‘ಸಿಆರ್‌ಪಿಎಫ್‌ನಿಂದ ಉದ್ದೇಶಪೂರ್ವಕ ಹತ್ಯೆ’: ಸೈನಿಕರ ಗುಂಡಿಗೆ ಬಲಿಯಾದ ಕಾಶ್ಮೀರಿ ಯುವಕನ ಕುಟುಂಬಿಕರ ಆರೋಪ

Update: 2020-05-14 17:30 GMT
ಸಾಂದರ್ಭಿಕ ಚಿತ್ರ

ಶ್ರೀನಗರ, ಮೇ 14; ಜಮ್ಮುಕಾಶ್ಮೀರದ ಬಡಗಾಮ್ ಜಿಲ್ಲೆಯಲ್ಲಿ ಬುಧವಾರ ಸಿಆರ್‌ಪಿಎಫ್ ಯೋಧನೊಬ್ಬ ಯುವಕನನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ, ಉದ್ದೇಶಪೂರ್ವಕವಾಗಿ ನಡೆದ ಕೃತ್ಯವೆಂದು ಆತನ ಕುಟುಂಬಿಕರು ಆಪಾದಿಸಿದ್ದಾರೆ.

ಮೃತ ಯುವಕನು ಬಿರ್‌ವಾ ಬಡಗಾಮ್ ಜಿಲ್ಲೆಯ ಮಖಾಮಾ ಗ್ರಾಮದ ನಿವಾಸಿ ಗುಲಾಂ ನಬಿ ಎಂಬಾತನ ಪುತ್ರ ಪೀರ್ ಮೆಹ್ರಾಜುದ್ದೀನ್ ಎಂದು ಸಿಆರ್‌ಪಿಎಫ್ ಗುರುತಿಸಿದೆ.

ಮೆಹ್ರಾಜುದ್ದೀನ್, ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಕವೂಸಾದಲ್ಲಿರುವ ಭದ್ರತಾ ಚೆಕ್‌ಪಾಯಿಂಟ್ ಬಳಿ ಸಿಆರ್‌ಪಿಎಫ್ ಯೋಧನೊಬ್ಬ ಆತನಿಗೆ ಗುಂಡಿಕ್ಕಿದ್ದನೆನ್ನಲಾಗಿದೆ. ಆತನ ಚಿಕ್ಕಪ್ಪನಾದ ಜಮ್ಮುವಿನ ಸಹಾಯಕ ಪೊಲೀಸ್ ಸಬ್‌ಇನ್ಸ್ ಪೆಕ್ಟರ್ ಗುಲಾಂ ಹಸನ್ ಶಾ ಕೂಡಾ ಕಾರಿನಲ್ಲಿದ್ದರು.

 ಎರಡು ಚೆಕ್‌ಪಾಯಿಂಟ್‌ಗಳಲ್ಲಿ ಕಾರನ್ನು ನಿಲ್ಲಿಸುವಂತೆ ಹೇಳಿದರೂ ಮೆಹ್ರಾಜುದ್ದೀನ್‌ ನಿಲ್ಲಿಸದೆ ಇದ್ದುದರಿಂದ ಯೋಧನೊಬ್ಬ ಆತನಿಗೆ ಗುಂಡಿಕ್ಕಿದನೆಂದು ಸಿಆರ್‌ಪಿಎಫ್ ಮೂಲಗಳು ತಿಳಿಸಿದ್ದವು. ಆ ಸಮಯದಲ್ಲಿ ಸೇನಾವಾಹನ ವ್ಯೂಹವೊಂದು ಹಾದುಹೋಗುತ್ತಿದ್ದುದರಿಂದ, ವಿಧ್ವಂಸಕದ ಕೃತ್ಯದ ಸಾಧ್ಯತೆಯ ಬಗ್ಗೆ ಪಡೆಗಳು ಆತಂಕಗೊಂಡಿದ್ದವು ಎಂದು ಸಿಆರ್‌ಪಿಎಫ್ ಮೂಲಗಳು ತಿಳಿಸಿವೆ.

