ಕೋವಿಡ್-19: ದಿಲ್ಲಿಯಲ್ಲಿ ಒಂದೇ ದಿನ 472 ಹೊಸ ಪ್ರಕರಣ, 8,000 ದಾಟಿದ ಒಟ್ಟು ಸಂಖ್ಯೆ

Update: 2020-05-14 15:38 GMT

ಹೊಸದಿಲ್ಲಿ,ಮೇ 14: ದಿಲ್ಲಿಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 472 ಹೊಸ ಕೊರೋನ ವೈರಸ್ ಪ್ರಕರಣಗಳು ವರದಿಯಾಗಿದ್ದು,ಇದೇ ಮೊದಲ ಬಾರಿಗೆ ಒಂದೇ ದಿನ ಇಷ್ಟೊಂದು ಪ್ರಕರಣಗಳು ದಾಖಲಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ ಈಗ 8,470ನ್ನು ತಲುಪಿದ್ದು,ಈ ಪೈಕಿ 3,045 ಜನರು ಗುಣಮುಖರಾಗಿದ್ದಾರೆ ಮತ್ತು 115 ರೋಗಿಗಳು ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ ಹೊಸದಾಗಿ ಸಾವು ವರದಿಯಾಗಿಲ್ಲ ಎಂದು ದಿಲ್ಲಿ ಸರಕಾರವು ಪ್ರಕಟಣೆಯಲ್ಲಿ ತಿಳಿಸಿದೆ.

ಬುಧವಾರ 359 ಹೊಸ ಪ್ರಕರಣಗಳು ದಾಖಲಾಗಿದ್ದು,20 ಜನರು ಮೃತಪಟಿದ್ದರು. 14,748 ಜನರು ತಮ್ಮ ಮನೆಗಳಲ್ಲಿ ಕ್ವಾರಂಟೈನ್‌ನಲ್ಲಿರುವುದರಿಂದ ಈ ಸಂಖ್ಯೆಗಳು ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ ಎಂದ ಅಧಿಕಾರಿಗಳು,ಮೇ 4ರಿಂದ ಲಾಕ್‌ಡೌನ್ ನಿರ್ಬಂಧಗಳ ಸಡಿಲಿಕೆಯೂ ಇದಕ್ಕೆ ತನ್ನ ಕೊಡುಗೆ ಸಲ್ಲಿಸುತ್ತಿದೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.

ಪ್ರಕರಣಗಳಲ್ಲಿ ಏರಿಕೆಯ ನಡುವೆಯೇ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು,ಸಾರ್ವಜನಿಕ ಸಾರಿಗೆ ಬಸ್‌ಗಳು ಮತ್ತು ಮೆಟ್ರೋ ರೈಲು ಸೇವೆಗಳ ಪುನರಾರಂಭ ಜನರ ಆದ್ಯತೆಯ ಬೇಡಿಕೆಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ದಿಲ್ಲಿಯು ಮಹಾರಾಷ್ಟ್ರ,ಗುಜರಾತ್ ಮತ್ತು ತಮಿಳುನಾಡುಗಳ ನಂತರ ಅತ್ಯಂತ ಹೆಚ್ಚಿನ ಕೋವಿಡ್ ಪ್ರಕರಣಗಳಿರುವ ರಾಜ್ಯವಾಗಿದೆ. ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗುವ ದರ 10 ದಿನಗಳಾಗಿದ್ದು,ಇದು ರಾಷ್ಟ್ರೀಯ ಸರಾಸರಿಗೆ ಸಮವಾಗಿದೆ.

 ಗಮನಾರ್ಹ ಅಂಶವೆಂದರೆ ದೇಶದ ಇತರ ಭಾಗಗಳಲ್ಲಿ ಕೋವಿಡ್-19 ಸೋಂಕು ಹೆಚ್ಚಾಗಿ 50 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರಲ್ಲಿ ಕಂಡು ಬರುತ್ತಿದ್ದರೆ ದಿಲ್ಲಿಯಲ್ಲಿ 50 ವರ್ಷಕ್ಕಿಂತ ಕಡಿಮೆ ಪ್ರಾಯದವರು ಸೋಂಕಿಗೆ ಹೆಚ್ಚಾಗಿ ತುತ್ತಾಗುತ್ತಿದ್ದಾರೆ. ವರದಿಯಾಗಿರುವ ಒಟ್ಟು ಪ್ರಕರಣಗಳ ಪೈಕಿ 50 ವರ್ಷಕ್ಕಿಂತ ಕಡಿಮೆ ಪ್ರಾಯದವರು ಶೇ.70ರಷ್ಟಿದ್ದರೆ,ಶೇ.15.99 ರಷ್ಟು ಜನರು 50ರಿಂದ 59 ಮತ್ತು ಶೇ.14.7ರಷ್ಟು ಜನರು 60 ವರ್ಷಕ್ಕೆ ಮೇಲ್ಪಟ್ಟವರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News