ಮತ ಎಣಿಕೆಯಲ್ಲೇ ಧೋಖಾ, ಅಭ್ಯರ್ಥಿ-ಚುನಾವಣಾಧಿಕಾರಿ ನಡುವೆ ಕೊಡುಕೊಳ್ಳುವಿಕೆ !

Update: 2020-05-14 16:11 GMT

ಹೊಸದಿಲ್ಲಿ, ಮೇ 14: ಬುಧವಾರ ಗುಜರಾತ್ ನ ಕಾನೂನು ಮತ್ತು ಶಿಕ್ಷಣ ಸಚಿವ ಭೂಪೇಂದ್ರ ಸಿಂಗ್ ಚುಡಾಸಮ ಅವರ ವಿಧಾನಸಭಾ ಚುನಾವಣಾ ಫಲಿತಾಂಶವನ್ನು ರದ್ದುಗೊಳಿಸಿದ ಗುಜರಾತ್ ಹೈಕೋರ್ಟ್ ಮತಎಣಿಕೆ ಪ್ರಕ್ರಿಯೆಯ ಕನಿಷ್ಠ 6 ಲೋಪದೋಷಗಳನ್ನು ಎತ್ತಿ ತೋರಿಸಿದೆ.

ಅಂಚೆ ಮತಗಳ ಎಣಿಕೆಯಲ್ಲಿ ಚುನಾವಣಾ ಆಯೋಗದ ಪ್ರಕ್ರಿಯೆಯ ಉಲ್ಲಂಘನೆ ಆಗಿದೆ ಎಂದು ಹೇಳಿರುವ ಹೈಕೋರ್ಟ್ ತನಗೆ ಸಲ್ಲಿಸಲಾದ ಮತಎಣಿಕೆಯ ವಿಡಿಯೋವನ್ನು 'ತಿರುಚಿದ್ದು' ಅದು 'ಅಪೂರ್ಣ' ಎಂದು ಹೇಳಿದೆ. ಅಂಚೆ ಮತಗಳ ಎಣಿಕೆಯಾಗುವ ಸಭಾಂಗಣಕ್ಕೆ ಚುಡಾಸಮ ಅವರ ಅಪರ ಆಪ್ತ ಕಾರ್ಯದರ್ಶಿ ಹಲವು ಬಾರಿ ಭೇಟಿ ನೀಡಿರುವ ದೃಶ್ಯಗಳ ಬಗ್ಗೆಯೂ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇವೆಲ್ಲವುಗಳ ಹಿಂದೆ ಚುಡಾಸಮ ಹಾಗು ಚುನಾವಣಾಧಿಕಾರಿ ಧವಳ್ ಜಾನಿ ಅವರ ನಡುವೆ  ಅನೈತಿಕ ಒಪ್ಪಂದ ಇತ್ತು ಎಂದು ಹೈಕೋರ್ಟ್ ಹೇಳಿದೆ. 

ಈ ಉಲ್ಲಂಘನೆಗಳ ಆಧಾರದಲ್ಲಿ ಹೈಕೋರ್ಟ್ ನ್ಯಾಯಾಧೀಶ ಪರೇಶ್ ಉಪಾಧ್ಯಾಯ್ ಅವರು 2017ರ ಧೊಲ್ಕ ವಿಧಾನಸಭಾ ಚುನಾವಣೆಯಲ್ಲಿ ಚುಡಾಸಮ ಗೆದ್ದ ಫಲಿತಾಂಶವನ್ನು ರದ್ದುಗೊಳಿಸಿತು. ಭ್ರಷ್ಟ ಚಟುವಟಿಕೆಗಳ ಆಧಾರದಲ್ಲಿ ಚುನಾವಣಾ ಫಲಿತಾಂಶವನ್ನು ರದ್ದುಗೊಳಿಸುವ 1951ರ ರೆಪ್ರೆಸೆಂಟೇಷನ್ ಆಫ್ ಪೀಪಲ್ ಆಕ್ಟ್ ನ 100ನೇ ವಿಧಿಯನ್ವಯ ಹೈಕೋರ್ಟ್ ಈ ತೀರ್ಪು ನೀಡಿದೆ.  ಇದು ಭಾರತದ ಚುನಾವಣಾ ಇತಿಹಾಸದಲ್ಲೇ ಅತ್ಯಂತ ಪ್ರಮುಖ ಚುನಾವಣಾ ಭ್ರಷ್ಟಾಚಾರದ ಪ್ರಕರಣಗಳಲ್ಲಿ ಒಂದು. 2017ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 182 ಸ್ಥಾನಗಳ ಪೈಕಿ 99 ಸ್ಥಾನ ಪಡೆದು ಮತ್ತೆ ಅಧಿಕಾರಕ್ಕೇರಿದರೆ ಕಾಂಗ್ರೆಸ್ 77 ಸ್ಥಾನ ಪಡೆದಿತ್ತು.

