, ಒಂದು ವಾರದೊಳಗೆ ಅವುಗಳ ಪ್ರಾಯೋಗಿಕ ಪರೀಕ್ಷೆ ಆರಂಭಗೊಳ್ಳಲಿದೆಯೆಂದು ಆಯುಷ್ ಸಚಿವ ಶ್ರೀಪಾದ್ ವೈ. ನಾಯಕ್ ಗುರುವಾರ ತಿಳಿಸಿದ್ದಾರೆ.

 ಆಯುಷ್ ಸಚಿವಾಲಯವು ಆಯುರ್ವೇದ, ಯೋಗ, ಪ್ರಕೃತಿಚಿಕಿತ್ಸೆ, ಸಿದ್ಧ, ಯುನಾನಿ ಹಾಗೂ ಹೊಮಿಯೋಪಥಿ ಔಷಧೀಯ ಪದ್ಧತಿಗಳ ಅಭಿವೃದ್ಧಿ ಹಾಗೂ ಸಂಶೋಧನೆಗೆ ಸಂಬಂಧಿಸಿದ ವಿಷಯಗಳನ್ನು ನೋಡಿಕೊಳ್ಳುತ್ತಿದೆ.

ಉಸಿರಾಟದ ತೊಂದರೆಗೆ ಕಾರಣವಾಗುವಂತಹ ಕೊರೋನ ವೈರಸ್ ಸೋಂಕಿಗೆ ಈವರೆಗೆ ಯಾವುದೇ ಔಷಧಿಯನ್ನು ಸಿದ್ಧಪಡಿಸಲು ಸಾಧ್ಯವಾಗದೆ ಇರುವುದರಿಂದ, ವಿಶ್ವದಾದ್ಯಂತದ ವೈದ್ಯರು ಈ ಮಾರಣಾಂತಿಕ ರೋಗದ ಚಿಕಿತ್ಸೆಗೆ ವಿವಿಧ ಔಷಧಿಗಳ ಸಂಯೋಜನೆಗಳನ್ನು ತಯಾರಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.

ಕೊರೋನ ವೈರಸ್ ಸೋಂಕು ಗುಣಪಡಿಸಲು ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯು ಒಂದು ಮಾರ್ಗವನ್ನು ಕಂಡುಹಿಡಿಯಲಿದೆಯೆಂದು ಎಂಬ ಭರವಸೆ ತನಗಿದೆಯೆಂದು ಸಚಿವರು ತಿಳಿಸಿದರು.

 ಈ ಪ್ರಾಯೋಗಿಕ ಪರೀಕ್ಷೆಗಳು ಶುಕ್ರವಾರ ಆರಂಭಗೊಳ್ಳಲಿದ್ದು, ಮುಂದಿನ ಮೂರು ತಿಂಗಳುಗಳೊಳಗೆ ಅದರ ಫಲಿತಾಂಶಗಳು ದೊರೆಯಲಿವೆ ಎಂದು ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿ(ಸಿಎಸ್‌ಐಆರ್)ಯ ಮಹಾನಿರ್ದೇಶಕ ಶೇಖರ್ ಮಾಂಡೆ ಹಾಗೂ ಆಯುಷ್ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೇಚಾ ತಿಳಿಸಿದ್ದಾರೆ. ಕೋವಿಡ್19 ಚಿಕಿತ್ಸೆಗೆ ನಾಲ್ಕು ವಿಭಿನ್ನ ಔಷಧಿ ಸಂಯೋಜನೆಗಳನ್ನು ರೂಪಿಸಲು ಸಿಎಸ್‌ಐಆರ್ ಹಾಗೂ ಆಯುಷ್ ಸಚಿವಾಲಯ ಪ್ರಯತ್ನಿಸಲಿದೆಯೆಂದು ಅವರು ಹೇಳಿರು.

ಕೋವಿಡ್-19 ರೋಗಕ್ಕೆ ಔಷಧಿ ಕಂಡುಹಿಯಲು ಆಯುಷ್ ಹಾಗೂ ಸಿಎಸ್‌ಐಆರ್‌ನ ಸಹಯೋಗವು ವಿಶಾಲವಾದ ದೃಷ್ಟಿಕೋನವನ್ನು ಹೊಂದಿದೆಯೆಂದು ಕೊಟೇಚಾ ತಿಳಿಸಿದರು. ಇದು ಜೀವಮಾನದಲ್ಲೊಮ್ಮೆ ದೊರೆಯುವ ಅವಕಾಶವಾಗಿದೆಯೆಂದು ಅವರು ತಿಳಿಸಿದರು.

‘‘ಇಂತಹ ಅಧ್ಯಯನ ನಮ್ಮ ದೇಶದಲ್ಲಿ ಎಂದೂ ನಡೆದಿಲ್ಲ. ಅಶ್ವಗಂಧ, ಯಷ್ಟಿಮಧು ಹಾಗೂ ಗುಡುಚಿ+ಪಿಪ್ಪಲಿ (ಗಿಲೋಯ್) ಹಾಗೂ ಮಲೇರಿಯಾ ರೋಗದ ಚಿಕಿತ್ಸೆಗಾಗಿ ಸಂಶೋಧಿಸಲಾದ ಆಯುಶ್-64, ಹೀಗೆ ನಾಲ್ಕು ಬಗೆಯ ಔಷಧಿ ಸಂಯೋಜನೆಗಳನ್ನು ಕೋವಿಡ್-19 ಚಿಕಿತ್ಸೆಗಾಗಿ ಬಳಸಲಾಗುವುದೆಂದು ಕೊಟೇಚಾ ತಿಳಿಸಿದ್ದಾರೆ.

ಕೊರೋನ ವೈರಸ್ ರೋಗಿಗಳ ಮೇಲೆ ಹೆಚ್ಚುವರಿ ಥೆರಪಿ ಹಾಗೂ ಮಾನದಂಡನಾತ್ಮಕ ಶುಶ್ರೂಷೆಯಲ್ಲಿ ಈ ನಾಲ್ಕು ಔಷಧಿ ಸಂಯೋಜನೆಗಳನ್ನು ಪರೀಕ್ಷಿಸಲಾಗವುದೆಂದು ಕೊಟೇಟಾ ತಿಳಿಸಿದ್ದಾರೆ.

ಆಯುರ್ವೇದವು ಸಾವಿರಾರು ವರ್ಷಗಳ ಚಿಕಿತ್ಸಾ ಪದ್ಧತಿಯಾಗಿದ್ದು, ಅದರಲ್ಲಿ ಭಾರತೀಯರಿಗೆ ವಿಶ್ವಾಸವಿರುವುದಾಗಿ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News