×
Ad

ಭಾರತ- ಅಮೆರಿಕ ಬಾಂಧವ್ಯಕ್ಕೆ ಹೆಚ್ಚಿನ ಶಕ್ತಿ: ಟ್ರಂಪ್ ಘೋಷಣೆಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ

Update: 2020-05-16 21:22 IST

ಹೊಸದಿಲ್ಲಿ, ಮೇ 16: ಕೊರೋನ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಭಾರತ ನಡೆಸುತ್ತಿರುವ ಹೋರಾಟಕ್ಕೆ ಬಲ ನೀಡಲು ವೆಂಟಿಲೇಟರ್‌ಗಳನ್ನು ಕೊಡುಗೆ ನೀಡುವ ಅಮೆರಿಕದ ಘೋಷಣೆ ಉಭಯ ದೇಶಗಳ ಬಾಂಧವ್ಯಕ್ಕೆ ಹೆಚ್ಚಿನ ಶಕ್ತಿ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾರತದಲ್ಲಿರುವ ತನ್ನ ಮಿತ್ರರಿಗೆ ಅಮೆರಿಕವು ವೆಂಟಿಲೇಟರ್‌ಗಳನ್ನು ಕೊಡುಗೆ ನೀಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಧನ್ಯವಾದಗಳು ಮಿ. ಟ್ರಂಪ್. ಸಾಂಕ್ರಾಮಿಕ ರೋಗದ ವಿರುದ್ಧದ ಈ ಹೋರಾಟವನ್ನು ನಾವೆಲ್ಲಾ ಸಂಘಟಿತರಾಗಿದ್ದುಕೊಂಡು ನಡೆಸುತ್ತಿದ್ದೇವೆ. ನಮ್ಮ ವಿಶ್ವವನ್ನು ಆರೋಗ್ಯವಂತವಾಗಿಸಲು ಮತ್ತು ಕೊರೋನ ವೈರಸ್‌ನಿಂದ ಮುಕ್ತಗೊಳಿಸಲು ಎಲ್ಲಾ ದೇಶಗಳು ತಮ್ಮಿಂದ ಸಾಧ್ಯವಾದಷ್ಟು ಪ್ರಯತ್ನ ನಡೆಸುವ ಅಗತ್ಯವಿದೆ ಎಂದು ಮೋದಿ ಟ್ವೀಟ್‌ನಲ್ಲಿ ಉತ್ತರಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭ ಟ್ರಂಪ್ ಭಾರತವನ್ನು ಹಾಗೂ ಪ್ರಧಾನಿ ಮೋದಿಯನ್ನು ಶ್ಲಾಘಿಸಿದ್ದರು. ಭಾರತ ಒಂದು ಮಹಾನ್ ದೇಶ ಮತ್ತು ನಿಮಗೆಲ್ಲಾ ತಿಳಿದಿರುವಂತೆ ಪ್ರಧಾನಿ ಮೋದಿ ನನ್ನ ಆತ್ಮೀಯ ಮಿತ್ರ. ನಾವು ಭಾರತಕ್ಕೆ ಹಲವು ವೆಂಟಿಲೇಟರ್‌ಗಳನ್ನು ಕಳಿಸಲಿದ್ದೇವೆ. ಈ ಕುರಿತು ಮೋದಿಯೊಂದಿಗೆ ಮಾತನಾಡಿದ್ದೇನೆ ಎಂದಿದ್ದರು. ಈ ಮಧ್ಯೆ ಮಾಧ್ಯಮದವರೊಂದಿಗೆ ಮಾತನಾಡಿದ್ದ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ, ಭಾರತ ಸಹಿತ ಹಲವು ದೇಶಗಳು ಅಮೆರಿಕದಿಂದ ವೆಂಟಿಲೇಟರ್‌ಗಳನ್ನು ಪಡೆಯಲಿವೆ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News