ಮಹಾರಾಷ್ಟ್ರ: ತಮ್ಮ ಜಮೀನಿಗಾಗಿ ಕಾನೂನು ಹೋರಾಟ ನಡೆಸಿದ ಮೂವರು ದಲಿತರ ಬರ್ಬರ ಹತ್ಯೆ

Update: 2020-05-16 15:56 GMT

ಮುಂಬೈ, ಮೇ 16: ಪ್ರಬಲ ಸಮುದಾಯದವರ ಹಿಡಿತದಲ್ಲಿದ್ದ ತಮ್ಮ ಜಮೀನನ್ನು ಮರಳಿ ಪಡೆಯಲು ಎರಡು ದಶಕಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದ ದಲಿತ ಕುಟುಂಬದ ಮೂವರನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಂಗ್ವಾಡ್‌ಗಾಂವ್ ಗ್ರಾಮದಲ್ಲಿ ನಡೆದಿದೆ.

ಹತ್ಯೆಯಾದವರನ್ನು ಪರಿಶಿಷ್ಟ ಪಂಗಡವಾದ ಪರ್ದಿ ಬುಡಕಟ್ಟಿಗೆ ಸೇರಿದ ಬಾಬುಪವಾರ್ ಹಾಗೂ ಆತನ ಇಬ್ಬರು ಪುತ್ರರೆಂಬುದಾಗಿ ಗುರುತಿಸಲಾಗಿದೆ.

ಬಾಬುಪವಾರ್ ಹಾಗೂ ಆತನ ಕುಟುಂಬಕ್ಕೆ ಸೇರಿದ್ದ 3.5 ಎಕರೆ ಜಮೀನು , ಪ್ರಬಲ ಮರಾಠ ಸಮುದಾಯದ ಸಚಿನ್ ಹಾಗೂ ಹನುಮಂತ ನಿಂಬಾಳ್ಕರ್ ಅವರ ವಶದಲ್ಲಿತ್ತು. ಅದನ್ನು ಬಿಡಿಸಿಕೊಳ್ಳಲು ಬಾಬುಪವಾರ್ ಕಳೆದ ಎರಡು ದಶಕಗಳಿಂದ ಕಾನೂನು ಹೋರಾಟ ನಡೆಸುತ್ತಾ ಬಂದಿದ್ದರು. ಈ ದೀರ್ಘಕಾಲದ ಕಾನೂನು ಹೋರಾಟದ ವೇಳೆ ಪವಾರ್ ಕುಟುಂಬವನ್ನು ಪ್ರಬಲ ಸಮುದಾಯದವರು ಗ್ರಾಮದಿಂದ ಹೊರಹಾಕಿದ್ದರು. ಇದರಿಂದಾಗಿ ಆತ ತನ್ನ ಕುಟುಂಬಿಕರೊಂದಿಗೆ 40 ಕಿ.ಮೀ. ದೂರದ ಅಂಬೆಜೊಗಾಯ್‌ನಲ್ಲಿ ವಾಸವಾಗಿದ್ದನು.

ಮೇ 13ರಂದು ಬಾಬು ಪವಾರ್ ಹಾಗೂ ಆತನ ಮಕ್ಕಳು ತಮ್ಮ ಕುಟುಂಬದ 27 ಮಂದಿಯೊಂದಿಗೆ ಧೈರ್ಯ ಮಾಡಿಕೊಂಡು, ಸ್ವಗ್ರಾಮಕ್ಕೆ ಹಿಂತಿರುಗಿದ್ದರು. ಅವರ ಹಿಂತಿರುಗಿದ ಬೆನ್ನಲ್ಲೇ, ಆರೋಪಿಗಳು ತಮ್ಮ ಕುಟುಂಬದ ಹಾಗೂ ಸ್ವಜಾತಿಯ ಜನರನ್ನು ಒಗ್ಗೂಡಿಸಿಕೊಂಡು, ಪವಾರ್ ಕುಟುಂಬಿಕರ ಮೇಲೆ ಹಲ್ಲೆ ನಡೆಸಿತು. ‘‘ನಾವು ಸಂಜೆ 7:30 ಗಂಟೆಗೆ ಹಳ್ಳಿಗೆ ವಾಪಸಾದೆವು. ಆದರೆ ಒಂದುಗಂಟೆಯೊಳಗೆ ತಲವಾರು ಹಾಗೂ ಕುಡುಗೋಲುಗಳನ್ನು ಹಿಡಿದುಕೊಂಡು ಟ್ರಾಕ್ಟರ್‌ಗಳಲ್ಲಿ ಧಾವಿಸಿ ಬಂದ ಆರೋಪಿಗಳು ತಮ್ಮ ಮೇಲೆ ದಾಳಿ ನಡೆಸಿದರು. ಅವರು ಎಲ್ಲರನ್ನೂ ಕಡಿದುಕೊಲ್ಲುವವರಿದ್ದರು, ಆದರೆ ಅದೃಷ್ಟವಶಾತ್ ನಾವು ನಮ್ಮ ಹೊಲದಿಂದ ಪರಾರಿಯಾಗುವಲ್ಲಿ ಸಫಲರಾದೆವು’’ ಎಂದು ಶಿವಾಜಿ ಎಂಬಾತ ಹೇಳಿದ್ದಾನೆ.

  ಬಾಬು ಪವಾರ್ ಹಾಗೂ ಆತನ ಇಬ್ಬರು ಪುತ್ರರನ್ನು ಆರೋಪಿಗಳು ಟ್ರಾಕ್ಟರ್ ಒಂದರ ಕೆಳಗೆ ದೂಡಿದರು ಹಾಗೂ ಅವರಿಗೆ ಚೂರಿ ಹಾಗೂ ತಲವಾರುಗಳಿಂದ ಹಲವಾರು ಬಾರಿ ಇರಿದು ಕೊಂದಿದ್ದಾರೆ. ಮೂವರ ಮೃತದೇಹಗಳು ಛಿದ್ರವಿಛಿದ್ರವಾದ ಸ್ಥಿತಿಯಲ್ಲಿ ಗ್ರಾಮದ ವಿವಿಧೆಡೆ ಪತ್ತೆಯಾಗಿವೆ. ದಾಳಿಯಲ್ಲಿ ಮಹಿಳೆ ಸೇರಿದಂತೆ ಮೂವರಿಗೆ ಗಾಯಗಳಾಗಿದ್ದು, ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಪಿಗಳು, ದಾಳಿಗೊಳಗಾದವರಿಗೆ ಸೇರಿದ ಬೈಕ್ ಮತ್ತಿತರ ಸೊತ್ತುಗಳನ್ನು ಕೂಡಾ ಬೆಂಕಿ ಹಚ್ಚಿ ನಾಶಪಡಿಸಿದ್ದಾರೆ.

 ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 12 ಮಂದಿಯನ್ನು ಬಂಧಿಸಿದ್ದು ಅವರಲ್ಲಿ ಆರು ಮಂದಿ ನಾಪತ್ತೆಯಾಗಿದ್ದಾರೆ. ಗ್ರಾಮ ಸರಪಂಚ ಹಾಗೂ ಉಪಸರಪಂಚ ಸೇರಿದಂತೆ ಏಳು ಮಂದಿ ಶಂಕಿತರನ್ನು ಕೂಡಾ ಪೊಲೀರು ವಶಕ್ಕೆ ತೆಗೆದುಕೊಂಡಿದ್ದಾರೆ.

ಬಂಧಿತರ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್‌ಗಳಾದ 302 (ಕೊಲೆ) ಹಾಗೂ 307 (ಕೊಲೆ ಯತ್ನ) ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News