ಕೋವಿಡ್-19ರಿಂದಾಗಿ ಮಕ್ಕಳ ಸಾವಿನ ಸಂಖ್ಯೆಯಲ್ಲಿ ಏರಿಕೆ: ಯುನಿಸೆಫ್
Update: 2020-05-14 22:22 IST
ನ್ಯೂಯಾರ್ಕ್, ಮೇ 14: ಕೋವಿಡ್-19ರಿಂದಾಗಿ ಆರೋಗ್ಯ ರಕ್ಷಣೆ ವ್ಯವಸ್ಥೆಗಳು ದುರ್ಬಲಗೊಂಡು ಇತರ ದೈನಂದಿನ ಆರೋಗ್ಯ ಸೇವೆಗಳು ಲಭಿಸದೆ ಗುಣ ಹೊಂದಬಹುದಾದ ಕಾಯಿಲೆಗಳಿಂದ ಹೆಚ್ಚುವರಿಯಾಗಿ 6,000 ಮಕ್ಕಳು ಪ್ರತಿ ದಿನ ಸಾಯಬಹುದು ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಯುನಿಸೆಫ್ ಎಚ್ಚರಿಸಿದೆ.
ಕೊರೋನ ವೈರಸ್ ಸಾಂಕ್ರಾಮಿಕವು ಈಗ ಐದನೇ ತಿಂಗಳು ಪ್ರವೇಶಿಸಿದ್ದು, ಇದರ ಪರಿಣಾಮಕ್ಕೆ ಒಳಗಾಗಿರುವ ಮಕ್ಕಳಿಗೆ ಸಹಾಯ ಮಾಡುವುದಕ್ಕಾಗಿ ತನಗೆ 1.6 ಬಿಲಿಯ ಡಾಲರ್ (ಸುಮಾರು 12,100 ಕೋಟಿ ರೂಪಾಯಿ) ಅಗತ್ಯವಿದೆ ಎಂದು ಯುನಿಸೆಫ್ ಕಾರ್ಯಕಾರಿ ನಿರ್ದೇಶಕಿ ಹೆನ್ರಿಯೆಟ ಫೋರ್ ಹೇಳಿದರು.
ಕೊರೋನ ಬಿಕ್ಕಟ್ಟು ಕ್ಷಿಪ್ರವಾಗಿ ಮಕ್ಕಳ ಹಕ್ಕುಗಳ ಬಿಕ್ಕಟ್ಟು ಆಗಿ ಪರಿವರ್ತನೆಯಾಗಿದೆ ಹಾಗೂ ತುರ್ತು ಕ್ರಮವಿಲ್ಲದೆ, ಐದು ವರ್ಷಕ್ಕಿಂತ ಕೆಳಗಿನ ಇನ್ನೂ 6,000 ಮಕ್ಕಳು ಪ್ರತಿ ದಿನ ಸಾಯಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.