ಹೈಕೋರ್ಟ್ ನೀಡಿದ 144 ಪುಟಗಳ ತೀರ್ಪಿನ ಮುಖ್ಯಾಂಶ ಇಲ್ಲಿದೆ : 

ಧೊಲ್ಕ ಕ್ಷೇತ್ರದಲ್ಲಿ ಚುಡಾಸಮ ಕಾಂಗ್ರೆಸ್ ಅಭ್ಯರ್ಥಿ ಅಶ್ವಿನ್ ರಾಥೋಡ್ ವಿರುದ್ಧ ಕೇವಲ 327 ಮತಗಳಿಂದ ಗೆದ್ದಿದ್ದರು. ಈ ಫಲಿತಾಂಶದ ವಿರುದ್ಧ ರಾಥೋಡ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಂಚೆ ಮತ ಎಣಿಕೆಯನ್ನು ತಿರುಚಲಾಗಿದೆ ಎಂದು ರಾಥೋಡ್ ಆರೋಪಿಸಿದ್ದರು. 

ಈಗ ರಾಥೋಡ್ ಅವರ ಆರೋಪವನ್ನು ಕೋರ್ಟ್ ಒಪ್ಪಿಕೊಂಡಿದೆ. "ಚುನಾವಣಾಧಿಕಾರಿ ಜಾನಿ ಚುನಾವಣಾ ಪ್ರಕ್ರಿಯೆಯುದ್ದಕ್ಕೂ ಚುಡಸಾಮ ಅವರ ತಾಳಕ್ಕೆ ತಕ್ಕಂತೆ ನರ್ತಿಸಿ ಅವರಿಗೆ ವಿಧೇಯರಾಗಿ ವರ್ತಿಸಿದ್ದಾರೆ. ಜಾನಿ ಅಂಚೆ ಮತಗಳ ಬಗ್ಗೆ ತಪ್ಪು ಮಾಹಿತಿ ನೀಡಿದ ಅಪರಾಧ ಎಸಗಿದ್ದಾರೆ ಎಂದು ಕೋರ್ಟ್ ಹೇಳಿದೆ.  ಚುಡಾಸಮ ಹಾಗು ಜಾನಿ ಪ್ರಕಾರ ಒಟ್ಟು 1356 ಅಂಚೆ ಮತಗಳ ಪೈಕಿ 429 ತಿರಸ್ಕೃತವಾಗಿದ್ದವು. ಉಳಿದ 927 ಮತಗಳಲ್ಲಿ ರಾಥೋಡ್ ಗೆ 527 ಹಾಗು ಚುಡಾಸಮಗೆ 341 ಮತಗಳು ಬಂದಿದ್ದವು. ಆದರೆ ರಾಥೋಡ್ ಪ್ರಕಾರ ಮತ ಎಣಿಕೆಯ ದಿನ ಜಾನಿ ಅವರಿಗೆ ನೀಡಿದ ಮಾಹಿತಿ ಪ್ರಕಾರ ಒಟ್ಟು ಬಂದಿದ್ದ ಅಂಚೆ ಮತಗಳೇ 927 ಹಾಗು ಅದರಲ್ಲಿ ಯಾವ ಮತವೂ ತಿರಸ್ಕೃತವಾಗಿಲ್ಲ. ಇದು ಜಾನಿ ನೀಡಿದ ಸಹಿ ಹಾಕದ ಅಂತಿಮ ಫಲಿತಾಂಶ ಪಟ್ಟಿ ಫಾರ್ಮ್ 20ರ ಪ್ರಕಾರ ರಾಥೋಡ್ ಗೆ ಸಿಕ್ಕಿದ ಮಾಹಿತಿ.

