ವಿಶ್ವಬ್ಯಾಂಕ್‌ನಿಂದ ಭಾರತಕ್ಕೆ 1 ಶತಕೋಟಿ ಡಾಲರ್ ಸಾಮಾಜಿಕ ಸುರಕ್ಷತಾ ಪ್ಯಾಕೇಜ್

Update: 2020-05-15 17:35 GMT

ಹೊಸದಿಲ್ಲಿ, ಮೇ 15: ಕೊರೋನ ವೈರಸ್‌ಹಾವಳಿ ತಡೆಗೆ ಹೇರಲಾದ ಲಾಕ್‌ಡೌನ್‌ನಿಂದ ತೀವ್ರವಾಗಿ ಬಾಧಿತರಾದ ಬಡ ಹಾಗೂ ದುರ್ಬಲ ಕುಟುಂಬ ಗಳಿಗೆ ಸಾಮಾಜಿಕ ನೆರವನ್ನು ಒದಗಿಸುವ ಭಾರತದ ಪ್ರಯತ್ನಗಳಿಗೆ ಬೆಂಬಲವಾಗಿ ವಿಶ್ವಬ್ಯಾಂಕ್ 1 ಶತಕೋಟಿ ಡಾಲರ್ ( ಸುಮಾರು 6925 ಕೋಟಿ ರೂ.)ಗಳ ನೆರವನ್ನು ಶುಕ್ರವಾರ ಘೋಷಿಸಿದೆ.

ಭಾರತಕ್ಕೆ ವಿಶ್ವಬ್ಯಾಂಕ್ ಎರಡು ಹಂತಗಳಲ್ಲಿ ಹಣಕಾಸು ನೆರವನ್ನು ಒದಗಿಸಲಿದೆ. 2020-21ನೇ ಸಾಲಿನ ಹಣಕಾಸು ವರ್ಷಕ್ಕಾಗಿ ತಕ್ಷಣವೇ 750 ದಶಲಕ್ಷ ಡಾಲರ್ ಗಳನ್ನು ನೀಡಲಾಗುವುದು. ಎರಡನೆ ಕಂತಿನಲ್ಲಿ 2021-22ನೇ ಹಣಕಾಸು ವರ್ಷಕ್ಕಾಗಿ 250 ದಶಲಕ್ಷ ಡಾಲರ್‌ಗಳನ್ನು ಒದಗಿಸಲಾಗುವುದು ಎಂದು ವಿಶ್ವಬ್ಯಾಂಕ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಜಗತ್ತಿನಾದ್ಯಂತ ವಿವಿಧ ದೇಶಗಳು ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಯಲು ಲಾಕ್‌ಡೌನ್ ಹೇರಿವೆ. ಇದರಿಂದಾಗಿ ಆರ್ಥಿಕತೆ ಹಾಗೂ ಉದ್ಯೋಗ ಗಳು ಬಾಧಿತವಾಗಿದ್ದು, ಅದರಲ್ಲಿಯೂ ವಿಶೇಷವಾಗಿ ಅಸಂಘಟಿತ ವಲಯಗಳ ಮೇಲೆ ತೀವ್ರ ಪರಿಣಾಮವುಂಟಾಗಿದೆ. ಜಗತ್ತಿನ ಅತಿ ದೊಡ್ಡ ಲಾಕ್‌ಡೌನ್ ಹೇರಿಕೆಯ ಮೂಲಕ ಭಾರತ ಕೂಡಾ ಇದಕ್ಕೆ ಹೊರತಲ್ಲ ಎಂದು ಭಾರತದಲ್ಲಿನ ವಿಶ್ವಬಾಂಕ್‌ನ ರಾಷ್ಟ್ರೀಯ ನಿರ್ದೇಶಕ ಜುನೈದ್ ಅಹ್ಮದ್ ತಿಳಿಸಿದ್ದಾರೆ.

ದೇಶದ ಆರ್ಥಿಕ ಚಟುವಟಿಕೆಗಳಿಗೆ ಪುನಶ್ಚೇತನ ದೊರೆಯುವ ಈ ಸಮಯದಲ್ಲಿ ನಗದು ವರ್ಗಾವಣೆ ಹಾಗೂ ಆಹಾರದ ಸೌಲಭ್ಯಗಳು ಬಡ ಹಾಗೂ ದುರ್ಬಲರಿಗೆ ಸುಕ್ಷತೆ ನೀಡಲಿದೆ ಎಂದು ವಿಶ್ವಬ್ಯಾಂಕ್ ಹೇಳಿಕೆ ತಿಳಿಸಿದೆ.

