20 ಲಕ್ಷ ಕೋವಿಡ್-19 ಪರೀಕ್ಷೆಗಳನ್ನು ಪೂರೈಸಿದ ಭಾರತ: ಕೇಂದ್ರ ಸಚಿವ ಹರ್ಷವರ್ಧನ್
ಹೊಸದಿಲ್ಲಿ,ಮೇ 14: ದೇಶದಲ್ಲಿ ನಡೆಸಲಾದ ಕೋವಿಡ್-19 ಪರೀಕ್ಷೆಗಳ ಸಂಖ್ಯೆ ಗುರುವಾರ 20 ಲಕ್ಷಕ್ಕೆ ತಲುಪಿದೆ ಎಂದು ಇಲ್ಲಿ ಪ್ರಕಟಿಸಿದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು,ಭಾರತವು ದಿನವೊಂದಕ್ಕೆ ಒಂದು ಲಕ್ಷ ಕೋವಿಡ್ ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯವನ್ನು ಮೇ 31ಕ್ಕೆ ಮುನ್ನ ಸಾಧಿಸಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.
“ಬುಧವಾರ 90,000 ಪರೀಕ್ಷೆಗಳನ್ನು ನಡೆಸಲಾಗಿತ್ತು. ನಾವು ನಮ್ಮ ಪರೀಕ್ಷಾ ಸಾಮರ್ಥ್ಯವನ್ನು ನಿರಂತರವಾಗಿ ಹೆಚ್ಚಿಸುತ್ತಿದ್ದೇವೆ. ನಮ್ಮ ಪರೀಕ್ಷಾ ಸಾಮರ್ಥ್ಯವನ್ನು ಮೇ 31ಕ್ಕೆ ಮುನ್ನ ಒಂದು ಲಕ್ಷ ಪರೀಕ್ಷೆಗಳಿಗೆ ಹೆಚ್ಚಿಸುವುದಾಗಿ ನಾವು ಈ ಹಿಂದೆ ಹೇಳಿದ್ದೆವಾದರೂ ನಾವು ಈ ಗುರಿಯನ್ನು ಅದಕ್ಕೂ ಮುನ್ನ ಸಾಧಿಸಲಿದ್ದೇವೆ” ಎಂದು ಅವರು ಹೇಳಿದರು.
ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ(ಎನ್‌ಸಿಡಿಸಿ)ದಲ್ಲಿ ಹೊಸದಾಗಿ ಅಳವಡಿಸಲಾಗಿರುವ ಕೋವಿಡ್-19 ರಿಯಲ್ ಟೈಮ್ ಆಟೋಮೇಟೆಡ್ ಟೆಸ್ಟಿಂಗ್ ಮಷಿನ್ ಅನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು,ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ಎನ್‌ಸಿಡಿಸಿ ಕೋವಿಡ್-19 ಸ್ಯಾಂಪಲ್‌ಗಳ ಪರೀಕ್ಷೆಗಾಗಿ ದೇಶಾದ್ಯಂತ 500ಕ್ಕೂ ಅಧಿಕ ಪ್ರಯೋಗಾಲಯಗಳನ್ನು ಅಭಿವೃದ್ಧಿಗೊಳಿಸಿವೆ. ನೂತನ ಯಂತ್ರವು ಸಂಪೂರ್ಣ ಸ್ವಯಂಚಾಲಿತವಾಗಿದ್ದು,ರಾತ್ರಿಯ ವೇಳೆ ಕಾರ್ಯ ನಿರ್ವಹಿಸದಿದ್ದರೂ ದಿನವೊಂದಕ್ಕೆ 800 ಪರೀಕ್ಷೆಗಳನ್ನು ನಡೆಸಬಲ್ಲದು. ಈಗಾಗಲೇ ಈ ಸರಣಿಯ ಎರಡು ಯಂತ್ರಗಳನ್ನು ಐಸಿಎಂಆರ್-ಭುವನೇಶ್ವರ ಮತ್ತು ಪುಣೆಯ ರಾಷ್ಟ್ರೀಯ ವೈರಾಣುಶಾಸ್ತ್ರ ಸಂಸ್ಥೆಯಲ್ಲಿ ಸ್ಥಾಪಿಸಲಾಗಿದೆ. ಮೂರನೆಯದನ್ನು ಇಲ್ಲಿ ಸ್ಥಾಪಿಸಲಾಗಿದೆ. ಇನ್ನೂ ಹೆಚ್ಚಿನ ಯಂತ್ರಗಳಿಗೆ ಬೇಡಿಕೆ ಸಲ್ಲಿಸಿದ್ದು,ಅವುಗಳನ್ನು ದೇಶದ ವಿವಿಧ ಭಾಗಗಳಲ್ಲಿ ನಿಯೋಜಿಸಲಾಗುವುದು ಎಂದು ತಿಳಿಸಿದರು.