“ಇದು ದೇಶದ ಪಾಲಿಗೆ ದುಃಖಕರ ದಿನ”: ಖಾಸಗೀಕರಣಕ್ಕೆ ಒತ್ತು ನೀಡಿರುವ ಕೇಂದ್ರದ ನೀತಿಗೆ ಬಿಎಂಎಸ್ ಟೀಕೆ

Update: 2020-05-16 17:31 GMT
ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ,ಮೇ 16: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಪ್ರಕಟಿಸಿದ,ಕಲ್ಲಿದ್ದಲು, ಖನಿಜ, ರಕ್ಷಣಾ ಉತ್ಪಾದನೆ,ಬಾಹ್ಯಾಕಾಶ ಮತ್ತು ಅಣುಶಕ್ತಿ ಎಂಟು ಪ್ರಮುಖ ಕ್ಷೇತ್ರಗಳಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಒತ್ತು ನೀಡಿರುವ ಕೇಂದ್ರದ ನೀತಿಯನ್ನು ಕಟುವಾಗಿ ಟೀಕಿಸಿರುವ ಸಂಘ ಪರಿವಾರದ ಕಾರ್ಮಿಕ ಒಕ್ಕೂಟ ಬಿಎಂಎಸ್, ಇದು ಉದ್ಯೋಗ ಕಡಿತಕ್ಕೆ ಕಾರಣವಾಗಲಿದೆ ಎಂದು ಹೇಳಿದೆ. ಕೊರೋನ ವೈರಸ್ ಬಿಕ್ಕಟ್ಟಿನ ಸಮಯದಲ್ಲಿ ಖಾಸಗಿ ಕ್ಷೇತ್ರಗಳು ಮತ್ತು ಮಾರುಕಟ್ಟೆ ನಿಷ್ಕ್ರಿಯಗೊಂಡಿದ್ದರೆ ಸಾರ್ವಜನಿಕ ಕ್ಷೇತ್ರವು ನಿರ್ಣಾಯಕ ಪಾತ್ರವನ್ನು ವಹಿಸಿತ್ತು ಎಂದು ಅದು ಬೆಟ್ಟು ಮಾಡಿದೆ.

ನಿರ್ಮಲಾ ಸೀತಾರಾಮನ್ ಅವರ ಪ್ರಕಟಣೆಗಳ ನಾಲ್ಕನೇ ದಿನವು ಅವರ ಮೊದಲ ಮೂರು ದಿನಗಳ ಪ್ರಕಟಣೆಗಳಿಂದ ಸಂಭ್ರಮದಲ್ಲಿದ್ದ ದೇಶ ಮತ್ತು ಅದರ ಜನತೆಯ ಪಾಲಿಗೆ ದುಃಖದ ದಿನವಾಗಿದೆ ಎಂದು ಬಿಎಂಎಸ್ ಪ್ರಧಾನ ಕಾರ್ಯದರ್ಶಿ ವಿರಜೇಶ ಉಪಾಧ್ಯಾಯ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

‘ಕಾರ್ಮಿಕ ಒಕ್ಕೂಟಗಳು,ಸಾಮಾಜಿಕ ಪ್ರತಿನಿಧಿಗಳು ಮತ್ತು ಪಾಲುದಾರರೊಡನೆ ಸಮಾಲೋಚನೆ ಮತ್ತು ಮಾತುಕತೆಗೆ ಸರಕಾರವು ಹಿಂಜರಿಯುತ್ತಿರುವುದು ತನ್ನದೇ ಪರಿಕಲ್ಪನೆಗಳಲ್ಲಿ ಅದರ ಆತ್ಮವಿಶ್ವಾಸದ ಕೊರತೆಯನ್ನು ತೋರಿಸುತ್ತಿದ್ದು,ಇದು ಅತ್ಯಂತ ಖಂಡನೀಯವಾಗಿದೆ. ಹೆಚ್ಚಿನ ಈ ಕ್ಷೇತ್ರಗಳಲ್ಲಿ ಕಾರ್ಪೊರೇಟೀಕರಣ ಮತ್ತು ಖಾಸಗೀಕರಣಗಳ ವಿರುದ್ಧ ನಮ್ಮ ಕಾರ್ಮಿಕ ಒಕ್ಕೂಟಗಳು ಈಗಾಗಲೇ ಪ್ರತಿಭಟನೆಗಳನ್ನು ನಡೆಸುತ್ತಿವೆ ’ಎಂದ ಅವರು, ‘ನಮ್ಮ ನೀತಿರೂಪಕರ ಪಾಲಿಗೆ ರಚನಾತ್ಮಕ ಸುಧಾರಣೆಗಳು ಮತ್ತು ಸ್ಪರ್ಧೆ ಎಂದರೆ ಖಾಸಗೀಕರಣ ಮಾತ್ರವಾಗಿದೆ. ಆದರೆ ಸಂಕಷ್ಟದ ಸಮಯದಲ್ಲಿ ಖಾಸಗಿ ಕ್ಷೇತ್ರಗಳು ಮತ್ತು ಮಾರುಕಟ್ಟೆಗಳು ನಿಷ್ಕ್ರಿಯಗೊಂಡಿದ್ದರೆ ಸಾರ್ವಜನಿಕ ಕ್ಷೇತ್ರಗಳು ನಿರ್ಣಾಯಕ ಪಾತ್ರವನ್ನು ವಹಿಸಿದ್ದು ನಮ್ಮ ಇತ್ತೀಚಿನ ಅನುಭವವಾಗಿದೆ ’ಎಂದು ಅವರು ಹೇಳಿದ್ದಾರೆ.

ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ಸರಕಾರದ ಅನುಮತಿಯ ಅಗತ್ಯವಿಲ್ಲದೆ ವಿದೇಶಿ ನೇರ ಹೂಡಿಕೆಯ ಮಿತಿಯನ್ನು ಶೇ.49ರಿಂದ ಶೇ.74ಕ್ಕೆ ಹೆಚ್ಚಿಸಿರುವುದು ಮತ್ತು ಆರ್ಡನನ್ಸ್ ಫ್ಯಾಕ್ಟರಿ ಬೋರ್ಡ್‌ನ ಕಾರ್ಪೊರೇಟೀಕರಣ ಆಕ್ಷೇಪಾರ್ಹವಾಗಿವೆ ಎಂದು ಬಿಎಂಎಸ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News