ಮಧ್ಯಪ್ರದೇಶ: ಅಪಘಾತದಲ್ಲಿ 6 ವಲಸೆ ಕಾರ್ಮಿಕರ ಸಾವು

Update: 2020-05-16 15:53 GMT

ಭೋಪಾಲ, ಮೇ 16: ಮಧ್ಯಪ್ರದೇಶದ ಸಾಗರ್-ಛತರ್‌ಪುರ ಗಡಿಪ್ರದೇಶದ ಬಳಿ ಶನಿವಾರ ಬೆಳಿಗ್ಗೆ ಟ್ರಕ್ ಮಗುಚಿ ಬಿದ್ದು ಮೂವರು ಮಹಿಳೆಯರ ಸಹಿತ 6 ವಲಸೆ ಕಾರ್ಮಿಕರು ಮೃತಪಟ್ಟಿದ್ದು 19 ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಮಹಾರಾಷ್ಟ್ರದಿಂದ ಉತ್ತರಪ್ರದೇಶಕ್ಕೆ ವಲಸೆ ಕಾರ್ಮಿಕರನ್ನು ಸಾಗಿಸುತ್ತಿದ್ದ ಟ್ರಕ್ ಶನಿವಾರ ಬೆಳಿಗ್ಗೆ ಸುಮಾರು 10 ಗಂಟೆಗೆ ಭೋಪಾಲದಿಂದ 200 ಕಿ.ಮೀ ದೂರವಿರುವ ಸಾಗರ್ ಜಿಲ್ಲೆಯಲ್ಲಿ ಮಗುಚಿ ಬಿದ್ದು ಈ ದುರಂತ ಸಂಭವಿಸಿದ್ದು ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮೃತಪಟ್ಟ ಮಹಿಳೆಯ ಬಳಿ ಶಿಶುವೊಂದು ಅಳುತ್ತಾ ಕುಳಿತಿರುವ ಮತ್ತು ಅಪಘಾತ ನಡೆದ ಸ್ಥಳದಲ್ಲಿ ಹರಿದ ರಕ್ತದ ಓಕುಳಿಯ ವೀಡಿಯೊ ದೃಶ್ಯಾವಳಿ ಮನ ಕಲಕುವಂತಿದೆ.

ಅಪಘಾತದ ಮಾಹಿತಿ ದೊರೆತ ತಕ್ಷಣ ಸಾಗರ್ ಮತ್ತು ಛತರ್‌ಪುರ ಜಿಲ್ಲೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಯ ನಿಗಾ ವಹಿಸಿದ್ದಾರೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ದುರಂತಕ್ಕೆ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News