ಆದರೆ ರಾಥೋಡ್ ಪ್ರಕಾರ ಕೆಲವು ದಿನಗಳ ಬಳಿಕ ಜಾನಿ ಇನ್ನೊಂದು ಅಂತಿಮ ಫಲಿತಾಂಶ ಪಟ್ಟಿ ಫಾರ್ಮ್ 20ನ್ನು ಅವರಿಗೆ ಕೊಟ್ಟಿದ್ದಾರೆ. ಅದರಲ್ಲಿ ಸಹಿ ಹಾಕಲಾಗಿತ್ತು. ಅದರಲ್ಲಿ 1356 ಅಂಚೆ ಮತಗಳು ಬಂದಿದ್ದು 429 ತಿರಸ್ಕೃತವಾಗಿವೆ ಎಂದು ಹೇಳಲಾಗಿತ್ತು. ಈ ಎರಡನೇ ಫಾರ್ಮ್ 20ರಲ್ಲಿ ನೀಡಿರುವ ಅಂಕಿ ಅಂಶಗಳು ತಿರುಚಲ್ಪಟ್ಟಿವೆ ಎಂದು ರಾಥೋಡ್ ಆರೋಪಿಸಿದ್ದರು. ಈಗ ಕೋರ್ಟ್ ಆ ಆರೋಪವನ್ನು ಒಪ್ಪಿಕೊಂಡಿದೆ. ಮತ ಎಣಿಕೆ ವೀಕ್ಷಕರಿಗೂ 927 ಅಂಚೆ ಮತಗಳು ಬಂದಿವೆ ಮತ್ತು ಯಾವುದೂ ತಿರಸ್ಕೃತವಾಗಿಲ್ಲ ಎಂದು ಮಾಹಿತಿ ನೀಡಲಾಗಿತ್ತು. ಅದರ ಪ್ರಕಾರ ಅಂದು ಚುನಾವಣಾ ಫಲಿತಾಂಶವನ್ನು ಪ್ರಕಟಿಸಲಾಗಿತ್ತು ಎಂದು ಕೋರ್ಟ್ ಹೇಳಿದೆ. 

ಈ 429 ಅಂಚೆ ಮತಗಳನ್ನು ಅಭ್ಯರ್ಥಿಗಳಿಗೆ ಮತ್ತು ವೀಕ್ಷಕರಿಗೆ ತೋರಿಸಲಾಗಿರಲಿಲ್ಲ. ಕೋರ್ಟ್ ಪ್ರಕಾರ ಇವುಗಳನ್ನು ಕಾನೂನು ಬಾಹಿರವಾಗಿ ತಿರಸ್ಕೃತಗೊಳಿಸಲಾಗಿತ್ತು. ಇದು ಕೋರ್ಟ್ ಪ್ರಕಾರ ಚುನಾವಣಾ ಪ್ರಕ್ರಿಯೆಯನ್ನು ತಿರುಚಿದಂತೆ ಆಗಿದೆ. 

ಹೈಕೋರ್ಟ್ ಪ್ರಕಾರ ಚುನಾವಣಾ ಆಯೋಗ ಮತ ಎಣಿಕೆ ಕುರಿತು ನೀಡಿರುವ ಸ್ಪಷ್ಟ ಮಾರ್ಗಸೂಚಿಯನ್ನು ಚುನಾವಣಾಧಿಕಾರಿ ಉಲ್ಲಂಘಿಸಿದ್ದಾರೆ. ಮತ್ತು ಈ ಉಲ್ಲಂಘನೆ ಕೇವಲ ಲೋಪದೋಷವಲ್ಲ, ಇದು ವ್ಯವಸ್ಥಿತವಾಗಿ ನಡೆದಿರುವ ಉಲ್ಲಂಘನೆ.  ನಿಯಮಗಳ ಪ್ರಕಾರ ಇವಿಎಂ ಮತ ಎಣಿಕೆಯ ಕೊನೆಯ ಎರಡು ಸುತ್ತುಗಳು ಬಾಕಿ ಇರುವಾಗಲೇ ಅಂಚೆ ಮತ ಎಣಿಕೆ ನಡೆಯಬೇಕು. ಇದು ಇವಿಎಂ ಎಣಿಕೆಯಲ್ಲಿ ಇಬ್ಬರ ಫಲಿತಾಂಶ ಟೈ ಆ ಬಳಿಕ  ಅಂಚೆ ಮತಎಣಿಕೆಯಲ್ಲಿ ಯಾವುದೇ ಅಭ್ಯರ್ಥಿ ಪರವಾಗುವಂತೆ ತಿರುಚಿಲ್ಲ ಎಂದು ಖಾತರಿಪಡಿಸಲು ಇದನ್ನು ಮಾಡಲಾಗುತ್ತದೆ. 

