ವಲಸಿಗ ಕಾರ್ಮಿಕರ ಕರುಣಾಜನಕ ಸ್ಥಿತಿ ನೋಡಿ ಕಣ್ಣೀರು ತಡೆಯಲಾಗುತ್ತಿಲ್ಲ: ಮದ್ರಾಸ್ ಹೈಕೋರ್ಟ್

Update: 2020-05-16 10:38 GMT

ಚೆನ್ನೈ: "ಮಾಧ್ಯಮಗಳು ವಲಸಿಗ ಕಾರ್ಮಿಕರ ಕರುಣಾಜನಕ ಸ್ಥಿತಿಯನ್ನು ತೋರಿಸಿರುವುದನ್ನು ನೋಡಿದಾಗ ಕಣ್ಣೀರು ತಡೆಯಲಾಗುತ್ತಿಲ್ಲ, ಇದು ಮನುಕುಲದ ದರಂತವಲ್ಲದೆ ಬೇರೇನೂ ಅಲ್ಲ,'' ಎಂದು  ಕೊರೋನವೈರಸ್ ತಡೆಗಟ್ಟಲು ಹೇರಲಾಗಿರುವ ಲಾಕ್‍ಡೌನ್‍ನಿಂದಾಗಿ ದೇಶಾದ್ಯಂತ ಅತಂತ್ರರಾಗಿರುವ ಲಕ್ಷಗಟ್ಟಲೆ ವಲಸಿಗ ಕಾರ್ಮಿಕರ ಕುರಿತಂತೆ ಮದ್ರಾಸ್ ಹೈಕೋರ್ಟ್ ಪ್ರತಿಕ್ರಿಯಿಸಿದೆ.

ವಲಸಿಗ ಕಾರ್ಮಿಕರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಕ್ರಮ ಕೈಗೊಳ್ಳಲು ವಿಫಲವಾಗಿರುವುದಕ್ಕೆ ಕೇಂದ್ರ ಮತ್ತು ತಮಿಳುನಾಡು ಸರಕಾರಗಳೆರಡನ್ನೂ ತರಾಟೆಗೆ ತೆಗೆದುಕೊಂಡಿರುವ ಮದ್ರಾಸ್ ಹೈಕೋರ್ಟ್, ಸರಕಾರಗಳು ಸಮಸ್ಯೆ ಪರಿಹರಿಸಲು ಕೈಗೊಂಡ ಕ್ರಮಗಳ ಬಗ್ಗೆ ತನ್ನ ಅಸಮಾಧಾನ ವ್ಯಕ್ತಪಡಿಸಿದೆಯಲ್ಲದೆ ವಲಸಿಗರ ಸಮಸ್ಯೆ ಕುರಿತು ರಾಜ್ಯವಾರು ಅಂಕಿಅಂಶಗಳು ಬೇಕೆಂದು ಹೇಳಿದೆ.

"ತಮ್ಮ ತವರೂರುಗಳನ್ನು ತಲುಪಲು ವಲಸಿಗ ಕಾರ್ಮಿಕರು ದಿನಗಟ್ಟಲೆ ನಡೆಯುತ್ತಿರುವುದು ಹಾಗೂ ಈ ಸಂದರ್ಭ ಕೆಲವರು ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿರುವುದನ್ನು ನೋಡಿದಾಗ ಕರುಣೆ ಮೂಡುತ್ತದೆ. ಎಲ್ಲಾ ರಾಜ್ಯಗಳು ಮಾನವೀಯ ನೆಲೆಯಲ್ಲಿ ಈ ವಲಸಿಗ ಕಾರ್ಮಿಕರಿಗೆ ಸಹಾಯ ಮಾಡಬೇಕಿತ್ತು,'' ಎಂದು ನ್ಯಾಯಮೂರ್ತಿಗಳಾದ ಎನ್ ಕಿರುಬಕರನ್ ಹಾಗೂ ಆರ್ ಹೇಮಲತಾ ಹೇಳಿದರು. ಮಹಾರಾಷ್ಟ್ರದ ಔರಂಗಾಬಾದ್‍ನಲ್ಲಿ 16 ವಲಸಿಗರು ರೈಲು ಹರಿದು ಮೃತಪಟ್ಟ ಘಟನೆಯನ್ನೂ ನ್ಯಾಯಾಧೀಶರುಗಳು ಉಲ್ಲೇಖಿಸಿದರು.

ತಮಿಳುನಾಡಿನ ನೂರಾರು ವಲಸಿಗ ಕಾರ್ಮಿಕರು ಮಹಾರಾಷ್ಟ್ರದಲ್ಲಿ ಅತಂತ್ರರಾಗಿರುವ ಕುರಿತಂತೆ ದಾಖಲಾಗಿದ್ದ ಅಪೀಲಿನ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಯ ಕುರಿತಂತೆ ಮೇ 22ರಂದು ಪ್ರತಿಕ್ರಿಯೆ ನೀಡುವಂತೆ ಸೂಚಿಸಿತ್ತು.

ಇಂದು ಹೈಕೋರ್ಟ್ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಬೆನ್ನಿಗೇ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಇ ಕೆ ಪಳನಿಸ್ವಾಮಿ, ವಲಸಿಗರಿಗೆ ಅವರ ಶಿಬಿರಗಳಲ್ಲಿಯೇ ಇದ್ದು ಸರಕಾರ ಅವರಿಗೆ ಸಹಾಯ ಮಾಡಲು ಅನುಕೂಲ ಕಲ್ಪಿಸುವಂತೆ ಕೋರಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News