ಕೋವಿಡ್-19: ಒಂದು ವರ್ಷ ಶೇ.30 ರಷ್ಟು ಕಡಿಮೆ ವೇತನ ಪಡೆಯಲಿರುವ ರಾಷ್ಟ್ರಪತಿ ಕೋವಿಂದ್

Update: 2020-05-14 15:35 GMT

ಹೊಸದಿಲ್ಲಿ,ಮೇ 14: ಕೊರೋನ ವೈರಸ್ ವಿರುದ್ಧ ಹೋರಾಟಕ್ಕೆ ಹೆಚ್ಚು ಸಂಪನ್ಮೂಲಗಳು ಲಭ್ಯವಾಗುವಂತಾಗಲು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಒಂದು ವರ್ಷ ಶೇ.30ರಷ್ಟು ಕಡಿಮೆ ವೇತನವನ್ನು ಪಡೆಯಲಿದ್ದಾರೆ, ಜೊತೆಗೆ ಪ್ರಯಾಣ ಮತ್ತು ಸಾಂಪ್ರದಾಯಿಕ ಭೋಜನಕೂಟಗಳ ವೆಚ್ಚಗಳನ್ನು ಗಣನೀಯವಾಗಿ ತಗ್ಗಿಸಲಿದ್ದಾರೆ. ಅವರು ಮಾರ್ಚ್‌ನಲ್ಲಿ ತನ್ನ ಒಂದು ತಿಂಗಳ ವೇತನವನ್ನು ಪಿಎಂ-ಕೇರ್ಸ್ ನಿಧಿಗೆ ದೇಣಿಗೆಯಾಗಿ ನೀಡಿದ್ದರು.

ಮಿತವ್ಯಯದ ಕ್ರಮಗಳನ್ನು ಜಾರಿಗೊಳಿಸುವಂತೆ ರಾಷ್ಟ್ರಪತಿಗಳು ಸೂಚಿಸಿದ್ದಾರೆ ಎಂದು ರಾಷ್ಟ್ರಪತಿ ಭವನವು ಹೇಳಿಕೆಯಲ್ಲಿ ತಿಳಿಸಿದೆ.

ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ಬಳಸಲು ಉದ್ದೇಶಿಸಿದ್ದ ಅಧ್ಯಕ್ಷೀಯ ಲಿಮೊಸಿನ್ ಖರೀದಿಯನ್ನು ಕೈಬಿಡಲು ರಾಷ್ಟ್ರಪತಿಗಳು ನಿರ್ಧರಿಸಿದ್ದಾರೆ. ಈ ಕಾರ್ಯಕ್ರಮಗಳಲ್ಲಿ ರಾಷ್ಟ್ರಪತಿ ಭವನ ಮತ್ತು ಸರಕಾರದಲ್ಲಿಯ ಹಾಲಿ ಸಂಪನ್ಮೂಲಗಳನ್ನೇ ಬಳಸಿಕೊಳ್ಳಲಾಗುವುದು. ಕಚೇರಿ ಸಾಮಗ್ರಿಗಳು ಮತ್ತು ಇಂಧನ ಬಳಕೆಯಲ್ಲಿ ಸಾಕಷ್ಟು ಕಡಿತವನ್ನು ಮಾಡಲಾಗುವುದು. ಸುರಕ್ಷಿತ ಅಂತರ ನಿಯಮ ಪಾಲಿಸಲು ಮತ್ತು ವೆಚ್ಚವನ್ನು ಕನಿಷ್ಠಗೊಳಿಸಲು ರಾಷ್ಟ್ರಪತಿಗಳು ದೇಶಿಯ ಪ್ರವಾಸಗಳು ಮತ್ತು ಕಾರ್ಯಕ್ರಮಗಳನ್ನು ಗಣನೀಯವಾಗಿ ತಗ್ಗಿಸಲಿದ್ದಾರೆ. ಬದಲಿಗೆ ಜನರನ್ನು ತಲುಪಲು ತಂತ್ರಜ್ಞಾನವನ್ನು ಅವರು ನೆಚ್ಚಿಕೊಳ್ಳಲಿದ್ದು,ಆನ್‌ಲೈನ್ ಸಭೆಗಳಿಗೆ ಆದ್ಯತೆ ನೀಡಲಿದ್ದಾರೆ. ಗಣತಂತ್ರ ದಿನ ಮತ್ತು ಸ್ವಾತಂತ್ರ್ಯದಿನದಂತಹ ಸಾಂಪ್ರದಾಯಿಕ ಸಮಾರಂಭಗಳಲ್ಲಿ ರಾಷ್ಟ್ರಪತಿ ಭವನಕ್ಕೆ ಅತಿಥಿಗಳ ಪಟ್ಟಿಗೂ ಕತ್ತರಿ ಬೀಳಲಿದೆ. ಅಲಂಕಾರಗಳಿಗೆ ವೆಚ್ಚವನ್ನೂ ಕಡಿತಗೊಳಿಸಲಾಗುವುದು. ಔತಣ ಕೂಟಗಳಲ್ಲಿ ಆಹಾರದ ಮೆನು ಕೂಡ ಚಿಕ್ಕದಾಗಿರಲಿದೆ ಎಂದು ಹೇಳಿಕೆಯು ತಿಳಿಸಿದೆ.

ರಾಷ್ಟ್ರಪತಿಗಳ ಅಭಿಪ್ರಾಯದಲ್ಲಿ ಇವೆಲ್ಲ ಸಣ್ಣಕ್ರಮಗಳಾಗಿದ್ದರೂ ಭಾರತವನ್ನು ಸ್ವಾವಲಂಬಿಯಾಗಿಸುವ ಮತ್ತು ಕೋವಿಡ್-19ರ ಸವಾಲನ್ನೆದುರಿಸಲು ದೇಶವನ್ನು ಶಕ್ತವನ್ನಾಗಿಸುವ ಸರಕಾರದ ಗುರಿಸಾಧನೆಯಲ್ಲಿ ಮಹತ್ವದ ಕೊಡುಗೆಗಳಾಗಲಿವೆ. ಈ ಮಿತವ್ಯಯದ ಕ್ರಮಗಳಿಂದ ಹಾಲಿ ಹಣಕಾಸು ವರ್ಷದಲ್ಲಿ ರಾಷ್ಟ್ರಪತಿ ಭವನದ ಬಜೆಟ್‌ನಲ್ಲಿ ಶೇ.20ರಷ್ಟು ಉಳಿತಾಯವಾಗಲಿದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News