ಆದರೆ ಜಾನಿ ಈ ನಿಯಮವನ್ನು ಉಲ್ಲಂಘಿಸಿದ್ದಾರೆ. ಆ ದಿನ ಒಟ್ಟು 19 ಸುತ್ತುಗಳ ಇವಿಎಂ ಮತ ಎಣಿಕೆ ನಡೆದಿತ್ತು. ನಿಯಮ ಪ್ರಕಾರ 18ನೇ ಸುತ್ತಿನ ಮೊದಲು ಅಂಚೆ ಮತ ಎಣಿಕೆ ನಡೆಯಬೇಕು. 17ನೇ ಸುತ್ತು ಮುಗಿಯುವಾಗ ಚುಡಾಸಮ ಅವರು ರಾಥೋಡ್ ಗಿಂತ 3850 ಮತಗಳ ಮುನ್ನಡೆಯಲ್ಲಿದ್ದರು. ಆದರೆ ಜಾನಿ ನಿಯಮ ಪ್ರಕಾರ ಆಗಲೇ ಅಂಚೆ ಮತ ಎಣಿಕೆ ಮಾಡದೆ ಇವಿಎಂ ಮತ ಎಣಿಕೆ ಮುಗಿದ ಮೇಲೆಯೇ ಅದನ್ನು ಮಾಡಿದರು. ಆಗ ಚುಡಾಸಾಮ ಅವರ ಮುನ್ನಡೆ 514 ಮತಗಳಿಗೆ ಇಳಿದಿತ್ತು.  ಇದು ಚುಡಾಸಮ ಪರ ಜಾನಿ ಮಾಡಿದ ಮೊದಲ ಪಕ್ಷಪಾತ. ಅಂಚೆ ಮತಗಳ ಪೈಕಿ 429 ಮತಗಳ ಎಣಿಕೆ ಬಾಕಿ ಇದ್ದಾಗ ಚುಡಾಸಮ ಅವರ ಮುನ್ನಡೆ 327ಕ್ಕೆ ಇಳಿದಿತ್ತು. ಆಗ ಫಲಿತಾಂಶ ಯಾವುದೇ ಕಡೆ ವಾಲುವ ಸಾಧ್ಯತೆ ಇತ್ತು. ಆದರೆ ಜಾನಿ ಉಳಿದ 429 ಮತಗಳನ್ನು ತಿರಸ್ಕರಿಸಿಬಿಟ್ಟರು. 

ಈಗ ಚುಡಾಸಮ ಜಯದ ಅಂತರ 327 ಮತಗಳು. ನಿಯಮಗಳ ಪ್ರಕಾರ ಇವಿಎಂ ಮತಗಳ ವಿಜಯದ ಅಂತರಕ್ಕಿಂತ ಹೆಚ್ಚು ಅಂಚೆ ಮತಗಳು ಇದ್ದರೆ ಮರುಎಣಿಕೆ ಅಥವಾ ಮರುಪರಿಶೀಲನೆ ಕಡ್ಡಾಯ. ಆದರೆ ಜಾನಿ ತನ್ನ ತಿರುಚುವಿಕೆಯನ್ನು ಬಚ್ಚಿಡಲು ಈ ಪ್ರಕ್ರಿಯೆಯನ್ನೂ ಪಾಲಿಸಲಿಲ್ಲ. 