ವಿಶ್ವಬ್ಯಾಂಕ್‌ನ ಮೊದಲ ಹಂತದ ಅರ್ಥಿಕ ನೆರವು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಮೂಲಕ ದೇಶಾದ್ಯಂತ ಜಾರಿಗೆ ಬರಲಿದೆ. ಸಾರ್ವಜನಿಕ ಪಡಿತರ ವ್ಯವಸ್ಥೆ ಹಾಗೂ ಚಾಲ್ತಿಯಲ್ಲಿ ರಾಷ್ಟ್ರೀಯ ಯೋಜನೆಗನ್ನು ಬಳಸಿಕೊಂಡು ಅರ್ಹರಿಗೆ ಆಹಾರ ಹಾಗೂ ನೇರ ನಗದು ವರ್ಗಾವಣೆ ನಡೆಯಲಿವೆಯೆಂದು ವಿಶ್ವಬ್ಯಾಂಕ್ ತಿಳಿಸಿದೆ.

ಇದರಿಂದಾಗಿ ದುರ್ಬಲ ವರ್ಗಗಳು ಅದರಲ್ಲೂ ವಿಶೇಷವಾಗಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಿಂದ ಹೊರಗುಳಿಯುವ ಅಪಾಯ ಎದುರಿಸುತ್ತಿರುವ ವಲಸೆ ಹಾಗೂ ಅಸಂಘಟಿತ ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದು ವಿಶ್ವಬ್ಯಾಂಕ್‌ ಹೇಳಿಕೆ ತಿಳಿಸಿದೆ. ಕೋವಿಡ್-19 ಪರಿಹಾರ ಕಾರ್ಯಗಳಲ್ಲಿ ನಿರತವಾಗಿರುವ ಕಾರ್ಯಕರ್ತರಿಗೂ ಇದು ಬಲಿಷ್ಠವಾದ ಸಾಮಾಜಿಕ ಭದ್ರತೆಯನ್ನು ಒದಗಿಸಲಿದೆ ಎಂದು ಅದು ಹೇಳಿದೆ.

ಎರಡನೆ ಹಂತದಲ್ಲಿ ಹೆಚ್ಚುವರಿ ನಗದು ಹಾಗೂ ಸ್ಥಳೀಯ ಅಗತ್ಯಗಳನ್ನು ಆವಶ್ಯಕತೆಗಳನ್ನು ಆಧರಿಸಿದ ಸೌಲಭ್ಯಗಳನ್ನು ಆರ್ಹರಿಗೆ ರಾಜ್ಯ ಸರಕಾರಗಳು ಹಾಗೂ ಸಾಮಾಜಿಕ ಸುರಕ್ಷತೆ ಪೂರೈಕೆ ವ್ಯವಸ್ಥೆಗಳ ಮೂಲಕ ತಲುಪಿಸಲಾಗುವುದು ಎಂದು ವಿಶ್ವಬ್ಯಾಂಕ್‌ನ ಪ್ರಕಟಣೆ ತಿಳಿಸಿದೆ.

ಭಾರತದ ಅರ್ಧದಷ್ಟು ಜನಸಂಖ್ಯೆ ದಿನಕ್ಕೆ 3 ಡಾಲರ್‌ಗೂ (226.47) ಕಡಿಮೆ ಹಣವನ್ನು ಸಂಪಾದಿಸುತ್ತಿದೆ ಹಾಗೂ ಬಡತನ ರೇಖೆಗೆ ತೀರಾ ಸನಿಹದಲ್ಲಿರುವುದರಿಂದ, ತನ್ನ ಈ ಸಾಮಾಜಿಕ ಸುರಕ್ಷತೆಯ ಪ್ಯಾಕೇಜ್ ಅತ್ಯಂತ ನಿರ್ಣಾಯಕವಾದುದೆಂದು ಅದು ಹೇಳಿದೆ.

 ಭಾರತದ ಬೃಹತ್ ಸಾಮಾಜಿಕ ಸುರಕ್ಷತಾ ಕಾರ್ಯಕ್ರಮಗಳು ಗ್ರಾಮೀಣ ಜನಸಂಖ್ಯೆಯನ್ನು ಆಧರಿಸಿರುವುದರಿಂದ ತಾನು ಪ್ರಕಟಿಸಿರುವ ಪ್ಯಾಕೇಜ್ ನಗರಗಳು ಹಾಗೂ ಪಟ್ಟಣ ಪ್ರದೇಶಗಳ ಬಡವರಿಗೆ ನೆರವಾಗಲಿದೆ ಎಂದು ವಿಶ್ವಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News