ಆದಾಗ್ಯೂ ಆತನ ಚಿಕ್ಕಪ್ಪ ಹಾಗೂ ಜಮ್ಮುವಿನ ಸಹಾಯಕ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಗುಲಾಂ ಹಸನ್ ಶಾ ಅವರು ಯಾವುದೇ ಪ್ರತಿರೋಧ ವಿಲ್ಲದಿದ್ದರೂ ಮೆಹ್ರಾಜುದ್ದೀನ್‌ನನನ್ನು ಸಿಆರ್‌ಪಿಎಫ್ ಯೋಧ ಹತ್ಯೆಗೈದಿದ್ದಾನೆಂದು ಆರೋಪಿಸಿದ್ದಾರೆ. ಯೋಧ ಹಾರಿಸಿದ ಬುಲೆಟ್ ಕಾರಿನ ಎದುರುಗಡೆಯಿಂದಲೇ ಹಾದುಹೋಗಿದ್ದು, ಸಿಆರ್‌ಪಿಎಫ್ ನೀಡಿರುವ ಹೇಳಿಕೆ ಅಪ್ಪಟ ಸುಳ್ಳೆಂದು ಅವರು ಆರೋಪಿಸಿದ್ದಾರೆ.

‘‘ಎರಡನೆ ಚೆಕ್‌ಪಾಯಿಂಟ್‌ನಲ್ಲಿದ್ದ ಅಧಿಕಾರಿಯೊಬ್ಬರು, ಸೈನಿಕನಿಗೆ ಸನ್ನೆ ಮಾಡಿದ್ದನ್ನುಕಂಡೆ. ಆದರೆ ಏನೆಂದು ನನಗೆ ಅರ್ಥವಾಗಲಿಲ್ಲ. ಆನಂತರ ಈ ಸಿಆರ್‌ಪಿಎಫ್ ಯೋಧನು ಹಠಾತ್ತನೆ ನಮ್ಮೆಡೆಗೆ ಬಂದೂಕಿನ ಗುರಿಯಿರಿಸಿದ, ಆಗ ನಾವು ಕಾರು ನಿಲ್ಲಿಸಿದೆವು. ಕೂಡಲೇ ಆತ ನನ್ನ ಸೋದರಳಿಯನಿಗೆ ಗುಂಡಿಕ್ಕಿದ’’ ಎಂದು ಶಾ ಹೇಳುತ್ತಾರೆ.

ಮೃತ ಯುವಕ ಮೆಹ್ರಾಜುದ್ದೀನ್‌ನ ತಂದೆ ಗುಲಾಂ ನಬಿ ಶಾ ಹಾಗೂ ತಾಯಿ ಫಿರ್ದೂಸಾ ಅವರು ಅಮಾಯಕನಾದ ಮ್ಮ ಯಾವುದೇ ತಪ್ಪು ಮಾಡದೆ ಇದ್ದರೂ, ಆತನನ್ನು ಭದ್ರತಾಪಡೆಗಳು ಹತ್ಯೆಗೈದಿವೆ ಎಂದು ಆಪಾದಿಸಿದ್ದಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆತನನ್ನು ಭದ್ರತಾ ಪಡೆಗಳು ತಡೆದರು ಹಾಗೂ ಆನಂತರ ಗುಂಡಿಕ್ಕಿದರೆಂದು ಅವರು ಆಪಾದಿಸಿದ್ದಾರೆ.

ಮೆಹ್ರಾಜುದ್ದೀನ್ ಹತ್ಯೆಯ ಬಳಿಕ ಆತನ ಗ್ರಾಮದಲ್ಲಿ ಪ್ರತಿಭಟನೆ ಭುಗಿಲೆದ್ದಿತ್ತು. ತಮ್ಮ ಮೇಲೆ ಕಲ್ಲುತೂರಾಟ ನಡೆಸಿದ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಪೆಲ್ಲೆಟ್ ಗುಂಡುಗಳನ್ನು ಹಾರಿಸಿದ್ದರು ಹಾಗೂ ಅಶ್ರುವಾಯು ಶೆಲ್ ಸಿಡಿಸಿದ್ದರು. ಪ್ರತಿಭಟನೆ ಕಣಿವೆಯ ಇತರೆಡೆಗೂ ಹರಡುವುದನ್ನು ತಡೆಯಲು ಅಧಿಕಾರಿಗಳು ಮೊಬೈಲ್ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದ್ದರು. ಘರ್ಷಣೆಯಲ್ಲಿ ಹಲವರಿಗೆ ಗಾಯಗಳಾಗಿರುವುದಾಗಿ ತಿಳಿದುಬಂದಿದೆ. ಭದ್ರತಾಪಡೆಗಳ ಪೆಲ್ಲೆಟ್ ಗುಂಡು ಎಸೆತದಿಂದಾಗಿ ಕನಿಷ್ಠ ಇಬ್ಬರು ಮಹಿಳೆಯರ ಕಣ್ಣುಗಳಿಗೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಶ್ರೀನಗರದಲ್ಲಿರುವ ಮುಖ್ಯ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News