ಕೋರ್ಟ್ ಗೆ ಸಲ್ಲಿಸಿದ ಮತ ಎಣಿಕೆಯ ವಿಡಿಯೋ ಕೂಡ ತಿರುಚಲ್ಪಟ್ಟಿದ್ದು ಅಪೂರ್ಣವಾಗಿದೆ ಎಂದು ಅದು ಹೇಳಿದೆ. ವಿಡಿಯೋವನ್ನು ಅಂಚೆ ಮತಗಳ ಸಂಖ್ಯೆಯನ್ನು ಬಿಳಿ ಬೋರ್ಡ್ ನಲ್ಲಿ ಬರೆದು ತೋರಿಸುವ ಹಂತದಲ್ಲೇ ನಿಲ್ಲಿಸಲಾಗಿತ್ತು.  ಈ ಸಂದರ್ಭದಲ್ಲಿ ಎಣಿಕೆ ನಡೆಯುತ್ತಿದ್ದ ಹಾಲ್ ಗೆ ಚುಡಾಸಮ ಅವರ ಆಪ್ತ ಕಾರ್ಯದರ್ಶಿ ಹಲವು ಬಾರಿ ಕಾನೂನು ಬಾಹಿರವಾಗಿ ಬಂದಿರುವುದನ್ನು ಕೋರ್ಟ್ ಗಮನಿಸಿದೆ. ಇದನ್ನು  ‘ಬೂತ್ ಅಪಹರಣ’ ಪ್ರಕರಣವಾಗಿಯೂ ತನಿಖೆ ನಡೆಸಬಹುದು ಎಂದು ಕೋರ್ಟ್ ಹೇಳಿದೆ. 

ಕೋರ್ಟ್ ತಿರಸ್ಕೃತ ಅಂಚೆ ಮತಗಳನ್ನು ತಾನು ನೋಡಬೇಕೆ ಎಂದು ಕೇಳಿದಾಗ ಜಾನಿ ಹಾಗು ಚುಡಾಸಮ ಆಕ್ಷೇಪಿಸಿದ್ದನ್ನೂ ಕೋರ್ಟ್ ಪರಿಗಣಿಸಿದೆ.  ಚುಡಾಸಮ ಆಕ್ಷೇಪ ವ್ಯಕ್ತಪಡಿಸುವುದು ಸಹಜ. ಆದರೆ ಜಾನಿಗೆ ಯಾವ ಸಮಸ್ಯೆಯಿತ್ತು?. ಇದರರ್ಥ ಜಾನಿ ಆಗಲೇ ಚುಡಾಸಮ ಪರ ಇದ್ದರು. ಇದು ಅವರಿಬ್ಬರ ನಡುವೆ ಅನೈತಿಕ ಒಪ್ಪಂದ ಇದ್ದಿದ್ದರ ಸಂಕೇತ ಎಂದು ಕೋರ್ಟ್ ಪರಿಗಣಿಸಿದೆ. 

ಇವರಿಬ್ಬರ ನಡುವೆ ಕೊಡುಕೊಳ್ಳುವಿಕೆ ಇತ್ತು ಎಂದು ಕೋರ್ಟ್ ಹೇಳಿದೆ. 2019ರ ಮಾರ್ಚ್ ನಿಂದಲೇ ಚುನಾವಣಾ ಆಯೋಗದಿಂದ ಶಿಸ್ತು ಕ್ರಮ ಎದುರಿಸುತ್ತಿದ್ದ ಜಾನಿ ಅದೇ ವರ್ಷ ಅಕ್ಟೊಬರ್ ನಲ್ಲಿ ಗುಜರಾತ್ ಸರಕಾರದಿಂದ ಭಡ್ತಿ ಪಡೆದಿದ್ದರು ಎಂದು ಕೋರ್ಟ್ ಗಮನಿಸಿದೆ. ಈ ಬಗ್ಗೆ ಕೋರ್ಟ್ ಕೇಳಿದಾಗ ಭಡ್ತಿಯನ್ನು ನಿಲ್ಲಿಸಲಾಗಿದೆ ಎಂದು ಮಾಹಿತಿ ನೀಡಲಾಯಿತು. ಆದರೆ ಅವರ ವಿರುದ್ಧ ನಡೆಯುತ್ತಿದ್ದ ಇಲಾಖಾ ತನಿಖೆಯನ್ನು ನಿಲ್ಲಿಸಲಾಗಿತ್ತು. 

ತನ್ನ ಮನವಿಯನ್ನು ಸುಪ್ರೀಂ ಕೋರ್ಟ್ ಆಲಿಸುವವರೆಗೆ ತೀರ್ಪನ್ನು ಕಾದಿರಿಸಬೇಕು ಎಂದು ಚುಡಾಸಮ ಮಾಡಿದ್ದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿತು. ಜೊತೆಗೆ ತನ್ನನ್ನು ವಿಜೇತ ಎಂದು ಘೋಷಿಸಬೇಕು ಎಂದು ರಾಥೋಡ್ ಮಾಡಿದ್ದ ಮನವಿಯನ್ನೂ ಅದು ಪುರಸ್ಕರಿಸಲಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News